Advertisement

ಗುರುಕುಲಗಳಿಂದ ಉತ್ತಮ ಸಮಾಜ ನಿರ್ಮಾಣ

09:33 AM Jan 29, 2019 | Team Udayavani |

ಕೊಪ್ಪ: ಆಧುನಿಕ ಶಿಕ್ಷಣದಿಂದ ಆತ್ಮಶಾಂತಿ ಸಿಗುತ್ತಿಲ್ಲ. ಹಣ ಗಳಿಕೆಯೇ ಮನುಷ್ಯನ ಧ್ಯೇಯವಲ್ಲ. ಜೀವನದ ವಿಕಾಸಕ್ಕೆ ಬೇಕಾಗುವಂತಹ ಪೂರಕ ಶಿಕ್ಷಣದ ಅಗತ್ಯತೆ ಇದ್ದು, ಅಂತಹ ಶಿಕ್ಷಣವನ್ನು ಗುರುಕುಲದಲ್ಲಿ ಪಡೆಯಬಹುದು ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಹರಿಹರಪುರ ಸಮೀಪದ ಚಿತ್ರಕೂಟದ ಪ್ರಭೋದಿನಿ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಅರ್ಧಮಂಡಲೋತ್ಸವ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಗುರುಕುಲಗಳು ಹೆಚ್ಚಾಗಬೇಕು. ಪಂಚಮುಖೀ ಶಿಕ್ಷಣಗಳಾದ ವೇದ ,ಕೃಷಿ ಯೋಗ, ವಿಜ್ಞಾನ ,ಕಲೆ ಇವುಗಳ ಶಿಕ್ಷಣ ಪಡೆದರೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ ಎಂದರು.

ಭಾರತ ಧರ್ಮ ಮತ್ತು ಸಂಸ್ಕೃತಿ ಪ್ರಧಾನವಾದ ದೇಶವಾಗಿದ್ದು, ಹಗಲು ಸೂರ್ಯ ಬೆಳಕು ನೀಡಿದರೆ ರಾತ್ರಿ ಚಂದ್ರ ಬೇಳಕು ನೀಡುತ್ತಾನೆ. ಹಾಗೆ ಧರ್ಮ ಸದಾಕಾಲ ಬೆಳಕು ನೀಡುತ್ತದೆ. ಯಾವಗಲೂ ಸತ್ಯ ಮಾತನಾಡತ್ತಾ ಧರ್ಮದ ಜೀವನ ನಡೆಸುವುದು ನಮ್ಮ ಸಂಸ್ಕೃತಿಯಾಗಿದೆ ಎಂದು ನುಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತ ವ್ಯವಸ್ಥಾ ಪ್ರಮುಖ್‌ ಮಂಗೇಶ್‌ ಭೇಂಡೆ ಮಾತನಾಡಿ, ಒಂದು ದೇಶದ ವಿಕಾಸವನ್ನು ಲೆಕ್ಕ ಹಾಕುವುದು ಆ ದೇಶದ ಶೈಕ್ಷಣಿಕ ವಿಸ್ತಾರದ ಮೇಲೆ. ಸ್ವಾತಂತ್ರ್ಯ ಬಂದಾಗ ಇದ್ದಂತಹ ಶಾಲಾಕಾಲೇಜುಗಳ ಸಂಖ್ಯೆಗೂ ಈಗಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟೆಲ್ಲಾ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಬೆಳೆದಿದ್ದರೂ ದೇಶದ ಸ್ಥಿತಿ ಭಿನ್ನವಾಗಿಲ್ಲ ಎಂದರು.

Advertisement

ಗುರುಕುಲದ ವ್ಯವಸ್ಥಾಪಕ ಉಮೇಶ್‌ರಾವ್‌ ಮಾತನಾಡಿ, ಕಳೆದ 24 ವರ್ಷಗಳಿಂದ ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ವಿಶಿಷ್ಟ ಪಂಚಮುಖೀ ಶಿಕ್ಷಣವನ್ನು ಆಹಾರ ಹಾಗೂ ವಸತಿ ಸೌಲಭ್ಯಗಳೊಂದಿಗೆ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ನೀಡುತ್ತಾ ಬರಲಾಗಿದೆ. 2019-20ನೇ ವರ್ಷವನ್ನು ಅರ್ಧಮಂಡಲೋತ್ಸವ ಎಂಬುದಾಗಿ ಆಚರಿಸಲು ತೀರ್ಮಾನಿಸಿದ್ದು, ಇದೇ ಅರ್ಧಮಂಡಲೋತ್ಸವ ಆಚರಣೆ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕರ್ನಾಟಕದ ಪ್ರಮುಖ ಸ್ಥಾನಗಳಲ್ಲಿ ‘ಗುರುಕುಲ ದರ್ಶನಂ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಗುರುಕುಲ ಶಿಕ್ಷಣದ ಪ್ರಸ್ತುತತೆಯನ್ನು ಪ್ರಚುರಪಡಿಸಲಾಗುತ್ತದೆ ಎಂದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಡಾ| ವಿ.ಆರ್‌. ಗೌರಿಶಂಕರ್‌ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಹಿಂದೂಸ್ಥಾನಿ ಗಾಯಕ ಪಂಡಿತ್‌ ವಿನಾಯಕ ತೊರವಿ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ, ವಿಆರ್‌ಎಲ್‌ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ| ವಿಜಯ ಸಂಕೇಶ್ವರ, ಕಾರ್ಯಾಧ್ಯಕ್ಷ ಬಾಳೆಹೊನ್ನೂರಿನ ಎಚ್.ಬಿ. ರಾಜಗೋಪಾಲ್‌, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಪಟ್ಟಾಭಿರಾಮನ್‌, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸೀತಾರಮ ಕೆದಿಲಾರು, ನಾರಾಯಣ ಶೇವ್ರೆ ಮುಂತಾದವರು ಉಪಸ್ಥಿತರಿದ್ದರು.

ಈಗಿನ ಶಿಕ್ಷಣ ವಿದ್ಯಾರ್ಥಿಗಳನ್ನು ಸಾಕ್ಷರರನ್ನಾಗಿ ಮಾಡುತ್ತಿವಿಯೇ ಹೊರತು ಸುಶಿಕ್ಷಿತರನ್ನಾಗಿ ಮಾಡುತ್ತಿಲ್ಲ. ಮನೆಗಳಲ್ಲಿ ಉತ್ತಮ ಶಿಕ್ಷಣ ಸಿಗಬೇಕು. ದುದೆ„ರ್ವೆಂದರೆ ಮನೆಗಳಲ್ಲಿ ಸಂಸ್ಕಾರ ಸಿಗುತ್ತಿಲ್ಲ. ಮುಂದಿನ ಪೀಳಿಗೆಗೆ ದೇಶಭಕ್ತ ನಾಗರಿಕ ನಿರ್ಮಾಣಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯಾಗಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುಕುಲ ಪದ್ದತಿ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸಿದೆ. ಆ ಮೂಲಕ ಹಿಂದೂ ಸಂಸ್ಕೃತಿಯ ಪುನರುಜ್ಜೀವನ ಕಾರ್ಯಕ್ಕೆ ಮುಂದಾಗಿದೆ
• ಮಂಗೇಶ್‌ ಭೇಂಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತ ವ್ಯವಸ್ಥಾ ಪ್ರಮುಖ್‌

Advertisement

Udayavani is now on Telegram. Click here to join our channel and stay updated with the latest news.

Next