ಚಿಕ್ಕಮಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಮತ್ತು ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ರೈತಸಂಘ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು.
ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಕಡೂರು,ತರೀಕೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸೋಮವಾರ ಬೆಳಗ್ಗೆ 6 ಗಂಟೆಗೆ ವಿವಿಧ ಸಂಘಟನೆಯ ಕಾರ್ಯಕರ್ತರು ರಸ್ತೆಗಿಳಿದುತೆರೆದಿದ್ದ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ರೈತಸಂಘ, ಕಾಂಗ್ರೆಸ್, ಜೆಡಿಎಸ್, ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳು, ಕರವೇ ಬಣ, ಕನ್ನಡಸೇನೆ, ಎಸ್‌ಡಿಪಿಐ, ಪಿಎಫ್‌ಐ, ಆಮ್ ಆದ್ಮಿ, ನವ ಕರ್ನಾಟಕ ಯುವ ಶಕ್ತಿ, ಭೂಮಿ ಮತ್ತು ವಸತಿಗಾಗಿ ಹೋರಾಟ ಸಮಿತಿ, ಸಿಪಿಐ ಎಂ.ಎಲ್, ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಂದ್‌ಗೆ ಬಂಬಲ ನೀಡಿದರು.
ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 6 ರಿಂದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ- ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಉತ್ತಮ ಸ್ಪಂದನೆ ನೀಡಿದ್ದರು. ರಾಜಕೀಯ ಪಕ್ಷ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದ ದೃಶ್ಯಗಳು ಕಂಡು ಬಂದವು.
ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರೂ ಕೆಲವು ಬಸ್‌ಗಳು ಸಂಚಾರ ನಡೆಸಿದವು. ಆಟೋ, ಟಾಕ್ಸಿ ಸಂಚಾರ ವಿರಳವಾಗಿತ್ತು. ಅಂಗಡಿ ಮುಂಗಟ್ಟು, ಹೊಟೇಲ್‌ಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆ, ಹೂವಿನ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಕೆಲವು ಖಾಸಗಿ ಬ್ಯಾಂಕ್ ಬಂದ್ ಮಾಡಿದ್ದರೆ, ಕೆಲ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಸರ್ಕಾರಿ ಕಚೇರಿ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಿದರೂ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ಬೈಕು- ಕಾರುಗಳ ಸಂಚಾರ ಎಂದಿನಂತೆ ಇತ್ತು. ಬಂದ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ನಗರದತ್ತ ಮುಖ ಮಾಡಿದ್ದರಿಂದ ಜನಸಂಚಾರ ವಿರಳವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರದ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಸಂಘಟನೆಯ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಒಟ್ಟಾರೆ ಬಂದ್‌ಗೆ ಬೆಂಬಲ ವ್ಯಕ್ತವಾಯಿತು.