ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದೇಶವ್ಯಾಪ್ತಿ ಕರೆ ನೀಡಿದ್ದ ಲಾರಿ ಮುಷ್ಕರಕ್ಕೆ ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಗತ್ಯ ವಸ್ತುಗಳ ವಾಹನಗಳು ಹೊರತು ಪಡಿಸಿ ಉಳಿದಂತೆ ರಾಜ್ಯಾದ್ಯಂತ ಸುಮಾರು ಆರು ಲಕ್ಷ ಸರಕು ಸಾಗಣೆ ಲಾರಿಗಳು ರಸ್ತೆಗಿಳಿದಿಲ್ಲ. ಹೀಗಾಗಿ ರಾಜ್ಯ ಮತ್ತು ಹೊರ ರಾಜ್ಯಗಳ ನಡುವೆ ಸರಕು ಸಾಗಣೆ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ.
ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ನೇತೃತ್ವದಲ್ಲಿ ಲಾರಿ ಮಾಲೀಕರು ಕೂಡ ನೈಸ್ ರಸ್ತೆ, ಟೋಲ್‌ಗೇಟ್‌ಗಳ ಮುಂಭಾಗ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿದದರು. ಪರಿಣಾಮ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಂಗಳೂರು-ತುಮಕೂರು ಹೆದ್ದಾರಿಯ ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್‌ನಲ್ಲಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಹೆದ್ದಾರಿಯಲ್ಲಿ 2-3 ಕಿ.ಮೀಟರ್ ಉದ್ದ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಬಳಿಕ ಲಾರಿಗಳನ್ನು ತೆರವುಗೊಳಿಸುವಂತೆ ಪೊಲೀಸರು ಮನವಿ ಮಾಡಿದರೂ ಕೆಲ ಹೊತ್ತು ತೆರವುಗೊಳಿಸಲಿಲ್ಲ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಾಹ್ನದ ವೇಳೆಗೆ ಸಂಚಾರ ದಟ್ಟಣೆ ಕಡಿಮೆಯಾಯಿತು.
ಈ ವೇಳೆ ಮಾತನಾಡಿದ ಜಿ.ಆರ್.ಷಣ್ಮುಗಪ್ಪ, ಬೆಂಗಳೂರಿನಲ್ಲಿ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ. ಡೀಸೆಲ್ ದರ ಏರಿಕೆಯಿಂದ ಸರಕು ಸಾಗಣೆ ಉದ್ಯಮಕ್ಕೆ ತೀವ್ರ ತೊಂದರೆಯಾಗಿದೆ. ಆರು ತಿಂಗಳಿಂದ ಡೀಸೆಲ್ ದರ ಇಳಿಸುವಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೋವಿಡ್‌ನಿಂದ ಸರಕು ಸಾಗಣೆ ಉದ್ಯಮಕುಸಿದಿದ್ದು, ಲಾರಿ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಡೀಸೆಲ್ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಕೇಂದ್ರ ಸರ್ಕಾರ ಸ್ಯಾಪ್ ನೀತಿ ಜಾರಿಯನ್ನು ಲಾರಿ ಮಾಲೀಕರ ಸಂಘ ವಿರೋಧಿಸಿದೆ. ವಾಹನ ಉತ್ಪಾದಕ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನೀತಿ ರೂಪಿಸಿದೆ. ಈ ಪ್ರಕಾರ 15 ವರ್ಷ ದಾಟಿದ ವಾಹನಗಳನ್ನು ಗುಜರಿಗೆ ಹಾಕಿದರೆ ಒಂದು-ಎರಡು ಲಾರಿ ಹೊಂದಿರುವ ಮಾಲೀಕರು ಬೀದಿಗೆ ಬೀಳಲಿದ್ದಾರೆ. ಒಂದು ವೇಳೆ ಈ ನೀತಿ ಜಾರಿಯಾದರೆ ಹಳೇ ವಾಹನಗಳಿಗೆ ಉತ್ತಮ ಬೆಲೆ ನಿಗದಿಪಡಿಸಬೇಕು. ಹೊಸ ವಾಹನ ಖರೀದಿಗೆ ರಿಯಾಯಿತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮಾ.5ರಂದು ಸಭೆ :
ಶುಕ್ರವಾರ ಸಾಂಕೇತಿಕವಾಗಿ ದೇಶಾದ್ಯಂತ ಒಂದು ದಿನದ ಲಾರಿ ಮುಷ್ಕರ ನಡೆಸಲಾಗಿದೆ. ಮಾ.5ರಂದು ಸಾಗಣೆದಾರರ ಸಂಘಟನೆಗಳ ಸಭೆ ಕರೆದಿದ್ದು, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುತ್ತದೆ. ಮಾ.15ರಿಂದ ದೇಶಾದ್ಯಂತ ಅನಿರ್ದಿಷ್ಠಾವಧಿ ಲಾರಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ಜಿ.ಆರ್. ಷಣ್ಮುಗಪ್ಪ ತಿಳಿಸಿದರು