ಕಾರವಾರ: ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ ಜನಸಂಖ್ಯೆ 16 ಲಕ್ಷವಿದ್ದು, ಬಹುತೇಕ ಜನರು ಮನೆಯೊಳಗಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತದ ಮನವಿ ಪಾಲಿಸಿದ್ದಾರೆ. ಇನ್ನು ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡಿದರೆ ನಾವು ಬಹುದೊಡ್ಡ ಸವಾಲು ಗೆದ್ದಂತೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಲಾಕ್‌ಡೌನ್ ಕುರಿತಂತೆ ಗುರುವಾರ ಜಿಲ್ಲೆಯ ಸ್ಥಿತಿಗತಿ ಮಾಹಿತಿ ನೀಡಿದ ಅವರು, 16 ಲಕ್ಷ ಜನಸಂಖ್ಯೆಯ ಪೈಕಿ ಬೆರಳೆಣಿಕೆಯಷ್ಟು ಜನ ಮಾತ್ರ ಹೊರಗೆ ಬಂದಿದ್ದಾರೆ. ಔಷಧಿ ಅಂಗಡಿಗಳಿಗೆ ಮತ್ತು ಆಸ್ಪತ್ರೆ, ಎಟಿಎಂ ಬಳಕೆ ಅವರು ಬಂದಿದ್ದಾರೆ. ಬಿಟ್ಟರೆ ಅಗತ್ಯ ಸೇವೆಗಳ ಮೇಲೆ ಕೆಲ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜನರ ಹೆಲ್ತ್ ಸರ್ವೇ ಸಹ ಮಾಡಿಸಿದ್ದು ಪ್ರಯೋಜನವಾಗಿದೆ. ಇದು ಜನರಲ್ಲಿ ಜಾಗೃತಿ ಮತ್ತು ಆತ್ಮವಿಶ್ವಾಸ ಮೂಡಿಸಲು ಸಹಾಯವಾಯಿತು. ಇಡೀ ಜಿಲ್ಲೆಯಲ್ಲಿ 418 ಜನರಿಗೆ ಜ್ವರವಿದ್ದು, ಅದು ಮಾಮೂಲಿ ಜ್ವರ ಎಂದು ಗೊತ್ತಾಯಿತು. ಕೋವಿಡ್ 19 ಸೋಂಕಿತರ ಸಂಖ್ಯೆ 8 ದಾಟಿಲ್ಲ. ಮೇಲಾಗಿ ಅವರ ಆರೋಗ್ಯ ಸ್ಥಿರವಾಗಿದೆ.
ಬಹುತೇಕ ವಿದೇಶದಿಂದ ಬಂದವರು ಕ್ವಾರಂಟೈನಲ್ಲಿ ಇದ್ದಾರೆ. ಭಟ್ಕಳದ 8000 ಮನೆಗಳ ಪೈಕಿ 4000 ಮನೆಗಳ ಸರ್ವೇ ಮುಗಿದಿದ್ದು, 13 ಜನರಿಗೆ ಮಾತ್ರ ಜ್ವರ ಇರುವುದು ಪತ್ತೆಯಾಯಿತು. ಈ ಜ್ವರ ಸಹ ಮಾಮೂಲಿ ಜ್ವರ. ಇದಕ್ಕೂ ಕೋವಿಡ್ 19 ವೈರಸ್‌ಗೂ ಸಂಬಂಧವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕೋವಿಡ್ 19 ತಡೆಗೆ ನಾವು ಯೋಜಿಸಿದ ಎಲ್ಲ ಯೋಜನೆಗಳು ಫಲ ನೀಡಿದಂತಾಗಿದೆ. ಜಿಲ್ಲೆಯ ಜನರಿಗೆ ಇನ್ನು 12 ದಿನಕ್ಕೆ ಬೇಕಾಗುವಷ್ಟು ದಿನಸಿ ಸಾಮಾಗ್ರಿ ನಮ್ಮ ಬಳಿಯಿದೆ. ಯಾವುದಕ್ಕೂ ಕೊರತೆಯಿಲ್ಲ ಎಂದಿರುವ ಜಿಲ್ಲಾಧಿಕಾರಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.