ಹಾವೇರಿ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಗತ್ಯವಾಗಿ ಸಂಚಾರ ಮಾಡುವವರ ಮೇಲೆ ಪೊಲೀಸರು ದಂಡ ಪ್ರಯೋಗ ಆರಂಭಿಸಿದ್ದು, ನೂರಾರು ವಾಹನಗಳನ್ನು ಸೀಜ್ ಮಾಡಿ ಬಿಸಿ ಮುಟ್ಟಿಸಿದರು.
ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದರೂ ಸೋಮವಾರ ಪೊಲೀಸರು ಅಗತ್ಯ ಬಿಗಿ ಕ್ರಮ ಕೈಗೊಂಡರು. ಅಗತ್ಯ ವಸ್ತು ಖರೀದಿ ಹೆಸರಿನಲ್ಲಿ ಬೈಕ್ ಗಳಲ್ಲಿ ಬಂದವರ ನೂರಾರು ವಾಹನಗಳನ್ನು ಬೆಳಗ್ಗೆಯೇ ವಶಪಡಿಸಿಕೊಂಡರು. ಎಲ್ಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದರು. 10 ಗಂಟೆವರೆಗೆ ನಡೆದುಕೊಂಡು ಹೋಗಲು ಅವಕಾಶ ನೀಡಿದ ಪೊಲೀಸರು, ಬಳಿಕ ಅದಕ್ಕೂ ಅವಕಾಶ ನೀಡಲಿಲ್ಲ. ಅನಗತ್ಯವಾಗಿ ಬೈಕ್‌ನಲ್ಲಿ ಸಂಚರಿಸಿದವರಿಗೆ ಲಾಠಿ ರುಚಿ ತೋರಿಸಿದರು.
10 ಗಂಟೆ ಬಳಿಕ ರಸ್ತೆಗಳು ಖಾಲಿ: ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಎಲ್ಲರನ್ನೂ ತಪಾಸಣೆ ಮಾಡಿ ಬಿಡಲಾಗುತ್ತಿದೆ. ನಗರ ಪ್ರದೇಶದ ರಸ್ತೆಗಳು ಖಾಲಿಯಾಗಿದ್ದವು. ಎಲ್ಲ ಅಂಗಡಿಗಳು ಮುಚ್ಚಿದ್ದವು. ಬಸ್ ಸಂಚಾರವೂ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ಅನವಶ್ಯಕ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. 10 ಗಂಟೆ ಬಳಿಕ ದಿನಸಿ ಅಂಗಡಿಗಳು ಬಂದ್ ಆಗಿದ್ದರಿಂದ ಜನರ ಸಂಚಾರ ಕಡಿಮೆಯಾಗಿತ್ತು. ಅಗತ್ಯ ಸೇವೆಯಲ್ಲಿದ್ದವರು ಮಾತ್ರ ಐಡಿ ಕಾರ್ಡ್ ತೋರಿಸಿ ಸಂಚರಿಸಿದರು.
ಅಂಗಡಿ, ಹೋಟೆಲ್‌ಗಳೂ ಬಂದ್: ತರಕಾರಿ, ಔಷಧ, ಹಾಲು ಹಾಗೂ ಕೆಲ ದಿನಸಿ ಅಂಗಡಿ ಬಿಟ್ಟರೆ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇದ್ದರೂ ಬಹುತೇಕ ಹೋಟೆಲ್ ಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ, ಕೆಲವರು ಊಟ, ಉಪಾಹಾರಕ್ಕೆ ಪರದಾಡಿದರು. ಅನವಶ್ಯಕ ಓಡಾಟ ನಡೆಸುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೈಕ್, ಕಾರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಸ್ತೆಗಿಳಿಯಲು ಜನರ ಹಿಂದೇಟು: ನಗರದ ಎಲ್ಲ ಒಳ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಯಾರೇ ನಗರದಿಂದ ಹೊರ ಹೋಗಬೇಕಾದರೆ ಶಹರ ಪೊಲೀಸ್ ಠಾಣೆ ದಾಟಿ ಸಿದ್ದಪ್ಪ ವೃತ್ತದ ಮೂಲಕ ಹೋಗಬೇಕು. ಪೊಲೀಸರು ತಪಾಸಣೆ ನಡೆಸುತ್ತಿರುವುದರಿಂದ ಜನರೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಮಧ್ಯಾಹ್ನದ ವೇಳೆಗೆ ಸಿದ್ದಪ್ಪ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಿಲ್ಲೆಯ ಅನೇಕ ದೇಗುಲಗಳಲ್ಲಿ ಬೆಳಿಗಿನ ಜಾವ ದೇವರಿಗೆ ಪೂಜೆ ಮಾಡಿ ಬಾಗಿಲು ಹಾಕಲಾಯಿತು. ಹೀಗಾಗಿ, ದೇವಾಲಯಗಳು ಸಹ ಭಕ್ತರಿಲ್ಲದೇ ಬಣಗುಟ್ಟಿದವು.
ಗಡಿಯಲ್ಲಿ ಬಂದೋ ಬಸ್ತ್: ಜಿಲ್ಲೆಯ ಗಡಿ ಭಾಗದಲ್ಲಿ ಹೊರ ಜಿಲ್ಲೆಗಳಿಂದ ಬರುವವರನ್ನು, ಜಿಲ್ಲೆಯಿಂದ ಪಕ್ಕದ ಜಿಲ್ಲೆಗೆ ಹೋಗುವವರನ್ನು ನಿರ್ಬಂಧಿಸಲು 9 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಹೊರಗಿನಿಂದ ಬಂದವರಿಗೆ ಅವರ ವಿಳಾಸ, ದಾಖಲೆ ಪರಿಶೀಲಿಸಿ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ.