Advertisement

ಸರಕಾರಿ ಆಸ್ಪತ್ರೆಗಳಲ್ಲಿ ಆನ್‌ಲೈನ್‌ OPD ಟೋಕನ್‌ಗೆ ಉತ್ತಮ ಸ್ಪಂದನೆ

10:11 PM Jun 17, 2023 | Team Udayavani |

ಬೆಂಗಳೂರು: ಜಿಲ್ಲಾಸ್ಪತ್ರೆಗಳಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಾರಂಭಿಸಿದ ಆನ್‌ಲೈನ್‌ ಒಪಿಡಿ ಟೋಕನ್‌ ಸೇವೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕೇವಲ 9 ತಿಂಗಳಲ್ಲಿ 9.43 ಲಕ್ಷ ರೋಗಿಗಳು ಆನ್‌ಲೈನ್‌ನಲ್ಲಿ ಟೋಕನ್‌ ಪಡೆದು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2022ರ ಸೆಪ್ಟಂಬರ್‌ ಅಂತ್ಯದಲ್ಲಿ ವೈದ್ಯರ ಭೇಟಿಗೆ ಆನ್‌ಲೈನ್‌ ಇ-ಒಪಿಡಿ ಟೋಕನ್‌ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.

Advertisement

ಜಿಲ್ಲಾಸ್ಪತ್ರೆ ಶೇ.100ರಷ್ಟು ಆನ್‌ಲೈನ್‌
ಜಿಲ್ಲಾಸ್ಪತ್ರೆಯಲ್ಲಿ ಶೇ.100ರಷ್ಟು, ತಾಲೂಕು ಆಸ್ಪತ್ರೆಯಲ್ಲಿ ಶೇ.60ರಷ್ಟು ಹಾಗೂ ಅತ್ಯಧಿಕ ರೋಗಿಗಳು ಒತ್ತಡವಿರುವ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆನ್‌ಲೈನ್‌ ಒಪಿಡಿ ಟೋಕನ್‌ ವ್ಯವಸ್ಥೆಯನ್ನು ರೋಗಿಗಳು ಬಳಸಿಕೊಳ್ಳುತ್ತಿದ್ದಾರೆ.

9.43 ಲಕ್ಷ ಆನ್‌ಲೈನ್‌ ಟೋಕನ್‌
ಇದುವರೆಗೆ 9.43 ಲಕ್ಷ ಮಂದಿ ಆನ್‌ಲೈನ್‌ ಮೂಲಕ ಒಪಿಡಿ ಸೇವೆ ಪ್ರಯೋಜನ ಪಡೆದುಕೊಂಡಿದ್ದಾರೆ. ಕೆ.ಸಿ. ಜನರಲ್‌ ಆಸ್ಪತ್ರೆ, ಜಯನಗರ ಆಸ್ಪತ್ರೆ ಹಾಗೂ ಸಿವಿ ರಾಮನ್‌ ಆಸ್ಪತ್ರೆಯಲ್ಲಿ ಒಟ್ಟಾರೆ 2.44 ಲಕ್ಷ ಮಂದಿ ಸೇವೆ ಪಡೆದುಕೊಂಡು ಆನ್‌ಲೈನ್‌ ಒಪಿಡಿ ಟೋಕನ್‌ ಬಳಕೆದಾರರ ಪಟ್ಟಿಯಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅನಂತರದ ಸ್ಥಾನದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆ, ಕಾರವಾರ ಹಾಗೂ ಮೈಸೂರು ಮೆಡಿಕಲ್‌ ಕಾಲೇಜುಗಳ ಆಸ್ಪತ್ರೆಗಳಿವೆ.

ಆನ್‌ಲೈನ್‌ ಬುಕಿಂಗ್‌ ಹೇಗೆ?
ಈಗ ಒಪಿಡಿ ಆನ್‌ಲೈನ್‌ ಬುಕಿಂಗ್‌ ಸೇವೆಯು ಆಯುಷ್ಮಾನ್‌ ಮಿಷನ್‌ ಡಿಜಿಟಲ್‌ ಅಡಿಯಲ್ಲಿ ಸೇರ್ಪಡೆಗೊಂಡಿದೆ. ಮೊಬೈಲ್‌ ಪ್ಲೇ ಸ್ಟೋರ್‌ನಲ್ಲಿ ಎಬಿಎಚ್‌ಎ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆಧಾರ್‌ ಕಾರ್ಡ್‌ ಹಾಗೂ ನಂಬರ್‌ ಜೋಡಿಸಿದ ಮೊಬೈಲ್‌ ಸಂಖ್ಯೆಯಿಂದ ಎಬಿಎಚ್‌ಎ ನಂಬರ್‌ ಜನರೇಟ್‌ ಆದ ಬಳಿಕ ಲಾಗ್‌ಇನ್‌ ಮಾಡಬೇಕು. ಅನಂತರ ನಿಮ್ಮ ಸಮೀಪದ ಜಿಲ್ಲಾಸ್ಪತ್ರೆ ಒಳಗಿನ ಆವರಣದಲ್ಲಿ ಇರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಬಳಿಕ ಆರೋಗ್ಯ ಸಮಸ್ಯೆ ವಿವರವನ್ನು ತುಂಬಿಸಿ ಮಾಹಿತಿಯನ್ನು ಆ್ಯಪ್‌ನಲ್ಲಿ ಹಂಚಿಕೊಂಡರೆ, ನೀವು ಸಂಪರ್ಕಿಸಬೇಕಾದ ವೈದ್ಯರು, ಸಮಯ ಲಭ್ಯವಾಗಲಿದೆ.

ರಾಜ್ಯಾದ್ಯಂತ ಜಿಲ್ಲಾಸ್ಪತ್ರೆ ಹಾಗೂ ಹೊರ ರೋಗಿ ವಿಭಾಗದಲ್ಲಿ 300ಕ್ಕಿಂತ ಅಧಿಕ ರೋಗಿಗಳು ಆಗಮಿಸುವ ತಾಲೂಕು ಆಸ್ಪತ್ರೆಯಲ್ಲಿ ಆನ್‌ಲೈನ್‌ ಒಪಿಡಿ ಸೇವೆಯನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ.
-ಡಾ| ವಸಂತ, ಸಹಾಯಕ ಉಪನಿರ್ದೇಶಕರು, ಇ-ಹೆಲ್ತ್‌

Advertisement

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next