Advertisement

ಆಯುರ್ವೇದಿಕ್‌ ಕಿಟ್‌ ವಿತರಣೆಗೆ ಉತ್ತಮ ಸ್ಪಂದನೆ

01:28 PM Aug 04, 2020 | mahesh |

ಶಿವಮೊಗ್ಗ: ನಗರದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ಸುರಕ್ಷಾ ಪಡೆಯಿಂದ ಮನೆ- ಮನೆಗೆ ಆಯುರ್ವೇದಿಕ್‌ ಕಿಟ್‌ ವಿತರಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್‌. ಅರುಣ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸುರಕ್ಷಾ ಪಡೆಯಿಂದ ನಗರದ ನಾಲ್ಕು ಲಕ್ಷ ಜನರಿಗೆ ಕಿಟ್‌ ವಿತರಿಸುವ ಗುರಿ ಹೊಂದಲಾಗಿದ್ದು, ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು. ಜು.29ರಿಂದ ನಗರದಲ್ಲಿ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್‌ಗಳನ್ನು ನೀಡಲಾಗುತ್ತಿದ್ದು, ಆಯುರ್ವೇದ ತಜ್ಞ ಡಾ| ಗಿರಿಧರ್‌ ಕಜೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದ ಅವರು, ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳ 82 ಬೂತ್‌ಗಳಲ್ಲಿ ಇದುವರೆಗೂ 84705 ಜನರಿಗೆ ಕಿಟ್‌ ವಿತರಿಸಲಾಗಿದೆ. ಇಂದಿನಿಂದ 2ನೇ ಹಂತದ ಕಿಟ್‌ ವಿತರಣಾ ಕಾರ್ಯ ಪ್ರಾರಂಭವಾಗಲಿದೆ ಎಂದರು.

ನಗರದಲ್ಲಿ ಆಯುರ್ವೇದ ಕಿಟ್‌ ವಿತರಣೆ ಕಾರ್ಯಕ್ರಮಕ್ಕೂ ಮುನ್ನ ಎಲ್ಲರಿಂದ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ. ಕಿಟ್‌ ವಿತರಣೆಯಲ್ಲಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಇದನ್ನು ಪಡೆಯಲಾಗುತ್ತಿದೆ. ಕಿಟ್‌ ಎಲ್ಲರಿಗೂ ತಲುಪಬೇಕೆಂಬ ಸದಾಶಯದೊಂದಿಗೆ ಮತ್ತು ಕೊಟ್ಟವರಿಗೆ ಮತ್ತೆ ಕೊಡುವುದದನ್ನು ತಪ್ಪಿಸುವ ಸಲುವಾಗಿ ಆಧಾರ್‌ ಸಂಖ್ಯೆಯನ್ನು ಕೊಡಲಾಗುತ್ತಿದೆ. ಆಧಾರ್‌ ಸಂಖ್ಯೆ ಪುನರಾವರ್ತನೆಯಾಗಲು ಸಾಧ್ಯವಿಲ್ಲ. ಇದರಿಂದ ಒಬ್ಬ ವ್ಯಕ್ತಿಯೇ ಪದೇ ಪದೇ ಕಿಟ್‌ ಪಡೆಯಲು ಮುಂದಾಗುವುದು ತಪ್ಪಲಿದೆ ಎಂದರು.

ನಮ್ಮ ಸುರಕ್ಷಾ ಪಡೆ ವಿತರಿಸುತ್ತಿರುವ ಒಂದು ಕಿಟ್‌ಗೆ 100 ರೂ. ಖರ್ಚಾಗುತ್ತಿದೆ. 4 ಲಕ್ಷ ಜನರಿಗೆ 4 ಕೋಟಿ ರೂ.ಗಳ ಅವಶ್ಯಕತೆ ಇದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೇರಿದಂತೆ 30 ಸಂಘ- ಸಂಸ್ಥೆಗಳಿಂದ ವೈಯಕ್ತಿ ಕವಾಗಿ ನಗರದ ಸಹೃದಯ ದಾನಿಗಳಿಂದ ಸಹಕಾರ ಪಡೆಯಲಾಗುತ್ತಿದೆ ಎಂದರು. ಇದುವರೆಗೂ ಒಂದು ಲಕ್ಷ ಕಿಟ್‌ ಬಂದಿದ್ದು, 10 ವಾರ್ಡ್‌ಗಳಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ. 3 ಲಕ್ಷ ಕಿಟ್‌ ಗೆ ಬೇಡಿಕೆ ಸಲ್ಲಿಸಲಾಗಿದೆ. ಅದನ್ನೂ ಸಹ ಹಂತ-ಹಂತವಾಗಿ ವಿತರಿಸಲಾಗುತ್ತಿದ್ದು, ಈ ಮುಂಚೆ ತಿಳಿಸಿದಂತೆ ಆ.5ರವರೆಗೆ ಇದ್ದ ಹಂಚಿಕೆಯ ಕಾರ್ಯವನ್ನು 14ರವರೆಗೆ ವಿಸ್ತರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್‌ ಎಸ್‌.ಎನ್‌. ಚನ್ನಬಸಪ್ಪ, ಪಾಲಿಕೆ ಸದಸ್ಯ ಜ್ಞಾನೇಶ್ವರ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್‌. ವಾಸುದೇವ್‌, ವಿಜಯೇಂದ್ರ ಸೂಲೀಕೆರೆ, ಎನ್‌.ಜಿ. ನಾಗರಾಜ್‌ ಮತ್ತಿತರರು ಇದ್ದರು.

Advertisement

ಸುರಕ್ಷಾ ಪಡೆಯ ಮಹತ್ಕಾರ್ಯಕ್ಕೆ ನಗರದ ಸಂಘ- ಸಂಸ್ಥೆಗಳು, ಸಾರ್ವಜನಿಕರು ಹಣದ ನೆರವು ನೀಡುತ್ತಿದ್ದು, ಆಸಕ್ತರು ಈ ಕಾರ್ಯಕ್ಕೆ ಸಹಕಾರ ನೀಡಬಹುದಾಗಿದೆ. ಕೋವಿಡ್‌ ಸುರಕ್ಷಾ ಪಡೆ ಖಾತೆ ಸಂಖ್ಯೆ: 119401012000290, IFSC ಸಂಖ್ಯೆ: BABOJSHBH, ಶಾಖೆ, ಬ್ಯಾಂಕ್‌ ಆಫ್‌ ಬರೋಡ, ಶಿವಮೊಗ್ಗ ಖಾತೆಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next