Advertisement

ಬಿಎಂಸಿ ಪ್ರಾರಂಭಿಸಿದ 244 ಉಚಿತ ಕೋವಿಡ್‌ ಪರೀಕ್ಷಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ

03:09 PM Dec 04, 2020 | Suhan S |

ಮುಂಬಯಿ, ಡಿ. 3: ಮುಂಬಯಿ ಮಹಾನಗರ ಪಾಲಿಕೆಯು ಪ್ರಾರಂಭಿಸಿದ 244 ಉಚಿತ ಕೋವಿಡ್‌-19 ಪರೀಕ್ಷಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವೆಂಬರ್‌ ಮೊದಲ ವಾರದಲ್ಲಿ ಉದ್ಘಾಟನೆಯಾದಾಗಿನಿಂದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಣೆಯಿಂದ ಪರೀಕ್ಷಿಸಿಕೊಂಡಿದ್ದು, ಅವರಲ್ಲಿ ಶೇ. 3ರಷ್ಟು ಮಂದಿಯಲ್ಲಿ ಕೊರನಾ ಪಾಸಿಟಿವ್‌ ದೃಢಪಟ್ಟಿದೆ.

Advertisement

ಕೋವಿಡ್‌ ರೋಗ ಲಕ್ಷಣಗಳಿರುವವರು ಅಥವಾ ಸೋಂಕಿತ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ ಯಾವುದೇ ವ್ಯಕ್ತಿ ಈ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆಗಳಿಗೆ ಒಳಗಾಗಬಹುದು. ಕ್ಲಾಸಿಕಲ್‌ ಕೋವಿಡ್‌ -19 ರೋಗಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನ್ಯುಮೋನಿಯಾ, ಉಸಿರಾಟದ ತೊಂದರೆಗಳಿದ್ದ ವ್ಯಕ್ತಿಗಳು ಹತ್ತಿರದ ಯಾವುದೇ ಕೇಂದ್ರದಲ್ಲಿ ಉಚಿತವಾಗಿ ಪರೀಕ್ಷೆಗೆ ಒಳಗಾಗಬಹುದು ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಹೇಳಿದ್ದಾರೆ.

ಕೋವಿಡ್‌ ಪರೀಕ್ಷಾ  ಸಂಖ್ಯೆಯಲ್ಲೂ ಹೆಚ್ಚಳ :

ದೈನಂದಿನ ಕೋವಿಡ್‌ ಪರೀಕ್ಷೆಯ ಸಂಖ್ಯೆ 17,000ಕ್ಕಿಂತಲೂ ಹೆಚ್ಚಳಗೊಂಡಿದ್ದು, ನ. 28ರ ವೇಳೆಗೆ ಪಾಸಿಟಿವ್‌ ಪ್ರಮಾಣವು ಶೇ. 16ರಿಂದ ಶೇ. 15ಕ್ಕೆ ಇಳಿದಿದೆ. ಆರೋಗ್ಯ ಕಾರ್ಯಕರ್ತರು ಬಿಎಂಸಿಯ ಉಪಕ್ರಮವನ್ನು ಸ್ವಾಗತಿಸಿದ್ದಾರೆ. ಉಚಿತ ಪರೀಕ್ಷೆಯನ್ನು ಒದಗಿಸುವ ಬಿಎಂಸಿ ಆಸ್ಪತ್ರೆಗಳು ದೂರದಲ್ಲಿದ್ದು, ಇನ್ನೊಂದೆಡೆ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ವೆಚ್ಚವೂ ಭರಿಸಲಾರದಷ್ಟಿದೆ. ಆದ್ದರಿಂದ ಪರೀಕ್ಷಾ ಕೇಂದ್ರಗಳು ತಮ್ಮ ಮನೆಗಳ ಸಮೀಪ ವಿರುವ ಜನರಿಗೆ ಪರಿಹಾರವನ್ನು ನೀಡುತ್ತಿದೆ ಎಂದು ಆರೋಗ್ಯ ಕಾರ್ಯಕರ್ತ ಡಾ| ರವಿಕಾಂತ್‌ ಸಿಂಗ್‌ ಹೇಳಿದ್ದಾರೆ.

ಎಲ್ಲರನ್ನು ಪರೀಕ್ಷೆಗೊಳಪಡಿಸಲು ನಿರ್ಧಾರ ಮುಂದಿನ ಹಂತದಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಸೆಕ್ಯೂರಿಟಿ ಗಾರ್ಡ್‌ಗಳು, ಡೆಲಿವರಿ ಹುಡುಗರನ್ನು ಪರೀಕ್ಷಿಸಲು ಪ್ರಾರಂಭಿಸಲಿದೆ. ಇವರು ಹೆಚ್ಚಾಗಿ ಸಾರ್ವಜನಿಕರೊಂದಿಗೆ ಬೆರೆಯುವುದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿರುತ್ತದೆ.ಈಗಾಗಲೇ ತರಕಾರಿ ಮಾರಾಟಗಾರರು, ಸಾರ್ವಜನಿಕ ವಾಹನ ಚಾಲಕರನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ತಿಳಿಸಿದ್ದಾರೆ.

Advertisement

ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಬಹುದು :  ಪರೀಕ್ಷಾ ಸೌಲಭ್ಯಗಳನ್ನು ನಾಗರಿಕರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ಮುಂಬಯಿ ಮಹಾನಗರ ಪಾಲಿಕೆಯು ತನ್ನ ಎಲ್ಲ 24 ವಾರ್ಡ್‌ಗಳಲ್ಲಿ ಕೇಂದ್ರವನ್ನು ಪ್ರಾರಂಭಿಸಿತು. ಟೋಲ್‌ ಫ್ರೀ ಸಂಖ್ಯೆ-1916ಗೆ ಕರೆ ಮಾಡುವ ಮೂಲಕ ಆಯಾಯ ಕೇಂದ್ರಗಳ ವಿಳಾಸಗಳನ್ನು ಪಡೆದು ಹೆಸರು ನೋಂದಾಯಿಸಿಕೊಳ್ಳಬಹುದು. ಇದನ್ನು ಬಿಎಂಸಿಯ ಮುಖ್ಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿದ್ದು, ಮೀಸಲಾದ ಕೋವಿಡ್‌-19 ವೆಬ್‌ಸೈಟ್‌ನಲ್ಲೂ ಮಾಹಿತಿ ಪಡೆಯಬಹುದು. ಆಯಾಯ ವಾರ್ಡ್‌ಗಳ ಕೋವಿಡ್‌ ಪರೀಕ್ಷಾ ಕೇಂದ್ರಗಳಲ್ಲಿ ಆರ್‌ಟಿ-ಪಿಸಿಆರ್‌ ಮತ್ತು ಕ್ಷಿಪ್ರ ಪ್ರತಿಜನಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next