Advertisement
ಉಳಿದಂತೆ ಸಂಸದರಾದ ಪ್ರಹ್ಲಾದ ಜೋಷಿ ಹಾಗೂ ಸುರೇಶ್ ಅಂಗಡಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಾಗಿವೆ. ಪಕ್ಷ, ಸರ್ಕಾರ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಹಿರಿಮೆಯಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕದ ಕೋಟಾದಡಿಯಲ್ಲೇ ಸಚಿವ ಸ್ಥಾನ ಪಡೆದಿದ್ದಾರೆ. ಆ ಮೂಲಕ ಮಹಿಳಾ ಪ್ರಾತಿನಿಧ್ಯವೂ ದೊರೆತಂತಾಗಿದೆ.
Related Articles
Advertisement
ಉತ್ತರ ಕರ್ನಾಟಕದ ಎಲ್ಲ ಸ್ಥಾನಗಳನ್ನೂ ಬಿಜೆಪಿ ಗೆದ್ದಿರುವುದರಿಂದ ಆ ಭಾಗದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಿದ್ದರೂ ಒಂದು ಸಚಿವ ಸ್ಥಾನವನ್ನಷ್ಟೇ ನೀಡಲಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಈ ಭಾಗಕ್ಕೆ ಮತ್ತೂಂದು ಸಚಿವ ಸ್ಥಾನ ಸಿಗಬೇಕು ಎಂಬುದು ಆ ಭಾಗದ ನಾಯಕರ ನಿರೀಕ್ಷೆ.
ಕರಾವಳಿ ಭಾಗದಲ್ಲೂ ಎಲ್ಲ ಸ್ಥಾನವನ್ನೂ ಬಿಜೆಪಿ ಗೆದ್ದಿದ್ದು, ಈ ಭಾಗದ ಸಂಸದರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹವಿದೆ. ಶೋಭಾ ಕರಂದ್ಲಾಜೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಸದಾನಂದಗೌಡರು ಕರಾವಳಿ ಮೂಲದ ವರಾದರೂ ಸದ್ಯ ಬೆಂಗಳೂರು ಪ್ರತಿನಿಧಿಸುವುದರಿಂದ ಕರಾವಳಿಗೂ ಒತ್ತು ನೀಡಬೇಕು ಎಂಬ ಮಾತುಗಳಿವೆ. ರಾಜ್ಯದ ಐದು ಪರಿಶಿಷ್ಟ ಜಾತಿ, ಎರಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿದೆ.
ಹಾಗಾಗಿ ಈ ಸಮುದಾಯದ ಒಬ್ಬ ಸಂಸದರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಸಂಪುಟ ಸೇರುವ ಮಾತು ಕೇಳಿಬಂದಿತ್ತು. ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆಯವರನ್ನು ಪರಾಭವಗೊಳಿಸಿ ಬಂಜಾರ ಸಮುದಾಯದ ಉಮೇಶ್ ಜಾಧವ್ ಅವರಿಗೂ ಮಣೆ ಹಾಕಬಹುದು ಎಂಬ ನಿರೀಕ್ಷೆ ಮೂಡಿತ್ತು. ಹಾಗಾಗಿ ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಾತಿನಿಧ್ಯ ಸಿಗುವುದೇ ಎಂಬ ನಿರೀಕ್ಷೆ ಇನ್ನೂ ಹಸಿರಾಗಿದೆ.
* ಎಂ. ಕೀರ್ತಿಪ್ರಸಾದ್