ಮೈಸೂರು: ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗು ತ್ತಿರುವುದರಿಂದ ಹರ್ಷ ಚಿತ್ತದಿಂದ ರೈತ ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಸತತ ಎರಡು ವರ್ಷಗಳ ಬರ ಪರಿಸ್ಥಿತಿ ಯಿಂದ ಕಂಗಾಲಾಗಿದ್ದ ರೈತರು ಮುಂಗಾರು ಪೂರ್ವ ಮಳೆ ಬಿದ್ದ ಕೂಡಲೇ ಜಮೀನು ಹದಗೊಳಿಸಿ ದ್ವಿದಳ ಧಾನ್ಯಗಳು, ರಾಗಿ, ಹತ್ತಿ, ಮುಸುಕಿನ ಜೋಳ ಬಿತ್ತನೆಯಲ್ಲಿ ತೊಡಗಿದ್ದು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಸಸಿ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಪ್ರಸ್ತಕ ಸಾಲಿನಲ್ಲಿ ಜಿಲ್ಲೆಯಲ್ಲಿ 4 ಲಕ್ಷದ 320 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯ ಖಾರೀಫ್ ಅಂದಾಜಿನಲ್ಲಿ ಶೇ.4ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಮುಂಗಾರು ಪೂರ್ವ ಮಳೆಯೇ ವಾಡಿಕೆ ಗಿಂತ ಹೆಚ್ಚಾಗಿ ಬಿದ್ದು ಭೂಮಿ ಚೆನ್ನಾಗಿ ಹದಗೊಂಡಿರುವುದರಿಂದ ಹೆಚ್ಚಿನ ರೈತರು ಅಲಸಂದೆ, ಹೆಸರು ಕಾಳು, ಉದ್ದು ಮೊದ ಲಾದ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುತ್ತಿದ್ದರೆ.
ಎಚ್.ಡಿ.ಕೋಟೆ ಹಾಗೂ ಪಿರಿಯಾ ಪಟ್ಟಣ ತಾಲೂಕುಗಳಲ್ಲಿ ಮುಸುಕಿನ ಜೋಳ, ಹೈಬ್ರಿಡ್ ಜೋಳ ಹಾಗೂ ಹತ್ತಿ ಬಿತ್ತನೆ ಕಂಡುಬಂದಿದೆ. ಇನ್ನು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆಯ ಲಾಗುವ ಹುಣಸೂರು, ಪಿರಿಯಾಣ ಪಟ್ಟಣ ಹಾಗೂ ಎಚ್.ಡಿ. ಕೋಟೆ ತಾಲೂಕುಗಳಲ್ಲಿ ಟ್ರೇಗಳಲ್ಲಿ ತಂಬಾಕು ಸಸಿ ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಕೃಷಿ ಇಲಾಖೆವತಿಯಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯ ಧನ ಯೋಜನೆಯಡಿ ನೀಡಲಾಗುವ ಬಿತ್ತನೆ ಬೀಜಗಳ ಸರಬರಾಜಿಗೆ ಜಿಲ್ಲೆ ಯಿಂದ ಈಗಾಗಲೇ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕರ್ನಾಟಕ ಬೀಜ ನಿಗಮಕ್ಕೆ ಅಲಸಂದೆ -620 ಕ್ವಿಂಟಾಲ್, ಉದ್ದು 345 ಕ್ವಿಂಟಾಲ್, ನೆಲಗಡಲೆ-800 ಕ್ವಿಂಟಾಲ್, ರಾಗಿ -750 ಕ್ವಿಂಟಾಲ್, ಹೆಸರು-510 ಕ್ವಿಂಟಾಲ್, ತೊಗರಿ-45 ಕ್ವಿಂಟಾಲ್, ಹೈಬ್ರಿಡ್ ಜೋಳ- 40 ಕ್ವಿಂಟಾಲ್ ಹಾಗೂ 30,245 ಕ್ವಿಂಟಾಲ್ ಬಿತ್ತನೆ ಭತ್ತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಷ್ಟ್ರೀಯ ಬೀಜ ನಿಗಮದಿಂದ ಅಲಸಂದೆ- 645 ಕ್ವಿಂಟಾಲ್, ಉದ್ದು- 460 ಕ್ವಿಂಟಾಲ್, ನೆಲಗಡಲೆ- 800 ಕ್ವಿಂಟಾಲ್ ಹಾಗೂ 10, 520 ಕ್ವಿಂಟಾಲ್ ಬಿತ್ತನೆ ಭತ್ತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಸಗೊಬ್ಬರ ದಾಸ್ತಾನು: ಖಾರೀಫ್ ಹಂಗಾಮಿಗೆ ಜಿಲ್ಲೆಗೆ ಒಟ್ಟಾರೆ 93,500 ಟನ್ ರಸಗೊಬ್ಬರ ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು, ಏಪ್ರಿಲ್ ತಿಂಗಳಿಗೆ 13,070 ಟನ್ ರಸಗೊಬ್ಬರ ಬೇಕಿದೆ. ತಂಬಾಕು ಬೆಳೆಗೆ ಬೇಕಾದ ಎಸ್‌ಒಪಿ, ಅಮೋನಿಯಂ ಸಲ್ಫೆàಟ್ ಗೊಬ್ಬರವನ್ನು ತಂಬಾಕು ಮಂಡಳಿಯೇ ಬೆಳೆಗಾರರಿಗೆ ವಿತರಿಸುತ್ತದೆ. ಉಳಿದ ರೈತರಿಗೆ ಬೇಕಾದ ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಗೊಬ್ಬರಗಳನ್ನು ಖಾಸಗಿ ಮಾರಾಟಗಾರರು ವಿವಿಧ ರಸಗೊಬ್ಬರ ತಯಾರಿಕಾ ಕಂಪನಿಗಳಿಂದ ತರಿಸಿಕೊಂಡು ರೈತರಿಗೆ ಮಾರಾಟ ಮಾಡುತ್ತಾರೆ.
ಎಚ್.ಡಿ.ಕೋಟೆ ತಾಲೂಕಿಗೆ 18,318 ಮೆಟ್ರಿಕ್ ಟನ್, ಹುಣಸೂರು ತಾಲೂಕು- 19,271 ಮೆ. ಟನ್, ಕೆ.ಆರ್.ನಗರ ತಾಲೂಕು 12,547 ಮೆ. ಟನ್, ಮೈಸೂರು ತಾಲೂಕು- 38,145 ಮೆ. ಟನ್, ನಂಜನಗೂಡು ತಾಲೂಕು- 7,992 ಮೆ. ಟನ್, ಪಿರಿಯಾಪಟ್ಟಣ ತಾಲೂಕು- 26, 804 ಮೆ. ಟನ್, ತಿ.ನರಸೀಪುರ ತಾಲೂಕು- 9,773 ಮೆಟ್ರಿಕ್ ಟನ್ ಸೇರಿದಂತೆ ಒಟ್ಟಾರೆ ಜಿಲ್ಲೆಗೆ 1,32, 949 ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.
* ಗಿರೀಶ್ ಹುಣಸೂರು