Advertisement

ಉತ್ತಮ ಮಳೆ: ರೈತರ ಮೊಗದಲ್ಲಿ ಮಂದಹಾಸ

01:05 PM May 24, 2018 | Team Udayavani |

ಅರಸೀಕೆರೆ: ತಾಲೂಕು ಸತತ ಮಳೆಯ ಕೊರತೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಬರದ ಬವಣೆಗೆ ಬೆಂಡಾಗಿ ಹೋಗಿದ್ದು, ಹೀಗಾಗಲೇ ತಾಲೂಕಿನಲ್ಲಿ ಹಲವೆಡೆಗಳಲ್ಲಿ ಪೂರ್ವ ಮುಂಗಾರು ಮಳೆ ಬಿದ್ದಿರುವ ಕಾರಣ ಸಹಜವಾಗಿ ರೈತರ ಮುಖದಲ್ಲಿ ತುಸು ನಿರಾಳತೆಯ ಮಂದಹಾಸ ಕಾಣುತ್ತಿದ್ದು, ತಾಲೂಕಿನ ವಿವಿಧೆಡೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

Advertisement

ತಾಲೂಕು ಬಯಲು ಸೀಮೆ ಪ್ರದೇಶವಾಗಿದ್ದು, ಕಳೆದ ಐದಾರು ವರ್ಷಗಳಿಂದ ಉತ್ತಮವಾದ ಮಳೆಯಿಲ್ಲದೇ ಹೊಲ, ಗದ್ದೆಗಳು ಬೆಳೆಯಿಲ್ಲದೆ ಪಾಳು ಬಿದ್ದಿದ್ದು, ತೋಟಗಳಲ್ಲಿನ ತೆಂಗು ಮತ್ತು ಅಡಿಕೆ ಮರಗಳು ತೇವಾಂಶದ ಕೊರತೆ ಹಾಗೂ ವಿವಿಧ ರೋಗಗಳ ಬಾಧೆಯಿಂದ ನರಳುತ್ತಿದ್ದು , ಇತ್ತೀಚೆಗೆ ಬಿರುಗಾಳಿ ಮಿಶ್ರಿತ ಬಿದ್ದ ಪೂರ್ವ ಮುಂಗಾರು ಮಳೆಯಿಂದ ವಾರ್ಷಿಕ ವಾಡಿಕೆ ಮಳೆಯ 110 ಮಿ.ಮಿ ಗಿಂತಲ್ಲೂ ಹೆಚ್ಚಾಗಿ 170 ಮಿ.ಮೀ ಮಳೆಯಾಗಿದ್ದು, ರೈತರ ಕೃಷಿ ಭೂಮಿ ಹಸಿರಿನಿಂದ ಕಂಗೊಳಿಸುವಂತಾಗಿದೆ. 

ಮಳೆಯ ಪ್ರಮಾಣ: ಪ್ರಸ್ತುತ ವರ್ಷದಲ್ಲಿ ಜನವರಿ ತಿಂಗಳಿಂದ ಮೇ 18 ರವರೆಗೆ ಬಿದ್ದಿರುವ ಮಳೆಯ ಪ್ರಮಾಣ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ ಪ್ರಮಾಣ 117 ಇದ್ದು, 191 ಮಿ.ಮಿ ಮಳೆಯಾಗಿದೆ. ಕಣಕಟ್ಟೆ ಹೋಬಳಿ ವಾಡಿಕೆ ಮಳೆಯ ಪ್ರಮಾಣ 84 ಮಿ.ಮಿ ಇದ್ದು, 149 ಮಿ.ಮೀ ಮಳೆಯಾಗಿದೆ.
 
ಗಂಡಸಿ ಹೋಬಳಿ ವಾಡಿಕೆ ಪ್ರಮಾಣ 122 ಮಿ.ಮೀ ಇದ್ದು, 163 ಮಿ.ಮಿ. ಮಳೆಯಾಗಿದೆ. ಬಾಣಾವರ ಹೋಬಳಿಯಲ್ಲಿ 115 ಮಿ.ಮಿ. ಇದ್ದು, 188 ಮಿ.ಮೀ ಮಳೆಯಾಗಿದೆ. ಜಾವಗಲ್‌ ಹೋಬಳಿಯಲ್ಲಿ ವಾಡಿಕೆ ಮಳೆ 116 ಮಿ.ಮೀ ಮಳೆಗಿಂತಲೂ ಹೆಚ್ಚು 192 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ತಾಲೂಕಿನಲ್ಲಿ ಪ್ರಸ್ತುತ ವರ್ಷದ ವಾಡಿಕೆ ಮಳೆ 110 ಮಿ.ಮೀ ಇದ್ದು, 170 ಮಳೆಯಾಗಿದ್ದು ಶೇಕಡ ಸರಾಸರಿ 60 ಮಿ.ಮೀ ಪ್ರಮಾಣದ ಮಳೆಯೂ ಹೆಚ್ಚು ಸುರಿಯದಿರುವುದು ತಾಲೂಕಿನ ರೈತ ಸಮುದಾಯ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ತಾಲೂಕಿನಲ್ಲಿ ಒಟ್ಟು 134.800 ಹೆಕ್ಟೇರ್‌ ಸಾಗುವಳಿ ಕೃಷಿಭೂಮಿ ಪೈಕಿಯಲ್ಲಿ ಹೀಗಾಗಲೇ 6412 ಹೆಕ್ಟೇರ್‌ ಕೃಷಿಭೂಮಿಯಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಜೋಳ, ಹೆಸರು, ಉದ್ದು, ಎಳ್ಳು, ತೊಗರಿ, ಹಲಸಂದೆ, ಮುಸುಕಿನ ಜೋಳ, ಸೂರ್ಯಕಾಂತಿ ಹಾಗೂ ಹರಳು ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಜೋಳ 1400 ಹೆಕ್ಟೇರ್‌ ಗುರಿಯಿದ್ದು, 211 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ದ್ವಿದಳ ದಾನ್ಯಗಳಾದ ಹೆಸರು ಗುರಿ 9500 ಹೆಕ್ಟೇರ್‌ ಗುರಿಯಿದ್ದು 1330 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 

ಉದ್ದು, ಗುರಿ 950 ಹೆಕ್ಟೇರ್‌ ಇದ್ದು, 360 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ 1200 ಹೆಕ್ಟೇರ್‌ ಇದ್ದು, 50 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹಲಸಂದೇ ಗುರಿ 5000 ಹೆಕ್ಟೇರ್‌ ಇದ್ದು, 1080 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹುರುಳಿ ಗುರಿ 2350 ಹೆಕ್ಟೇರ್‌ ಹಾಗೂ ಅವರೆ 1700 ಹೆಕ್ಟೇರ್‌ ಹಾಗೂ ಮುಸುಕಿನ ಜೋಳ, 13500 ಹೆಕ್ಟೇರ್‌ ಗುರಿಯಿದ್ದು, ಬಿತ್ತನೆ ಯಾಗಿಲ್ಲ, ಎಳ್ಳು 1000 ಹೆಕ್ಟೇರ್‌ ಗುರಿ ಇದ್ದು, 350 ಹೆಕ್ಟೇರ್‌ ಬಿತ್ತನೆಯಾಗಿದೆ ಎಣ್ಣೆಕಾಳುಗಳಾದ ಸೂರ್ಯಕಾಂತಿ, ಹರಳು ನೆಲಗಡಲೆ, ಸಾಸಿವೆ, ಹುಚ್ಚೇಳು ಬೆಳೆಗಳನ್ನು ರೈತರು ಬಿತ್ತನೆ ಮಾಡಬೇಕಾಗಿದೆ. ಈ ಬಾರಿ ವರುಣನ ಕೃಪೆಯಿಂದ ರೈತನ ಕೈ ಹಿಡಿಯುವ ಹಂತದಲ್ಲಿದೆ. ಇದರಿಂದ ಆತ್ಮವಿಶ್ವಾಸದಲ್ಲಿರುವ ಬಯಲುಸೀಮೆಯ ರೈತರು ಮುಂಗಾರಿನ ಪ್ರಮುಖ ಬೆಳೆಗಳಾದ ರಾಗಿ, ಮುಸುಕಿನ
ಜೋಳ, ಜೋಳ ಮತ್ತಿತರ ಬೆಳೆಗಳನ್ನು ಬೆಳೆಯಲು ತಮ್ಮ ಜಮೀನನ್ನು ಹದಮಾಡಿಕೊಳ್ಳುತ್ತಿದ್ದಾರೆ.

Advertisement

 ಅರಸೀಕೆರೆ ರಾಮಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next