ವಾಡಿ: ಪಟ್ಟಣದಲ್ಲಿ ಗುರುವಾರವೂ ಧಾರಾಕಾರ ಮಳೆ ಸುರಿಯಿತು. ಇದರಿಂದ ಚರಂಡಿಗಳು ತುಂಬಿ ಹರಿದು, ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹಗೊಂಡಿತು. ನಗರದ ಮಾಂಸ ಮಾರುಕಟ್ಟೆ, ಶ್ರೀನಿವಾಸಗುಡಿ ವೃತ್ತ, ಪೊಲೀಸ್ ಠಾಣೆ ವೃತ್ತ, ಬಸವೇಶ್ವರ ವೃತ್ತ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಭಾರಿ ಪ್ರಮಾಣದ ನೀರು ರಸ್ತೆ ಆವರಿಸುವ ಮೂಲಕ ವಾಹನ ಸಂಚಾರ ಅಸ್ತವ್ಯಸ್ತಗೊಳಿಸಿತು.
ಕೊಳಗೇರಿ ಬಡಾವಣೆಗಳ ಮನೆಗಳಿಗೂ ಮಳೆ ನೀರು ನುಗ್ಗಿ ಬದುಕು ದುಸ್ಥರಗೊಳಿಸಿತು. ವಿವಿಧ ಬಡಾವಣೆಗಳ ಗಲ್ಲಿ ರಸ್ತೆಗಳಲ್ಲಿ ಸಂಗ್ರಹಗೊಂಡು ಜನ ಸಂಚಾರಕ್ಕೆ ಅಡ್ಡಿಪಡಿಸಿದ ಮಳೆ ನೀರನ್ನು ಸಾಗಿಸಲು ಪೌರ ಕಾರ್ಮಿಕರು ಚರಂಡಿಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿ ಸಮಸ್ಯೆಗೆ ಪರಿಹಾರ ನೀಡಲು ಪರದಾಡಿದರು.
ಕಳೆದ ಮೂರ್‍ನಾಲ್ಕು ದಿನಗಳಿಂದ ಚಿತ್ತಾಪುರ ತಾಲೂಕಿನ ವಾಡಿ, ನಾಲವಾರ, ಸನ್ನತಿ, ಕೊಲ್ಲೂರ ವಲಯಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜಮೀನುಗಳು ಉತ್ತಮ ತೇವಾಂಶ ಹೊಂದಲು ಅನುಕೂಲವಾಗಿದೆ. ಕೃಷಿಗೆ ಪೂರಕ ವಾತಾವರಣ ಮೂಡಿದ್ದರಿಂದ ಬೇಸಾಯಗಾರರಲ್ಲಿ ಬೆಳೆ ಕೈಗೆಟಗುವ ಭರವಸೆ ಮೂಡಿದೆ.
ಯಡ್ರಾಮಿಯಲ್ಲಿ ಮಳೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಯಡ್ರಾಮಿ, ಆಲೂರು, ಮಂಗಳೂರು, ಕರ್ಕಿಹಳ್ಳಿ, ಅಖಂಡಹಳ್ಳಿ ಸೇರಿದಂತೆ ಸುತ್ತಲಿನ ಬಹುತೇಕ ಹಳ್ಳಿಗಳ ರೈತರ ಜಮೀನು ಸಂಪೂರ್ಣ ಹಸಿಯಾಗಿ ಬಿತ್ತನೆಗೆ ಹದಗೊಂಡಂತಾಯಿತು. ಗುರುವಾರದ ಮಳೆ ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.