Advertisement

ಉತ್ತಮ ಮಳೆ; ಮುಂದುವರಿದ ಕಡಲಬ್ಬರ

02:02 AM Jun 13, 2019 | mahesh |

ಮಂಗಳೂರು/ಉಡುಪಿ: ಕರಾವಳಿಯೆಲ್ಲೆಡೆ ಬುಧವಾರ ಉತ್ತಮ ಮಳೆ ಸುರಿದಿದ್ದು, ಮಳೆಗಾಲ ಆರಂಭದ ವಾತಾವರಣ ಕಂಡುಬಂದಿದೆ. ಮಂಗಳೂರು ನಗರದಲ್ಲಿ ಆಗಾಗಮಳೆಯಾಗಿದೆ. ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮೂಡುಬಿದಿರೆ, ಕಿನ್ನಿಗೋಳಿ, ಉಳ್ಳಾಲ, ಕಡಬ, ಮೂಲ್ಕಿ, ಸುಬ್ರಹ್ಮಣ್ಯ, ಸುಳ್ಯ, ಸುರತ್ಕಲ್, ಮುಡಿಪು, ಪುತ್ತೂರು, ಉಪ್ಪಿನಂಗಡಿ, ವೇಣೂರು, ಬಂಟ್ವಾಳ, ಪುಂಜಾಲಕಟ್ಟೆ, ನಾರಾವಿ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಕಾರ್ಕಳ ಹಾಗೂ ಬೆಳ್ಮಣ್‌, ಬ್ರಹ್ಮಾವರ, ಸಾಲಿಗ್ರಾಮ, ಸಾಸ್ತಾನ, ಸಿದ್ಧಾಪುರ, ಕೊಲ್ಲೂರು, ಕುಂಭಾಶಿ, ತೆಕ್ಕಟ್ಟೆ, ಶಿರ್ವ ಪರಿಸರದಲ್ಲಿ ನಿರಂತರವಾಗಿ ಮಳೆಯಾಗಿದೆ.

Advertisement

ವಿಪತ್ತು ದಳ ಸಜ್ಜು
ಮುಂಗಾರು ಮುಂಜಾಗ್ರತೆಗೆಂದು ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತುದಳ ಈಗಾಗಲೇ ಸಜ್ಜಾಗಿದೆ. ಆಂಧ್ರಪ್ರದೇಶದ ಗುಂಟೂರಿನ ಎನ್‌ಡಿಆರ್‌ಎಫ್‌ 10ನೇ ಬೆಟಾಲಿಯನ್‌ನಿಂದ 50 ಮಂದಿ ಆಗಮಿಸಿದೆ. ಸಚಿವ ಯು.ಟಿ. ಖಾದರ್‌ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿ ಗಳ ಜತೆ ಮುಂಗಾರು ಮುಂಜಾಗ್ರತೆ ಸಂಬಂಧ ಚರ್ಚೆ ನಡೆಸಿದ್ದಾರೆ.

ಚಂಡಮಾರುತ ಪರಿಣಾಮ
ಅರಬಿ ಸಮುದ್ರದಲ್ಲಿ ಉಂಟಾಗಿ ರುವ ‘ವಾಯು’ ಚಂಡಮಾರುತ ಬುಧವಾರ ಉತ್ತರ ಭಾಗದತ್ತ ಸಂಚರಿ ಸುತ್ತಿದ್ದು, ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ.

ಕಡಲ ಅಬ್ಬರ
ಮಂಗಳೂರಿನ ತಣ್ಣೀರುಬಾವಿ ಮತ್ತು ಪಣಂಬೂರು ಬೀಚ್‌ಗಳಲ್ಲಿ ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರ ಜಾಸ್ತಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಬ್ಯಾರಿಕೇಡ್‌ ಅಳವಡಿಸಲಾಗಿದೆ.

ರಸ್ತೆಗೆ ಬಿದ್ದ ತೆಂಗಿನ ಮರ
ಬಂಟ್ವಾಳ:
ಬಿ.ಸಿ.ರೋಡ್‌ ಜುಮಾದಿ ಗುಡ್ಡೆಯಲ್ಲಿ ಬುಧವಾರ ಮುಂಜಾನೆ ಮಳೆಯಿಂದಾಗಿ ಸ್ಥಳೀಯ ನಾಗೇಶ್‌ ಅವರ ತೆಂಗಿನ ಮರ ರಸ್ತೆಗೆ ಅಡ್ಡವಾಗಿ ಬುಡಸಹಿತ ಕಿತ್ತು ಬಿದ್ದಿತ್ತು.

Advertisement

ಮರ ಬಿದ್ದು ಮನೆಗೆ ಹಾನಿ
ಸಿದ್ದಾಪುರ:
ಭಾರೀ ಗಾಳಿ-ಮಳೆ ಯಿಂದ ಶಂಕರನಾರಾಯಣ ಗ್ರಾಮದ ಕುಳ್ಳುಂಜೆಯ ಕುಂಬಾರಮಕ್ಕಿ ರಘ ಶೆಟ್ಟಿ ಅವರ ಮನೆಯ ಮೇಲೆ ಮಾವಿನಮರ ಮುರಿದು ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ಈ ಸಂದರ್ಭ ನಾಲ್ವರು ಮನೆಯಲ್ಲಿ ದ್ದರು. ಅವರು ಮನೆಯ ಇನ್ನೊಂದು ಬದಿಯಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಅರ್ಧ ಭಾಗದ ಪಕ್ಕಾಸು, ರೀಪು, ಹೆಂಚು, ವಯರಿಂಗ್‌ ಸಂಪೂರ್ಣ ಹಾನಿಗೀಡಾಗಿವೆ. ಸ್ಥಳಕ್ಕೆ ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ರವಿ ಕುಲಾಲ, ಪಿಡಿಒ ಶ್ವೇತಲತಾ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ. ಪಂಚಾಯತ್‌ ವತಿಯಿಂದ ತುರ್ತು ಟರ್ಪಾಲು ವ್ಯವಸ್ಥೆ ಕಲ್ಪಿಸಲಾಗಿದೆ.

ಆಲೂರು: ಮನೆಗೆ ಹಾನಿ
ಕುಂದಾಪುರ:
ತಾಲೂಕಿನಲ್ಲಿ ಮಳೆ ಗಿಂತ ಗಾಳಿಯ ಪ್ರಮಾಣ ಹೆಚ್ಚಿತ್ತು. ಮಂಗಳವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿಗೆ ಆಲೂರು ಗ್ರಾಮದ ಮರವಂತೆಮನೆ ಕಾಳಿಕಾಂಬ ನಗರದ ಕಮಲಾ ಆಚಾರ್ತಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮಸೀದಿ ಜಲಾವೃತ
ಉಡುಪಿ:
ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಬ್ರಹ್ಮಗಿರಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ನಾಯರ್‌ಕೆರೆ ಮಸೀದಿ ಬುಧವಾರ ಜಲಾವೃತವಾಗಿತ್ತು.

ಹೆಬ್ರಿ: ವಿದ್ಯುತ್‌ ಕಂಬಗಳಿಗೆ ಹಾನಿ
ಹೆಬ್ರಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬುಧವಾರ ಬೀಸಿದ ಗಾಳಿ-ಮಳೆಗೆ ಹಲವು ವಿದ್ಯುತ್‌ ಕಂಬಗಳು ಧರೆ ಗುರುಳಿ ನಷ್ಟ ಸಂಭವಿಸಿದೆ. ಶಿವಪುರಲ್ಲಿ 2 ಎಲ್ಟಿ ಕಂಬಗಳು, ಬೇಳಂಜೆ ವಿದ್ಯಾನಗರದಲ್ಲಿ 1ಎಲ್ಟಿ ಮತ್ತು 1ಎಚ್ಟಿ ಕಂಬಗಳು ಹಾಗೂ ಹೆಬ್ರಿ ಕನ್ಯಾನ ಹತ್ತಿರ 1 ಎಲ್ಟಿ ಕಂಬ ಧರೆಗುರುಳಿವೆ. ಹಲವು ಕಡೆ ವಿದ್ಯುತ್‌ ತಂತಿಗಳು ಕಡಿದು ಸುಮಾರು 70 ಸಾವಿರ ರೂ. ನಷ್ಟ ಸಂಭವಿಸಿದೆ.

ಕಾಪು: ತಡೆ ಕಲ್ಲು ನೀರುಪಾಲು
ಕಾಪು, ಪೊಲಿಪು, ಕೈಪುಂಜಾಲು, ಮೂಳೂರು, ಉಚ್ಚಿಲ ಸೇರಿದಂತೆ ಕರಾವಳಿಯುದ್ದಕ್ಕೂ ಸಮುದ್ರದ ತೆರೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಮುಂಗಾರು ಮಳೆಗೆ ಮೊದಲೇ ಕಡಲ್ಕೊರೆತದ ಭೀತಿ ಎದುರಾಗಿದೆ. ಕಾಪು ಕೈಪುಂಜಾಲು ಬೊಬ್ಬರ್ಯ ದೈವಸ್ಥಾನದ ಬಳಿ, ಜ್ವಾಲಿ ಫ್ರೆಂಡ್ಸ್‌ ಬೀಚ್ ಬಳಿ, ಯಾರ್ಡ್‌ ಬೀಚ್ ಬಳಿ, ಪಡು ಶಾಲೆಯ ಬಳಿ ಸಮುದ್ರ ಕೊರೆತದ ಭೀತಿ ಎದುರಾಗಿದೆ. ತೆಂಗಿನ ಮರಗಳು ಮತ್ತು ಹಿಂದೆ ಕಡಲ್ಕೊರೆತದ ಸಂದರ್ಭ ಹಾಕಿದ್ದ ಕಲ್ಲುಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಕಂಟೈನರ್‌ ಲಾರಿ ಅಪಘಾತ
ಶಿರೂರು: ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಇಲ್ಲಿನ ಸುಂಕದಗುಂಡಿ ಬಳಿ ನಿಯಂತ್ರಣ ತಪ್ಪಿದ ಬೃಹತ್‌ ಕಂಟೈನರ್‌ ಲಾರಿ ಅಪಘಾತಕ್ಕೀಡಾಗಿದೆ. ಲಾರಿ ಭಟ್ಕಳದಿಂದ ಕುಂದಾಪುರದತ್ತ ಸಾಗುತ್ತಿತ್ತು. ಚಾಲಕನ ಕ್ಯಾಬಿನ್‌ ತಿರುಚಿ ರಸ್ತೆಗೆ ಉರುಳಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ತಡೆಗೋಡೆ ಕುಸಿತ: ಮನೆಗೆ ಹಾನಿ
ಉಪ್ಪಿನಂಗಡಿ:
ಭಾರೀ ಮಳೆಗೆ ತಡೆಗೋಡೆ ಕುಸಿದು ಕೂಲಿ ಕಾರ್ಮಿಕ ನವಾಝ್ ಅವರ ಮನೆ ಭಾಗಶಃ ಹಾನಿಯಾದ ಘಟನೆ ಬಜತ್ತೂರು ಗ್ರಾಮದ ಬೆದ್ರೋಡಿ ಜನತಾ ಕಾಲನಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ನೆರೆಮನೆಯ ಶರೀಫ್ ಅವರು ಕಟ್ಟಿದ ತಡೆಗೋಡೆ ಕೆಳಗಿನ ಭಾಗದಲ್ಲಿ ರುವ ನವಾಝ್ ಮನೆಯ ಮಾಡಿನ ಮೇಲೆ ಜರಿದು ಬಿದ್ದಿದೆ. ಮನೆಯ 2 ಗೋಡೆಗಳು ಕುಸಿದಿವೆ. ಗೋಡೆ ಕುಸಿದ ಕೋಣೆಯಲ್ಲಿ ನವಾಜ್‌ ಅವರ2 ವರ್ಷ ಪ್ರಾಯದ ಮಗು ಮಲಗಿ ನಿದ್ದೆ ಮಾಡುತ್ತಿತ್ತು. ಕೇವಲ 5 ನಿಮಿಷ ಮುನ್ನ ಎಚ್ಚರಗೊಂಡಿದ್ದ ಮಗುವನ್ನು ತಾಯಿ ಅಸ್ಮ ಚಾವಡಿಗೆ ಕರೆದೊಯ್ದಿದ್ದರು. ಅದೃಷ್ಟವಶಾತ್‌ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಫ್ರಿಜ್‌, ಟಿವಿಗೆ ಹಾನಿಯಾಗಿವೆ. ಪಾತ್ರೆ, ಪಗಡಿ ಸಹಿತ ಬಹುತೇಕ ವಸ್ತುಗಳು ಗೋಡೆಯ ಅಡಿಗೆ ಬಿದ್ದಿವೆ. ಘಟನಾ ಸ್ಥಳಕ್ಕೆ ಬಜತ್ತೂರು ಗ್ರಾ.ಪಂ. ಸದಸ್ಯರಾದ ನಝೀರ್‌ ಬೆದ್ರೋಡಿ, ಪ್ರಸಿಲ್ಲಾ ಡಿ’ಸೋಜಾ, ಗ್ರಾಮಕರಣಿಕ ಸುನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next