ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ರವಿವಾರ ಮಳೆಯಾದ ವರದಿಯಾಗಿದೆ. ಕೊಲ್ಲೂರು ಪರಿಸರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ 2 ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಬಾರಿ ಮಳೆಯು ಕೃಷಿಕರಿಗೆ ಬೀಜ ಬಿತ್ತನೆಗೆ ಅನುವು ಮಾಡಿದಂತಾಗಿದೆ.
ಮಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಬಂಟ್ವಾಳ, ಬಿ.ಸಿ.ರೋಡ್, ಪುಂಜಾಲಕಟ್ಟೆ, ಕಡಬ, ಪುತ್ತೂರು, ಉಪ್ಪಿನಂಗಡಿ, ಸುಳ್ಯ, ವಿಟ್ಲ, ಕನ್ಯಾನ, ಸುಬ್ರಹ್ಮಣ್ಯ, ವೇಣೂರು, ಸುರತ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ.
ಉಡುಪಿ ನಗರದಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಹಾಗೂ ಸಂಜೆ ಹೊತ್ತು ಧಾರಾಕಾರ ಮಳೆ ಸುರಿಯಿತು. ಉಳಿದಂತೆ ಮುದೂರು, ಜಡ್ಕಲ್, ಕಾನಿ ಇಡೂರು, ವಂಡ್ಸೆ, ಕೆರಾಡಿ, ಬೆಳ್ಳಾಲ ಪರಿಸರದಲ್ಲೂ ಉತ್ತಮ ಮಳೆಯಾಗುತ್ತಿದೆ. ಕುಂದಾಪುರ, ಕೋಟೇಶ್ವರ, ಸಿದ್ಧಾಪುರ, ಕೋಟ ಸುತ್ತಮುತ್ತ, ಬೆಳ್ಮಣ್, ಮರವಂತೆ, ಉಪ್ಪುಂದ, ಉದ್ಯಾವರ, ಕಟಪಾಡಿ, ಕಾಪು ಪರಿಸರದಲ್ಲಿ ಉತ್ತಮ ಮಳೆಯಾಯಿತು. ಪಡುಬಿದ್ರಿ ಪರಿಸರದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆ ಸುರಿಯಿತು.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ 2 ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯವಿದೆ.
ರಿಕ್ಷಾದ ಮೇಲೆ ಉರುಳಿದ ಮರ
ಕುಂದಾಪುರ: ಚರ್ಚ್ ರೋಡ್‌ನಲ್ಲಿ ಮರವೊಂದು ರಿಕ್ಷಾದ ಮೇಲೆ ಬಿದ್ದು ರಿಕ್ಷಾಕ್ಕೆ ಹಾನಿಯಾಗಿದೆ. ಸುಮಾರು ಹೊತ್ತು ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಚರ್ಚ್ ರೋಡ್, ಟೈಲ್ ಫ್ಯಾಕ್ಟರಿ, ಕೋಡಿ ಕಡೆಗೆ ಹೋಗುವ ವಾಹನಗಳಿಗೆ, ವಿವಿಧ ಆಸ್ಪತ್ರೆಗಳಿಗೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.