Advertisement

ಶಿಷ್ಟಾಚಾರ, ಸಂಸ್ಕಾರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಮಾಣಿಲ ಶ್ರೀ

02:45 AM Jul 11, 2017 | Team Udayavani |

ವಿಟ್ಲ : ಜೀವನದ ಪ್ರತಿಯೊಂದು ಕ್ಷಣಗಳಲ್ಲಿ ಶಿಸ್ತು, ಸದ್ಗುಣ, ನೈತಿಕತೆಯೊಂದಿಗೆ ಶಿಷ್ಟಾಚಾರ, ಸಂಸ್ಕಾರಗಳಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಮಾನವೀಯ ಮೌಲ್ಯಗಳನ್ನು ಅರಿತ ಯಾವುದೇ ವ್ಯಕ್ತಿಯಿಂದ ಅಹಿತಕರ, ಸಮಾಜಬಾಹಿರ ಕಾರ್ಯ ನಡೆಯಲು ಸಾಧ್ಯವಿಲ್ಲ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

Advertisement

ಅವರು ಮಾಣಿಲ ಶ್ರೀಧಾಮ ಶ್ರೀ  ಮಹಾಲಕ್ಷ್ಮೀ ಕ್ಷೇತ್ರದಲ್ಲಿ  ರವಿವಾರ  48 ದಿನಗಳ ಸಾಮೂಹಿಕ ಲಕ್ಷಿ¾à ಪೂಜೆಯ ಅಂಗವಾಗಿ ನಾನಾ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ  ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಭಾರತ ಎನ್ನುವುದು ಮಹಾತ್ಮರು ಬಾಳಿದ ಪುಣ್ಯಭೂಮಿ.  ಇದು ಸಾಧು ಸಂತ ದಾರ್ಶನಿಕರ ತಪೋವನವಾಗಿದ್ದು ಈ ಮಣ್ಣಿನ ಕಣಕಣದಲ್ಲಿಯೂ ಶಿಷ್ಟ ಅಂತಃಸತ್ವ ಹುದುಗಿದೆ. ಭಗವಂತನ ನಿಯಮದೊಳಗೆ ಎಲ್ಲ ಆಗುಹೋಗುಗಳು ನಡೆಯುವುದು. ಇಲ್ಲಿ ನಿತ್ಯನಿರಂತರ ಹೊಸತನವನ್ನು ಆಸ್ವಾದಿಸಬಹುದು ಎಂದ ಅವರು ಹೆತ್ತವರು ತಮ್ಮ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕಾಗಿದೆ. ಮಕ್ಕಳು ಬೆಳೆಯುವ ಪ್ರತಿಯೊಂದು ಹಂತದಲ್ಲಿಯೂ ಕಣ್ಗಾವಲಿಟ್ಟು ನೋಡಬೇಕಾಗಿದ್ದು, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಗಳಾಗುತ್ತಿರುವ ದೇಶದ್ರೋಹಿ ಉಗ್ರಗಾಮಿ  ಸಂಘಟನೆಗಳು ತರುಣತರುಣಿಯರ ಮನಸ್ಸನ್ನು ವಿಕೃತಗೊಳಿಸಿ ಅವರ ಬದುಕನ್ನೇ ಆಪೋಷನಗೈಯ್ಯಲು ಹವಣಿಸುತ್ತಿವೆ ಎಂದರು.

ಸಮಾರಂಭದಲ್ಲಿ ಬಂಟ್ವಾಳದ ವಕೀಲೆ ಆಶಾಪ್ರಸಾದ್‌ ರೈ, ಬದುಕಿನೊಳಗಿನ ಧಾರ್ಮಿಕತೆ, ಸಂಸಾರ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು.   ಬೆಂಗಳೂರಿನ ಉದ್ಯಮಿಗಳಾದ ರಾಜು ಬೆಂಗಳೂರು, ವಿನೋದ್‌, ಮುಕುಂದ್‌, ಗೋಪಿ, ಕುಮಾರ್‌,  ಶ್ರೀಧಾಮ  ಶ್ರೀ  ಮಹಾಲಕ್ಷ್ಮೀ ಮಿತ್ರವೃಂದದ ಅಧ್ಯಕ್ಷ ಯೋಗೀಶ್‌  ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಸಾವನ್ನಪ್ಪಿದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕೃತ್ಯವನ್ನು ಖಂಡಿಸಲಾಯಿತು.ಶ್ರೀ  ಮಹಾಲಕ್ಷ್ಮೀ ಸೇವಾ ಟ್ರಸ್ಟ್‌ನ ಟ್ರಸ್ಟಿ ಮಚ್ಛೇಂದ್ರನಾಥ್‌  ಸಾಲ್ಯಾನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಶ್ರೀಧಾಮ ಮಹಿಳಾ ಸೇವಾ ಸಮಿತಿಯ ಕಾರ್ಯದರ್ಶಿ ಗೀತಾ ಪುರುಷೋತ್ತಮ್‌ ವಂದಿಸಿದರು. 

ಶ್ರೀಕ್ಷೇತ್ರದಲ್ಲಿ ವೇ| ಮೂ| ನಯನಕೃಷ್ಣ ಜಾಲೂರು ಅವರ ವೈದಿಕತ್ವದಲ್ಲಿ ಗಣಪತಿ ಹೋಮ, ಪಂಚಾಮೃತ ಅಭಿಷೇಕ,  ಲಕ್ಷ್ಮೀ ಪೂಜೆ,  ಶ್ರೀ ಗುರುಪೂಜೆ,  ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಬಾಲಭೋಜನ, ಸಾಮೂಹಿಕ ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮ ಪಠಣ, ಕನಕಧಾರ ಯಾಗ,  ಶ್ರೀ ವಿಠೊಭ ರುಕ್ಮಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ,  ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ,  ಶ್ರೀ  ಲಕ್ಷ್ಮೀ ಪೂಜೆ ಮೊದಲಾದವು ನಡೆದವು.

Advertisement

ಕೋಮು ಸಂಘರ್ಷ ನಶಿಸಲಿ
ಕರಾವಳಿ ನಡೆಯುತ್ತಿರುವ ಕೋಮು ಸಂಘರ್ಷಗಳ ಬಗ್ಗೆ ಪ್ರಸ್ತಾವಿಸಿದ ಸ್ವಾಮೀಜಿ ಪ್ರತಿಯೊಂದು ಧರ್ಮ, ಮತ, ಪಂಥಗಳು ಅಹಿಂಸೆಯನ್ನೇ  ಪ್ರತಿಪಾದಿಸಿವೆ ಹೊರತು, ಎಂದೂ ಸಹ ರಕ್ತಪಾತ ಮಾಡಿಕೊಳ್ಳುವ ತತ್ವವನ್ನು ಸಾರಿಲ್ಲ. ನಮ್ಮೊಳಗಿನ ಸಂಕುಚಿತ ಭಾವನೆಯನ್ನು ಬಿಟ್ಟು ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಸಾಕ್ಷಿಗಳಾಗಬೇಕಾಗಿದೆ. ಸಮಾಜದಲ್ಲಿ ಕೋಮು ಸಂಘರ್ಷ ನಶಿಸಿ, ಪ್ರಜ್ಞಾವಂತ ನಾಗರಿಕ ಸಮಾಜ ನಿರ್ಮಾಣಗೊಳ್ಳಲಿ. 
– ಮಾಣಿಲ ಶ್ರೀ 

Advertisement

Udayavani is now on Telegram. Click here to join our channel and stay updated with the latest news.

Next