Advertisement

ತೆರಿಗೆ ವಸೂಲಿಯಲ್ಲಿ ಉತ್ತಮ ಸಾಧನೆ

03:42 PM May 27, 2019 | Team Udayavani |

ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿ 7.30ಕೋಟಿ ರೂ. ಗಳಿಗೂ ಹೆಚ್ಚು ಇರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ., ಕೆಲವು ಪೌರಕಾರ್ಮಿಕರಿಗೆ ಉತ್ತಮ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಭಿವೃದ್ಧಿ ಪ್ರಗತಿ ಕುರಿತು ಸಭೆ ನಡೆಸಿದ ಅವರು, ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ಅಗತ್ಯ ವಿಷಯಗಳ ಟೆಂಡರ್‌ ಯಾವುದೇ ಅಡೆತಡೆಯಿಲ್ಲದೇ ಅನುಮೋದನೆ ಸಿಗುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಗುತ್ತಿಗೆದಾರರಿಗಾಗಿ ಗುತ್ತಿಗೆ ಸೌಲಭ್ಯ ಕೇಂದ್ರ (ಟೆಂಡರ್‌ ಫೆಸಿಲಿಟೇಷನ್‌ ಸೆಂಟರ್‌) ತೆರೆಯುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಟೆಂಡರ್‌ ನಿಯಮಗಳನ್ನು ಸರಿಯಾಗಿ ಪೂರೈಸದ ಕಾರಣ ಗುತ್ತಿಗೆ ಅನುಮೋದನೆ ಸಿಗುತ್ತಿಲ್ಲ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತವೆ ಎಂಬುದನ್ನು ಅರಿತ ಜಿಲ್ಲಾಧಿಕಾರಿಗಳು, ಗುತ್ತಿಗೆ ಸೌಲಭ್ಯ ಸಲಹೆ ಕೇಂದ್ರವನ್ನು ಆರಂಭಿಸಿದರೆ, ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸಬೇಕು ಎಂಬುದು ಗೊತ್ತಾಗುತ್ತದೆ. ಗುತ್ತಿಗೆಗೆ ತಕ್ಷಣ ಅನುಮೋದನೆ ಸಿಗುವುದರಿಂದ ಕಾಮಗಾರಿಗಳು ತೀವ್ರಗೊಳ್ಳುತ್ತವೆ ಎಂದರು.

ಬೈತಕೋಲ್ ಸೇರಿದಂತೆ ನಗರ ಪ್ರದೇಸದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಅಗತ್ಯವಿದೆ ಎಂದ ಅವರು, ಮತ್ತಷ್ಟು ಟ್ಯಾಂಕರ್‌ ಸೌಲಭ್ಯವನ್ನು ಹೆಚ್ಚಿಸುವಂತೆ ತಿಳಿಸಿದರು.

ನಗರಸಭೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ಕಸ ಬೇರ್ಪಡಿಸುವ ವ್ಯವಸ್ಥೆ ಮತ್ತಷ್ಟು ಸರಿಯಾಗಬೇಕಿದೆ. ಸಂಗ್ರಹಣಾಗಾರದಲ್ಲಿ ಒಣಕಸ ಹಸಿಕಸ ಮಿಶ್ರಣವಾಗಿ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬೀದಿದೀಪ ವೆಚ್ಚ ದುಬಾರಿಯಾಗುತ್ತಿದೆ. ಯಾಕೆ ಇಷ್ಟು ವಿದ್ಯುತ್‌ ಬಿಲ್ ಬರುತ್ತಿದೆ ಎಂಬ ಬಗ್ಗೆ ಪರಿಶೀಲಿಸಿ. ನಿರ್ವಹಣೆಯಲ್ಲಿ ಏನಾದರೂ ಅನಗತ್ಯ ವೆಚ್ಚ ಹಾಕಲಾಗುತ್ತಿದೆ. ಇದನ್ನು ನಿರ್ವಹಿಸುವ ಕೆಲಸಗಾರರ ಬಗ್ಗೆ ಕಣ್ಣಿಡಿ ಹಾಗೂ ಎಚ್ಚರ ವಹಿಸಿ. ಇದಕ್ಕೆ ಸಂಬಂಧಿಸಿದ ಕಡತಗಳ ಮಂಡಿಸಿ, ಅನುಮೋದನೆ ಪಡೆಯಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ 1684 ಅಂಗಡಿಗಳು ಪರವಾನಗಿ ಹೊಂದಿವೆ ಎಂಬುದು ದಾಖಲೆಯಲ್ಲಿದೆ. ಆದರೆ ಅದಕ್ಕೂ ಹೆಚ್ಚು ಅಂಗಡಿಗಳಿವೆ. ಈ ಬಗ್ಗೆ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು ಎಂದರು. ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶ ಆನ್‌ಲೈನ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಲ್ಲಿ ನಿರ್ಮಿಸಲಾಗಿರುವ ಮನೆಗಳ ಗುಣಮಟ್ಟದ ಬಗ್ಗೆ ಉತ್ತಮ ಪ್ರತಿಕ್ರಿಯೆ ಇದೆ. ಮುಂದಿನ ದಿನದಲ್ಲಿ ಖುದ್ದು ಭೇಟಿಯಾಗುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ನಗರಸಭೆ ಆಯುಕ್ತ ಯೋಗೇಶ್ವರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನ್ಕರ್‌, ಅಭಿಯಂತರರಾದ ವಿರಕ್ತಿಮಠ, ಮೋಹನ್‌ ರಾಜ್‌, ಯಾಕೂಬ್‌ ಶೇಖ್‌, ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next