Advertisement

ಖಾಸಗಿ ನೌಕರರಿಗೂ ಉತ್ತಮ ಪಿಂಚಣಿ !

05:33 PM Apr 08, 2019 | pallavi |
ಖಾಸಗಿ ಉದ್ಯೋಗಿಗಳಿಗೆ ಈ ಬಾರಿಯ ಯುಗಾದಿ ಸಿಹಿ ನೀಡಿದೆ.  ಪಿಂಚಣಿ ನಿಗದಿಪಡಿಸುವ ಸಂದರ್ಭದಲ್ಲಿ ಮಾಸಿಕ 15,000 ರೂ. ಬದಲಿಗೆ  ಪೂರ್ತಿ ವೇತನ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಖಾಸಗಿ ಉದ್ಯೋಗಿಗಳಲ್ಲಿ ನವೋಲ್ಲಾಸ ತುಂಬಿದೆ.  ಈ ಹಿಂದೆ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌,  ಖಾಸಗಿ ವಲಯದ ಎಲ್ಲ ಉದ್ಯೋಗಿಗಳಿಗೆ ನಿವೃತ್ತಿ ಅನಂತರ ಸಿಗುವ ಪಿಂಚಣಿ ಮೊತ್ತ ಹಲವು ಪಟ್ಟು ಹೆಚ್ಚಳವಾಗುವಂತೆ ಆದೇಶ ನೀಡಿದೆ.
1995ರಲ್ಲಿ ಕೇಂದ್ರ ಸರಕಾರ ಸಂಘಟಿತ ವಲಯದ ಉದ್ಯೋಗಿಗಳಿಗೆ  ಪಿಂಚಣಿ ಯೋಜನೆ ಜಾರಿಗೊಳಿಸಿತ್ತು. ಯೋಜನೆಯನ್ವಯ ಆರಂಭದಲ್ಲಿ  ಉದ್ಯೋಗದಾತರು ವೇತನದಲ್ಲಿ  ಮಾಸಿಕ ಗರಿಷ್ಠ  6,500 ರೂ. ಗಳನ್ನು  ಪಿಂಚಣಿಗೆ ಅರ್ಹವೆಂದು ಪರಿಗಣಿಸುತ್ತಿದ್ದರು. ಅದರ ಶೇ. 8.33 ಮೊತ್ತವನ್ನು ಪಿಂಚಣಿ ಯೋಜನೆಗಾಗಿ  ಸಲ್ಲಿಸಬೇಕಿತ್ತು.  2014ರಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿ  ಉದ್ಯೋಗಿ  ವೇತನದಲ್ಲಿ 15,000 ರೂ. ಗಳನ್ನು ಗರಿಷ್ಠ ಅರ್ಹ ವೇತನವೆಂದು ಪರಿಗಣಿಸಿ  ಇದರಲ್ಲಿ ಶೇ. 8.33 ಮೊತ್ತವನ್ನು ಪಿಂಚಣಿಗಾಗಿ ಸಲ್ಲಿಸಬೇಕಿತ್ತು. ಆದೇಶದ ಅನ್ವಯ ಈಗ ವೇತನದ  ಪೂರ್ತಿ ಹಣದ ಶೇ. 8.33ರಷ್ಟು ಹಣ ಪಿಂಚಣಿಗೆ ಸಲ್ಲಿಕೆಯಾಗಬೇಕಾಗುತ್ತದೆ.
ಸುಪ್ರೀಂಕೋರ್ಟ್‌ನ ಈ ಆದೇಶದ ಅನ್ವಯ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ವ್ಯಕ್ತಿಯ ಪಿಂಚಣಿಯಲ್ಲಿ  3ರಿಂದ 10 ಪಟ್ಟು ಏರಿಕೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
 ಪಿಂಚಣಿ ಯೋಜನೆಗೆ ಕಡಿತ ಮಾಡುವ ವಾರ್ಷಿಕ ಮೊತ್ತವನ್ನು ಗರಿಷ್ಠ 15, 000 ರೂ.ಗಳಿಗೆ  ನಿಗದಿ ಮಾಡಬಾರದು.  ಕಾರ್ಮಿಕರ ಪೂರ್ತಿ ವೇತನಕ್ಕೆ ಅದು ಅನ್ವಯವಾಗಬೇಕು. ನಿವೃತ್ತ ಕಾರ್ಮಿಕರಿಗೆ ಅವರು ನಿವೃತ್ತಿಗೂ ಮುನ್ನ ಪಡೆಯುತ್ತಿದ್ದ  ಸಂಪೂರ್ಣ ವೇತನದ ಆಧಾರದಲ್ಲಿಯೇ ಪಿಂಚಣಿ ನೀಡಬೇಕು ಎಂದು ಹೈಕೋರ್ಟ್‌ ತಿಳಿಸಿತ್ತು. ಕೋರ್ಟ್‌ ತೀರ್ಪಿನಿಂದ 2014ರ ಸೆ. 1ರ ಅನಂತರ ಕೆಲಸಕ್ಕೆ ಸೇರಿದವರಿಗೂ ಈ ಹೊಸ ಪಿಂಚಣಿ ಅನ್ವಯವಾಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next