ಸುಳ್ಯ : ದಂತ ವೈದ್ಯಕೀಯ ಸೇವೆಗೆ ಸಾಕಷ್ಟು ಬೇಡಿಕೆ, ಅವಕಾಶಗಳಿದ್ದು ಪದವೀಧರರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಕರೆ ನೀಡಿದರು.
ಸುಳ್ಯ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ಶನಿವಾರ ಜರಗಿದ ಕೆವಿಜಿ ದಂತ ವೈದ್ಯಕೀಯ ಕಾಲೇಜಿನ 22ನೇ ವರ್ಷದ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪದವೀಧರ ವಿದ್ಯಾರ್ಥಿಗಳು ವೈಯಕ್ತಿಕ, ಔದ್ಯೋಗಿಕವಾಗಿ ಜೀವನಮೌಲ್ಯಗಳನ್ನು ಅಳವಡಿಸಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು. ಸಂಸ್ಥೆಯ ಸಂಸ್ಥಾಪಕ ಕುರುಂಜಿ ವೆಂಕಟ್ರಮಣ ಗೌಡರು ಗ್ರಾಮೀಣ ಪ್ರದೇಶವನ್ನು ಶೈಕ್ಷಣಿಕ ಕ್ಷೇತ್ರವನ್ನಾಗಿಸಿದ್ದಾರೆ. ಕೆವಿಜಿ ಸಂಸ್ಥೆ ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗೆ ನೀಡಿದ ಕೊಡುಗೆಯಿಂದಾಗಿ ಸುಳ್ಯ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ| ಯು.ಎಸ್. ಕೃಷ್ಣ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಕೆವಿಜಿ ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ, ದಂತವೈದ್ಯಕೀಯ ಕಾಲೇಜಿನ ಡಾ| ಶರತ್ ಕುಮಾರ್ ಶೆಟ್ಟಿ, ಡಾ| ನಸ್ರೀತ್ ಫರೀದ್, ಡಾ| ಜಯಪ್ರಕಾಶ್ ಆನೆಕಾರ್, ಡಾ| ಮಹಾಬಲೇಶ್ವರ ಸಿ.ಎಚ್., ಡಾ| ರಾಮರಾಜ್ ಪಿ.ಎನ್., ಡಾ| ಸವಿತಾ ಸತ್ಯಪ್ರಸಾದ್, ಡಾ| ಹರಿಶ್ಚಂದ್ರ ರೈ, ಡಾ| ಪ್ರಸನ್ನ ವೇದಿಕೆಯಲ್ಲಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಪ್ರಸ್ತಾವನೆಗೈದರು. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಮೋಕ್ಷ ನಾಯಕ್ ಸ್ವಾಗತಿಸಿದರು. ಡಾ| ನಮೃತಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರಸನ್ನ ಕುಮಾರ್ ವಂದಿಸಿದರು.
ಸಮ್ಮಾನ
ಸಮಾರಂಭದಲ್ಲಿ ಟಿ. ಶ್ಯಾಮ್ ಭಟ್ ಹಾಗೂ ಡಾ| ಯು.ಎಸ್. ಕೃಷ್ಣನಾಯಕ್ ಅವರನ್ನು ಸಮ್ಮಾನಿಸಲಾಯಿತು. ಡಾ| ಕೃಷ್ಣಪ್ರಸಾದ್ ಅವರು ಬಿಡಿಎಸ್ ಮತ್ತು ಎಂಡಿಎಸ್ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಒಟ್ಟು 88 ಮಂದಿ ಬಿಡಿಎಸ್ ಮತ್ತು 30 ಮಂದಿ ಎಂಡಿಎಸ್‌ನವರಿಗೆ ಪದವಿ ಪ್ರದಾನ ನಡೆಯಿತು.