ಬೆಂಗಳೂರು: ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿ ಮನೆ ಕಟ್ಟಿಕೊಳ್ಳಲಾಗದೆ ತೊಂದರೆಗೆ ಸಿಲುಕಿದ್ದವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ. ಇಂಥವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸುಮಾರು 3 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ.
ಹಲವಾರು ವರ್ಷಗಳಲ್ಲಿ ರಾಜ್ಯದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಾಗಿ ಆಯ್ಕೆಯಾಗಿದ್ದರೂ ಸರಿಯಾದ ದಾಖಲೆ ಸಲ್ಲಿಸದೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಮನೆಗಳನ್ನು ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ಅನೇಕರು ಆಶ್ರಯ ಯೋಜನೆಯ ಲಾಭದಿಂದ ವಂಚಿತರಾಗಿದ್ದರು. ಅಂತಹ ಫಲಾನುಭವಿಗಳು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ.
ಇದನ್ನೂ ಓದಿ:ಕಾಂಗ್ರೆಸ್ ಶಾಸಕರ ಮತವೂ ನಮಗೆ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, 2014-15ರಿಂದ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿಯೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದವರಿಗೆ ಈಗ ಹೊಸದಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿವರ ನೀಡಿದ್ದಾರೆ.