Advertisement

ಅಂದದ ಮನೆಗೆ ಚಂದದ ನೇಮ್‌ ಪ್ಲೇಟ್

03:29 AM May 04, 2019 | mahesh |

ಹಿಂದೆ ಮನೆ ಎಂಬುದು ಮನೆ ಮಂದಿಯ ಹೆಸರಿನಿಂದಲೇ ಕರೆಯಲ್ಪಡುತ್ತಿತ್ತು. ಅನಂತರ ಮನೆಗೊಂದು ಹೆಸರಿಡುವ ಪದ್ಧತಿ ಆರಂಭವಾಯಿತು. ಇದನ್ನು ಸಾಮಾನ್ಯವಾಗಿ ಮನೆಯ ಹೊರಾಂಗಣದ ಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಯಲಾಗುತ್ತಿದೆ.

Advertisement

ಇತ್ತೀಚಿನ ದಿನಗಳಲ್ಲಿ ಮನೆಯ ಸೌಂದರ್ಯದಷ್ಟೇ ಪ್ರಾಮುಖ್ಯವನ್ನು ಹೆಸರುಗಳೂ ಪಡೆದುಕೊಂಡಿವೆ. ಹೀಗಾಗಿ ಸುಂದರವಾದ ನೇಮ್‌ಪ್ಲೇಟ್‌ನಲ್ಲಿ ಮನೆಯ ಹೆಸರು ಬರೆಯುವುದು ಹೊಸ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದರಿಂದ ಮನೆ ಕಟ್ಟಿದ ಮೇಲೆ ನೇಮ್‌ ಪ್ಲೇಟ್ ಮಾಡಿಸಲು ಆರ್ಡ್‌ರ್‌ ಕೊಡುವವರ ಸಂಖ್ಯೆ ಹೆಚ್ಚಾಗಿದೆ.

ದಶಕಗಳ ಹಿಂದೆ ಎಲ್ಲೋ ಒಂದೋ ಎರಡೋ ಮನೆಯಲ್ಲಿ ನೇಮ್‌ ಪ್ಲೇಟ್‌ಗಳು ಇರುತ್ತಿದ್ದರೆ ಈಗ ಇದು ಮನೆ ಗುರುತಿಸುವ, ಮನೆಯ ಅಂದವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಮನೆಯ ಹೆಸರಿನಷ್ಟೇ ನೇಮ್‌ ಪ್ಲೇಟ್ ಕೂಡ ಮನೆಯ ಅಲಂಕಾರವನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಇದಕ್ಕೆ ಆಧುನಿಕ ಟಚ್ ಸಿಕ್ಕಿದ್ದು, ಒಂದಕ್ಕಿಂತ ಇನ್ನೊಂದು ವಿಭಿನ್ನ ಶೈಲಿಯಲ್ಲಿ ಕಾಣ ಸಿಗುತ್ತಿವೆ.

ಫ‌ಲಕ ಮಾಡುವ ಸಾಮಗ್ರಿಗಳು
ಮರ, ಗಾಜು, ಉಕ್ಕು, ಟೇರಿಕೋಟ್, ಹಿತ್ತಾಳೆ ಸೆಣಬು, ಬಟ್ಟೆ, ಹುಲ್ಲು, ತೆಂಗಿನಕಾಯಿ ಸಿಪ್ಪೆ ಹೀಗೆ ವಿವಿಧ ರೀತಿಯ ಮನೆಯ ಹೆಸರು ಬರೆಯುವ ಫ‌ಲಕಗಳನ್ನು ತಯಾರಿಸಲಾಗುತ್ತಿದ್ದು, ಅಪಾರ್ಟ್‌ಮೆಂಟ್ ಮತ್ತು ಮನೆಗಳಲ್ಲಿ ಆದಷ್ಟು ಪರಿಸರ ಸ್ನೇಹಿ ಫ‌ಲಕಗಳನ್ನು ಬಳಸುವುದು ಉತ್ತಮ. ಇದನ್ನು ಫೈಬರ್‌ನಿಂದ ಕೂಡ ತಯಾರಿಸಲಾಗುತ್ತಿದ್ದು, ಸಿಂಪಲ್ ಮತ್ತು ಗ್ರ್ಯಾಂಡ್‌ ಲುಕ್‌ಗಳನ್ನು ಚೀಪ್‌ ಆ್ಯಂಡ್‌ ಬೆಸ್ಟ್‌ನಲ್ಲಿ ತಯಾರಿಸಬಹುದಾಗಿದೆ. ಅದಕ್ಕಾಗಿಯೇ ಮಾರುಕಟ್ಟೆಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಕೆಲವೊಂದು ಮನೆಗಳಲ್ಲಿ ಗಾಜು ಅಥವಾ ಮರದಿಂದ ಮಾಡಿದ ಫ‌ಲಕವನ್ನು ಬಳಸುತ್ತಿದ್ದು ಇದರಲ್ಲಿ ಹಲವಾರು ರೀತಿಯ ಡಿಸೈನ್‌ಗಳು ಕಾಣಸಿಗುತ್ತಿವೆ.

ಇದಕ್ಕೆ ಪೂರಕವೆಂಬಂತೆ ವಿನ್ಯಾಸಕಾರರು ಇದನ್ನು ಸೃಜನಾತ್ಮಕವಾಗಿ ಮಾಡುತ್ತಿದ್ದು ಒಬ್ಬರ ಮನೆಯಲ್ಲಿ ನೋಡಿ ಇನ್ನೊಬ್ಬರು ಅದಕ್ಕಿಂತ ವಿಭಿನ್ನವಾಗಿ ಮಾಡಲು ಮುಂದಾಗುತ್ತಿದ್ದಾರೆ. ಫ‌ಲಕಗಳನ್ನು ನಮಗೆ ಬೇಕಾದಂತೆ ಮಾಡಿಸಿಕೊಳ್ಳಬಹುದು ಅಥವಾ ಈಗ ನಮಗೆ ಬೇಕಾಗಿರುವಂತಹ ರೆಡಿಮೆಡ್‌ ಪ್ಲೇಟ್ಗಳಿದ್ದು ಅದನ್ನು ಬೇಕಾದರೂ ಖರೀದಿಸಬಹುದು.

Advertisement

ವಾಸ್ತು ಪ್ರಕಾರದ ಫ‌ಲಕ
ವಾಸ್ತು ಪ್ರಕಾರ ಮನೆಯ ಮುಖ್ಯ ಕುಟುಂಬದ ಪ್ರವೇಶ ಬಿಂದುವಾಗಿದೆ. ಅದಲ್ಲದೆ ಇದು ಮನೆಯ ಅವಕಾಶಗಳನ್ನು ಸೃಷ್ಟಿಸುವ ಕೇಂದ್ರಬಿಂದು ಎಂದು ಕರೆಯಲಾಗುತ್ತದೆ. ಫ‌ಲಕಗಳನ್ನು ತಯಾರಿಸುವಾಗ ಅದಕ್ಕೆ ಧನಾತ್ಮಕತೆ ಬಿಂಬಿಸುವಂತಹ ವಸ್ತುಗಳನ್ನೇ ಆಯ್ದುಕೊಳ್ಳಿ. ಬಾಗಿಲು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ಲೋಹದ ಫ್ಲೇಟ್ಗಳನ್ನು ಆಯ್ದುಕೊಳ್ಳಲು ಸೂಚಿಸಲಾಗುತ್ತದೆ. ಬಾಗಿಲು ದಕ್ಷಿಣ ಅಥವಾ ಪೂರ್ವದಿಕ್ಕಿನಲ್ಲಿದ್ದರೆ ಮರದ ಫ‌ಲಕವನ್ನು ಬಳಸುವುದು.

ಮನೆಗಳಲ್ಲಿ ಗಣೇಶನ ಚಿತ್ರಗಳು ಅಥವಾ ಪ್ರತಿಮೆಗಳನ್ನು ಅದಲ್ಲದೆ ಓಂ, ಸ್ವಸ್ತಿಕ ಹಾಗೂ ಶ್ಲೋಕಗಳಿಂದ ಮನೆಯ ಪ್ರವೇಶದ್ವಾರವನ್ನು ಅಲಂಕರಿಸುವುದು ಕೂಡ ಬಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತವೆ.

ಆಧುನಿಕ ಮನೆಗಳಿಗೆ ಮಾಲೀಕರ ವೈಯಕ್ತಿಕ ಹೆಸರನ್ನು ಒಳಗೊಂಡಿರುವ ಪ್ಲೇಟ್ಗಳಿಗೆ ಆದ್ಯತೆ ನೀಡುತ್ತಿದ್ದು, ಇದರ ಪರಿಣಾಮವಾಗಿ ಪ್ಲೇಟ್ ವಿನ್ಯಾಸಗಳಲ್ಲಿ ಹೆಸರು ವ್ಯಕ್ತಿಯ ವೃತ್ತಿಯನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕವಾಗಿ ಹೆಸರಿನ ಪ್ಲೇಟ್ಗಳಲ್ಲಿ ಒಬ್ಬರ ಉಪನಾಮವನ್ನು ಬರೆಯಲು ಈ ಪ್ರವೃತ್ತಿ ಹುಟ್ಟಿಕೊಂಡಿದ್ದು ಅನಂತರ ಜನರು ತಮ್ಮ ಸಂಪೂರ್ಣ ಹೆಸರಿನ ಜತೆಗೆ ಕುಟುಂಬದವರ ಹೆಸರನ್ನು ಬರೆಯಲು ಪ್ರಾರಂಭಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳ ಹೆಸರು ಮತ್ತು ಛಾಯಾಚಿತ್ರಗಳನ್ನು ಹಲಗೆಗಳಲ್ಲಿ ಸೇರಿಸುತ್ತಿದ್ದಾರೆ. ಸಾಲು ಮನೆಗಳು ಅಪಾರ್ಟ್‌ಮೆಂಟ್ ವಿಲ್ಲಾಗಳು ಇರುವ ಕಡೆಗಳಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು , ಪ್ರಾದೇಶಿಕ ಭಾಷಾ ಫ‌ಲಕಗಳು ಕೂಡ ಇದರ ಜತೆಯಲ್ಲಿ ಜನಪ್ರಿಯತೆ ಹೊಂದುತ್ತಿವೆ.

ಚಿನ್ನ ಬೆಳ್ಳಿಯ ನಾಮಫ‌ಲಕ
ಗಾಜು, ಮರಗಳಿಂದ ಫ‌ಲಕಗಳಿರುವುದು ಸಾಮಾನ್ಯ ಆದರೆ ಕೆಲವೊಂದು ಮನೆಗಳಲ್ಲಿ ಈ ಫ‌ಲಕಗಳು ಚಿನ್ನ ಬೆಳ್ಳಿಗಳಿಂದ ಮಾಡಲಾಗುತ್ತಿದ್ದು ಅದರ ಹಿಂದೆ ಚಿಕ್ಕ ಚಿಕ್ಕ ಬಲ್ಬ್ಗಳನ್ನು ಇರಿಸಿ ರಾತ್ರಿಯಲ್ಲಿಯೂ ಅದು ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ.

ನಾಮಫ‌ಲಕಗಳನ್ನು ಮಾಡಿಸುವಾಗ ಆದಷ್ಟು ದೊಡ್ಡದಾಗಿ ಮಾಡಿಸಿ, ಮತ್ತು ಅದಕ್ಕೆ ನೀಡುವ ಬಣ್ಣ ಹಾಗೂ ನಿಮ್ಮ ಮುಖ್ಯ ದ್ವಾರಕ್ಕೆ ನೀಡಲಾದ ಬಣ್ಣ ಸರಿಹೊಂದುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದನ್ನು ಸರಳವಾಗಿ ತಯಾರಿಸಿಕೊಳ್ಳುವುದು ಉತ್ತಮ ಏಕೆಂದರೆ ಗ್ರ್ಯಾಂಡ್‌ ಲುಕ್‌ಗಳು ಮನೆಗೆ ಕೆಲವೊಮ್ಮೆ ಸರಿಹೊಂದುವುದಿಲ್ಲ. ನೇಮ್‌ ಪ್ಲೇಟ್ಗಳು ಆದಷ್ಟು ನೀರನ್ನು ಬಳಸಿ ಸ್ವಚ್ಛವಾಗಿರಿಸಿಕೊಳ್ಳಬಲ್ಲ ಫ‌ಲಕಗಳನ್ನೇ ಆಯ್ದುಕೊಳ್ಳಿ, ಏಕೆಂದರೆ ಇವುಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬಹುದು.

ಮನೆಗೊಂದು ಹೆಸರು ಇಡುವುದು ಎಷ್ಟು ಕಷ್ಟವೋ ಸುಂದರವಾದ ಕನಸಿನ ಮನೆಯ ನೇಮ್‌ ಪ್ಲೇಟ್ ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ವಿಚಾರ. ಇತ್ತೀಚಿನ ದಿನಗಳಲ್ಲಿ ನೇಮ್‌ ಪ್ಲೇಟ್ ಹೆಚ್ಚು ಪ್ರಾಮುಖ್ಯ ಪಡೆಯುತ್ತಿರುವುದರಿಂದಾಗಿ ವೈವಿಧ್ಯಮಯವಾದ, ಚಿತ್ತಾಕರ್ಷಕವಾದ ನೇಮ್‌ ಪ್ಲೇಟ್‌ಗಳು ಮನೆಯ ಗೇಟ್, ಹೊರಗೋಡೆಯಲ್ಲಿ ಅಲಂಕರಿಸುತ್ತಿವೆ.

ಬಜೆಟ್ ಸ್ನೇಹಿ ಆಯ್ಕೆ
ನಗರ ಹಳ್ಳಿ ಎನ್ನದೆ ಪರಿಸರ ಮಲೀನ ಗೊಳ್ಳುತ್ತಿದ್ದು ಅಂತಹ ಸಂದರ್ಭಗಳಲ್ಲಿ ಆದಷ್ಟು ಎಲ್ಲ ವಿಷಯಗಳನ್ನು ಪರಿಸರ ಸ್ನೇಹಿಯಾಗಿರುವುದನ್ನು ಆಯ್ಕೆ ಮಾಡಬೇಕು. ಅದಲ್ಲದೆ ಇದು ಬಜೆಟ್ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು. ಫ್ಲೈವುಡ್‌, ತೆಳು ಮತ್ತು ಪ್ಲೈನ್‌ ಮರ ಸೂಕ್ತವಾಗಿದ್ದು, ಪ್ರೀಫಾಮ್ರ್ಡ್ ಸಿರಾಮಿಕ್‌ ಅಕ್ಷರಗಳು ಸಹ ಫ್ಲೇಟ್ಗಳನ್ನು ರಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಚಿಕ್ಕ ಚಿಕ್ಕ ಕಲ್ಲುಗಳು, ಅಮೃತಶಿಲೆ, ಕನ್ನಡಿ ಮತ್ತು ಮೆದು ಕಬ್ಬಿಣವು ಸಾಮಾನ್ಯ ಆಯ್ಕೆಗಳಾಗಿವೆ. ಇದು ವೃತ್ತಾಕಾರ, ಆಯತಾಕಾರದ ಚೌಕ ಹೀಗೆ ಹಲವಾರು ರೀತಿಯ ಫ‌ಲಕಗಳು ಲಭ್ಯವಿದ್ದು , ಹೆಸರಿನ ಪ್ಲೇಟ್ಗಳನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಬಹುದಾಗಿದೆ. ಇದಲ್ಲದೆ ದೇವರು, ಹೂವಿನ ಇತ್ಯಾದಿ ಆಕೃತಿಗಳನ್ನು ಕೆತ್ತಬಹುದಾಗಿದೆ.

••ಪ್ರೀತಿ ಭಟ್ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next