Advertisement

ಒಳ್ಳೆಯ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ

09:58 AM Nov 26, 2019 | Lakshmi GovindaRaj |

“ಕನ್ನಡದಲ್ಲಿ ಒಳ್ಳೆಯ ಚಿತ್ರಗಳಾಗುತ್ತಿವೆ. ಆದರೆ, ನಾವುಗಳು ಒಳ್ಳೆಯ ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ. ಅಷ್ಟೇ ಅಲ್ಲ, ಈ ರೀತಿಯ ಸಿನಿಮಾಗಳಿಗೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಹೀಗಾದರೆ, ಇಂತಹ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯೋದು ಹೇಗೆ?’ ಹೀಗೆ ಬೇಸರಗೊಂಡಿದ್ದು ನಿರ್ದೇಶಕ ಪಿ.ಶೇಷಾದ್ರಿ. ಸಂದರ್ಭ; “ಮೂಕಜ್ಜಿಯ ಕನಸುಗಳು’ ಚಿತ್ರದ ಪತ್ರಿಕಾಗೋಷ್ಠಿ. ಹೀಗೆ ಹೇಳ್ಳೋಕೆ ಕಾರಣ, ಈ ಚಿತ್ರಕ್ಕೆ ಸಿಗದ ಚಿತ್ರಮಂದಿರಗಳು! ಈ ಕುರಿತು ಶೇಷಾದ್ರಿ ಹೇಳಿದ್ದಿಷ್ಟು.

Advertisement

“ಮೊದಲಿನಿಂದಲೂ ಈ ರೀತಿಯ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆ ಇದೆ. ಹಾಗಾಗಿ ಚಿಕ್ಕ ಚಿತ್ರಮಂದಿರಗಳ ಅಗತ್ಯವಿದೆ. ಮಲ್ಟಿಪ್ಲೆಕ್ಸ್‌ ಇರುವುದರಿಂದ ಇಂತಹ ಚಿತ್ರಗಳು ಬಿಡುಗಡೆಯಾಗಲು ಸಾಧ್ಯವಿದೆ. ಅಲ್ಲಿ ಶೇಕಡವಾರು ಆಧಾರದ ಮೇಲೆ ಬಿಡುಗಡೆಗೆ ಅವಕಾಶವಿದೆ. ಕೆಲವೇ ಸ್ಕ್ರೀನ್‌ ಇದ್ದರೂ ಪರವಾಗಿಲ್ಲ. ಅವಕಾಶವಿದೆ. ಚೆನ್ನಾಗಿಲ್ಲ ಅಂದ್ರೆ ಮೂರೇ ದಿನ ಹೋಗುತ್ತೆ. ಆ ಬಗ್ಗೆ ಬೇಜಾರಿಲ್ಲ. ಶೇ.40 ರಷ್ಟು ಗಳಿಕೆ ಇದ್ದರೆ, ಮುಂದುವರೆಸುತ್ತಾರೆ.

ಅದೊಂದು ರೀತಿ ಕಠಿಣವಾದ ನ್ಯಾಯ. ಆದರೆ, ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಯಾವತ್ತೂ ಶೇಕಡವಾರು ಆಧಾರದ ಮೇಲೆ ಬಿಡುಗಡೆಗೆ ಅವಕಾಶವೇ ಇಲ್ಲ. ಎಲ್ಲರೂ ಬಾಡಿಗೆ ಕೇಳ್ತಾರೆ. ಅದರಲ್ಲೂ ಮುಂಚಿತವಾಗಿಯೇ ಕೊಡಬೇಕು. ಬಾಡಿಗೆ ಕೊಟ್ಟು, ಇಂತಹ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯೋದು ಹೇಗೆ? ಇದೊಂದು ಯಕ್ಷ ಪ್ರಶ್ನೆ ಮತ್ತು ಜಿಟಿಲವಾದ ಸಮಸ್ಯೆ’ ಎಂದು ತಮ್ಮ ಬೇಸರ ಹೊರಹಾಕುತ್ತಾರೆ ಅವರು.

“ಸರ್ಕಾರ ಜನತಾಮಂದಿರಗಳನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಿತು. ಕನಿಷ್ಠ 250 ಆಸನಗಳ ಚಿತ್ರಮಂದಿರಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಹಾಕಿ, ಅಧಿಸೂಚನೆಯನ್ನೂ ಹೊರಡಿಸಿದೆ. ಆದರೂ ಸಾಧ್ಯವಾಗಿಲ್ಲ. ನಾವು ಇದಕ್ಕೆ ಉತ್ತರ ಕಂಡುಕೊಳ್ಳದಿದ್ದರೆ ಬಹಳ ಸಮಸ್ಯೆ ಆಗುತ್ತದೆ. ಈಗ ಸ್ಯಾಟ್‌ಲೈಟ್‌ ರೈಟ್ಸ್‌ ಕಾಲ ಇಲ್ಲ. ಡಿಜಿಟಲ್‌ ಫ್ಲಾಟ್‌ಫಾರ್ಮ್ ಇದ್ದರೂ, ಅದು ಸ್ಟಾರ್ ಸಿನಿಮಾಗಳಿಗೆ ಮಾತ್ರ.

ಡಿಜಿಟಲ್‌ ಫ್ಲಾಟ್‌ಫಾರ್ಮ್ನಲ್ಲೂ ಇಲ್ಲ, ಚಿತ್ರಮಂದಿರಗಳಲ್ಲೂ ಇಂತಹ ಚಿತ್ರಗಳಿಗೆ ಅವಕಾಶವಿಲ್ಲ. ಇಂಡಿಯಾದಲ್ಲಿ ಸುಮಾರು 30 ಕ್ಕೂ ಹೆಚ್ಚು ಡಿಜಿಟಲ್‌ ಫ್ಲಾಟ್‌ಫಾರ್ಮ್ ಇದ್ದರೂ, ಅವರಿಗೆ “ಮೂಕಜ್ಜಿ..’ಯಂತಹ ಚಿತ್ರಗಳು ಬೇಕಿಲ್ಲ. ಇಂದು ಸ್ಟ್ರೀಟ್‌ ಪಬ್ಲಿಸಿಟಿ ಮಾಡುವಂತಿಲ್ಲ. ಸೋಷಿಯಲ್‌ ಮೀಡಿಯಾ ನಂಬಿಕೊಂಡು ಕೂರುವಂತೂ ಇಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಲೈಕ್‌, ಕಾಮೆಂಟ್‌ ಮಾಡಿದವರು ಬಂದು ಸಿನಿಮಾ ನೋಡುವುದು ಕಷ್ಟ.

Advertisement

ಹಾಗಾದರೆ ಪ್ರೇಕ್ಷಕರು ಎಲ್ಲಿದ್ದಾರೆ, ಸಿನಿಮಾ ತಲುಪಿಸುವುದಾದರೂ ಹೇಗೆ ಇಂಡಿಯಾದಲ್ಲಿ ಅತೀ ಹೆಚ್ಚು ಚಿತ್ರಗಳು ತಯಾರಾಗುವ ಎರಡನೇ ರಾಜ್ಯವೆಂದರೆ ಕರ್ನಾಟಕ. ಇಲ್ಲಿ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ, ನೋಡುಗರ ಸಂಖ್ಯೆಯೇ ಇಲ್ಲ. ಮಲಯಾಳಂ, ಮರಾಠಿ ಚಿತ್ರರಂಗದಲ್ಲಿ ಫಿಲ್ಮ್ ಸೊಸೈಟಿಗಳು ಸಾಕಷ್ಟು ಇವೆ. ಅಲ್ಲಿ ಸಿನಿಮಾಗಳಿಗೆ ಬೆಂಬಲ ಸಿಗುತ್ತಿದೆ. ಬೆಂಗಳೂರಲ್ಲಿ ಸುಚಿತ್ರಾ ಫಿಲ್ಮ್ಸಿಟಿ ಆ್ಯಕ್ಟೀವ್‌ ಆಗಿರೋದು ಬಿಟ್ಟರೆ ಬೇರೆ ಯಾವುದೂ ಆ್ಯಕ್ಟೀವ್‌ ಇಲ್ಲ.

ಅಕಾಡೆಮಿ ಇದೆಯಾದರೂ, ಏನಾಗುತ್ತಿದೆ ಅನ್ನೋದು ಗೊತ್ತಿಲ್ಲ. ವಿತರಕರು, ಪ್ರದರ್ಶಕರು, ನಮ್ಮಂತಹ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಿ ಅಂದರೂ ಬಾಡಿಗೆ ಕೊಡಿ ಅನ್ನೋದು ಬಿಟ್ಟರೆ ಬೇರೇನೂ ಹೇಳಲ್ಲ. ಕಲಾತ್ಮಕ ಮಾತ್ರವಲ್ಲ, ಕಮರ್ಷಿಯಲ್‌ ಚಿತ್ರಗಳಿಗೂ ಇಲ್ಲಿ ಚಿತ್ರಮಂದಿರಗಳ ಸಮಸ್ಯೆ ಹೆಚ್ಚು. ಇದಕ್ಕೆ ಪರಿಹಾರ ಸಿಗೋದು ಯಾವಾಗ?’ ಎಂದು ಪ್ರಶ್ನಿಸುತ್ತಾರೆ ಶೇಷಾದ್ರಿ.

Advertisement

Udayavani is now on Telegram. Click here to join our channel and stay updated with the latest news.

Next