ಮುಂಬಯಿ: ಪಗಾರಕ್ಕಿಂತ ಪ್ರಾರ್ಥ ನೆಯೇ ಬಲಿಷ್ಠವಾದುದು. ಪ್ರಾಮಾಣಿಕತೆಯ ಪರಿಶ್ರಮಕ್ಕೆ ಯಾವತ್ತೂ ಪರಮಾತ್ಮನ ಕೃಪೆ ಇದ್ದೇ ಇದೆ. ಆದ್ದರಿಂದ ಭಗವಂತನ ವಿಶ್ವಾಸಕ್ಕೆ ಪಾತ್ರರಾದಾಗ ನಮ್ಮಲ್ಲಿ ಪರರ ಸೇವೆಗೆ ತನ್ನಿಂದ ತಾನೇ ಉತ್ತೇಜನ ಹುಟ್ಟುತ್ತದೆ. ವಿದ್ಯಾರ್ಜನೆಯ ಮೂಲಕ ಸುಶಿಕ್ಷಿತರನ್ನಾಗಿಸುವುದಕ್ಕಿಂತ ದೊಡ್ಡ ಸೇವೆ ಮತ್ತೂಂದಿಲ್ಲ. ಇಂತಹ ಸುಶಿಕ್ಷಿತರು ಭವಿಷ್ಯತ್ತಿನ ಪೀಳಿಗೆಗೆ ಮೂಲತ್ವ ಆಗಬಲ್ಲರು ಎಂದು ಬಾಂಬೆ ಉಚ್ಚ ನ್ಯಾಯಾಲಯದ ಕಾರ್ಯನಿರತ ನ್ಯಾಯಮೂರ್ತಿ ಜಸ್ಟೀಸ್ ನರೇಶ್ ಎಚ್. ಪಾಟೀಲ್ ಅವರು ಅಭಿಪ್ರಾಯಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ನಗರದ ಪ್ರತಿಷ್ಠಿತ ಸಂಸ್ಥೆ ಚೆಂಬೂರು ಕರ್ನಾಟಕ ಸಂಘ ಸಂಚಾಲತ್ವದ ಚೆಂಬೂರು ಕರ್ನಾಟಕ ರಾತ್ರಿ ಕಾಲೇಜನ್ನು ಸೆ. 29ರಂದು ಸಂಜೆ ಚೆಂಬೂರು ಘಾಟ್ಲಾ ವಿಲೇಜ್‌ನ ವಿದ್ಯಾಸಾಗರ್ ವಿದ್ಯಾ ಸಂಕುಲದಲ್ಲಿನ ಸಂಘದ ಕಾನೂನು ಕಾಲೇಜು ಸಭಾಗೃಹದಲ್ಲಿ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.
ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ| ಜಸ್ಟೀಸ್ ಶಿವರಾಜ್ ವಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟೀಸ್ ಪ್ರಕಾಶ್ ಡಿ. ನಾೖಕ್, ಜಸ್ಟೀಸ್ ಸಾರಂಗ್ ವಿ. ಕೊತ್ವಾಲ್ ಮತ್ತು ಜಸ್ಟೀಸ್ ರಿಯಾಜ್ ಐ. ಚಾಗ್ಲಾ ಉಪಸ್ಥಿತರಿದ್ದು, ಜಸ್ಟೀಸ್ ಶಿವರಾಜ್ ಅವರ “ಗುಡ್ ಮಾರ್ನಿಂಗ್ 365′ ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಜಸ್ಟೀಸ್ ಶಿವರಾಜ್ ವಿ. ಪಾಟೀಲ್ ಅವರು ಮಾತನಾಡಿ, ಚೆಂಬೂರು ಕರ್ನಾಟಕ ಸಂಘ ಶಿಕ್ಷಣ ವಲಯದಲ್ಲಿ ಮತ್ತೂಂದು ಮೈಲುಗಲ್ಲು ರೂಪಿಸಿದೆ. ಸುಮಾರು ಆರೂ ವರೆ ದಶಕಗಳ ಹಿಂದೆ ಗ್ಯಾರೇಜ್‌ವೊಂದರಲ್ಲಿ 4 ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಆರಂಭಿಸಿದ ಈ ಸಂಸ್ಥೆ ಇಂದು 4,000 ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸುತ್ತಿರುವುದು ಸ್ತುತ್ಯರ್ಹ. ವಿದ್ಯಾ ಸಂಕುಲದಲ್ಲಿ ಬಹುಮಹಡಿಯ ಕಟ್ಟಡಗಳನ್ನೇ ರೂಪಿಸಿ ವಚನಬದ್ಧವಾಗಿ ಸಮಾಜಪರ ಕೆಲಸ ಮಾಡುತ್ತಿದ್ದೀರಿ. ಇಂತಹ ನಿಷ್ಠಾ ಸಮರ್ಪಣಾ ಮನೋಭಾವವುಳ್ಳ ಸಂಘಗಳಿಂದ ಮಾತ್ರ ಸಮಾಜೋನ್ನತಿ ಸಾಧ್ಯ. ಸಂಸ್ಥೆಗಳ ಆಡಳಿತ ಮಂಡಳಿಯ ಪರಸ್ಪರ ಹೊಂದಾಣಿಕೆ, ಆದರ್ಶ ಪ್ರಾಂಶುಪಾಲರು, ಸಮರ್ಥ ಶಿಕ್ಷಕ ವೃಂದ, ಶಿಸ್ತುವುಳ್ಳ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಯೋಗದಿಂದ ಮಾತ್ರ ಯಾವುದೇ ಶಿಕ್ಷಣ ಸಂಸ್ಥೆ ಪ್ರತಿಷ್ಠಿತವಾಗಿ ಬೆಳೆಯಲು ಸಾಧ್ಯ. ರಾತ್ರಿ ಶಾಲೆಗಳು ಜನಸಾಮಾನ್ಯರಿಗೆ ತುಂಬಾ ಪ್ರಯೋಜನ ಆಗಿ ಬದುಕನ್ನೇ ಬದಲಾಯಿಸಿವೆ. ಸ್ಪರ್ಧಾತ್ಮಕ ಜೀವನದ ಈ ಕಾಲಘಟ್ಟದಲ್ಲಿ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ನೀತಿ ಅನುಸರಿಸುವಿಕೆಯಿಂದ ಮೌಲ್ಯಯುತ ಶಿಕ್ಷಣಕ್ಕೆ ತೊಡಕಾಗುತ್ತಿದೆ. ವಿವಿಧ ಅನನುಕೂಲಗಳಿಂದ ವಿದ್ಯಾಭ್ಯಾಸ ವಂಚಿತರಿಗೆ ರಾತ್ರಿ ಶಾಲೆಗಳೇ ದೇಗುಲಗಳಾಗಿ ಮೂಲಭೂತ ಸೌಕರ್ಯಗಳನ್ನು ಪಡೆಯಲು ಫಲಕಾರಿಯಾಗಿವೆೆ. ಇದಕ್ಕೊಂದು ಉದಾ ಹರಣೆಯೇ ಚೆಂಬೂರು ಕರ್ನಾಟಕ ಸಂಸ್ಥೆಯ ಶೈಕ್ಷಣಿಕ ಸಂಸ್ಥೆಗಳು. ಪ್ರಸಕ್ತ ಕಾಲಘಟ್ಟದಲ್ಲಿ ಶಿಕ್ಷಣ ಮೌಲ್ಯ ಕುಸಿಯುತ್ತಿದ್ದು ಈ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಣಾಭಿಮಾನಿಗಳು ಉತ್ತರ ಕಂಡುಕೊಳ್ಳುವುದು ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಮಾಜದ ಓರ್ವ ಸರ್ವೋತ್ತ¤ಮ ನಾಗರಿಕರನ್ನಾಗಿ ಮಾಡಿದಾಗ ವಿದ್ಯಾಲಯಗಳ ಸೇವೆ ಸಾರ್ಥಕವಾಗುವುದು ಎಂದರು.
ಶ್ಯಾಮಲಾ ರಾಧೇಶ್ ಪ್ರಾರ್ಥನೆಗೈದರು. ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಸ್ವಾಗತಿಸಿದರು.
ಮಾ| ಶೀಜಿ ವಿ. ರಾಣೆ, ಕು| ಅತಿಥಿ ಅಭಯ್, ಕು| ಬಿಯಲ್ ಕೆ. ಗೋಗ್ರಿ, ಮಾ| ರಾಹುಲ್ ನಾಯ್ಡು, ಕು| ಪೂನಂ ಬಿ. ಪಾಲ್ ಅತಿಥಿಗಳನ್ನು ಪರಿಚಯಿಸಿದರು.
ಎಚ್. ಕೆ. ಸುಧಾಕರ್, ಉಪಾಧ್ಯಕ್ಷ ಪ್ರಭಾಕರ ಬಿ. ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ ಶೆಟ್ಟಿಗಾರ್, ಜತೆ ಕೋಶಾಧಿಕಾರಿ ಸುಂದರ್ ಕೋಟ್ಯಾನ್ ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕು| ಅತಿಥಿ ಅಭಯ್, ಗ್ಲಿಟ್ಸನ್ ವರ್ಗೀಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಾರಂಭದಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುಣಕರ್ ಎಚ್. ಹೆಗ್ಡೆ, ಯೋಗೇಶ್ ವಿ. ಗುಜರನ್, ರಾಮ ಪೂಜಾರಿ, ಮಧುಕರ್ ಜಿ. ಬೈಲೂರು, ಮೋಹನ್ ಎಸ್. ಕಾಂಚನ್, ರಂಜನ್ ಕುಮಾರ್ ಆರ್. ಅಮೀನ್, ಚಂದ್ರಶೇಖರ ಅಂಚನ್, ಅಶೋಕ್ ಸಾಲ್ಯಾನ್, ಜಯ ಎಂ. ಶೆಟ್ಟಿ, ದಯಾಸಾಗರ್ ಚೌಟ ಸೇರಿದಂತೆ ವಿವಿಧ ವಿದ್ಯಾಲಯಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು, ಶಿಕ್ಷಕ-ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ನೂರಾರು ಶಿಕ್ಷಣಾ ಭಿಮಾನಿಗಳು, ಕನ್ನಡಾಭಿಮಾನಿಗಳು ಉಪಸ್ಥಿತ ರಿದ್ದು ಶುಭಹಾರೈಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್