Advertisement

ಮುಟ್ಟಿ ಅವಮಾನಿಸುವ ಸಭ್ಯ ಪುರುಷರು!

06:25 AM Jul 28, 2017 | |

ಮುದುಡಿ ಕುಳಿತುಕೊಳ್ಳುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದದ್ದೇ. ಬದುಕಿಡೀ ಮುದುಡಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಕೆಲವು ಹೆಣ್ಣುಮಕ್ಕಳಿಗಾದರೆ, ಇನ್ನು ಕೆಲವರು ದಿನ ನಿತ್ಯದ ಬಸ್ಸು, ರೈಲು, ವಿಮಾನದ ಪ್ರಯಾಣದಲ್ಲಿ ಮುಜುಗರದಿಂದ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ! ಹೆಂಗಸರಿಗಾಗಿ ಮೀಸಲಾದ ಸೀಟುಗಳನ್ನು ಬಿಟ್ಟು ಬೇರೆ ಸೀಟುಗಳಲ್ಲಿ ಕುಳಿತರೆ ಅದೇಕೋ ಸಂಕೋಚರಹಿತವಾಗಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ.
 
ಪಕ್ಕದಲ್ಲಿ ಯಾರೋ ಗಂಡಸರು ಕುಳಿತಿರುತ್ತಾರೆ ಎಂದಿಟ್ಟುಕೊಳ್ಳಿ. ಎಲ್ಲ ಗಂಡಸರು, ಹೆಂಗಸರ ಮೇಲೆ ಕೆಟ್ಟ ದೃಷ್ಟಿ ಹಾಕುತ್ತಾರೆ ಅಂತ ನಾನು ಹೇಳುವುದಿಲ್ಲ. ಆದರೆ, ತಮ್ಮ ಹತ್ತಿರ ಕುಳಿತ ಗಂಡಸರು “ಒಂಥರ’ ವರ್ತಿಸಿದ ಸಂದರ್ಭವನ್ನು ಹೆಚ್ಚಿನ ಮಹಿಳೆಯರು ತಮ್ಮ ಬದುಕಿನ ಹಲವಾರು ಸಂದರ್ಭಗಳಲ್ಲಿ ಅನುಭವಿಸಿರುತ್ತಾರೆ. ನಮ್ಮ ದೇಹದ ಆಗುಹೋಗುಗಳನ್ನು, ಕ್ರಿಯೆ-ಪ್ರತಿಕ್ರಿಯೆಗಳನ್ನು ನಿಯಂತ್ರಿಸುವುದು ನಮ್ಮದೇ ಮನಸ್ಸು. ಹೆಣ್ಣುಮಗುವಿಗೂ ಮನಸ್ಸು ಎಂಬುದಿದೆ. ಆದರೆ, ಬಾಲ್ಯದ ದಿನಗಳಿಂದಲೇ ಗಂಡನನ್ನು ಹೊರತುಪಡಿಸಿ ಉಳಿದ ಗಂಡಸರನ್ನು ಸ್ಪರ್ಶಿಸುವುದು ಘೋರ ಅಪರಾಧ ಎಂಬ ಭಾವ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಬೇರೂರುವಂತೆ ಮಾಡಲಾಗಿರುತ್ತದೆ. ಹಾಗೆ, ದೇಹ ಮತ್ತು ಮನಸ್ಸು ಬೆಳೆದ ಹಾಗೆ “ಗಂಡಸರ ಉಗುರು’ ಕೂಡ ಹೆದರಿಕೆ ಹುಟ್ಟಿಸತೊಡಗುತ್ತದೆ. ಬಾಲ್ಯಕಾಲದಲ್ಲಿ ಆಗಿರಬಹುದಾದ ಕಹಿ ಅನುಭವಗಳಿಂದ ಹೆಣ್ಣುಮಗಳೊಬ್ಬಳು, “ಮುಟ್ಟಿದರೆ ಮುನಿ’ಯಂಥ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾಳೆ. 

Advertisement

ಹೆಣ್ಣುಮಗು ಬೆಳೆದು ಹೆಣ್ಣು ಮಗಳಾಗಿ ಬದಲಾವಣೆಗೊಳ್ಳುವ ಸಮಯದಲ್ಲಿ, ಅಲ್ಲಲ್ಲಿ ಸಂತೆಮಾರುಕಟ್ಟೆಗಳಲ್ಲಿ, ಕಚೇರಿಗಳಲ್ಲಿ, ಬಸ್ಸು-ರೈಲು-ವಿಮಾನ ನಿಲ್ದಾಣಗಳಲ್ಲಿ ಮೈಮೇಲೆ ಹರಿದಾಡುವ ಕಣ್ಣುಗಳು, ಸಿನೆಮಾ ಮಂದಿರದ ಕತ್ತಲಲ್ಲಿ ತಾಕುವ ಕೈಗಳು… ಅವಳ ಮೈಯ ಮೇಲೆ ಮುಳ್ಳು ಏಳುವಂತೆ ಮಾಡಿರುತ್ತವೆ. ಪುರುಷನೊಬ್ಬ ಸ್ತ್ರೀಯನ್ನು ಕೆಲವೊಮ್ಮೆ ಯಾವುದೇ ಕೆಟ್ಟ ಭಾವವಿಲ್ಲದೆ ಸ್ಪರ್ಶಿಸಿದಾಗಲೂ ತಪ್ಪಾಗಿ ಭಾವಿಸಿ ಸಿಡುಕಿದರೆ ಅದನ್ನು ಹೆಣ್ಣಿನ ಅತಿರೇಕದ ವರ್ತನೆಯೆಂದು ಹೇಳಲಾಗದಂಥ ಸ್ಥಿತಿ ಇಂದು ಇದೆ. ಮನೆಯ ಹೆಣ್ಣುಮಕ್ಕಳಿಗೆ “ಗಂಡಸರನ್ನು ತಾಕಿಸಿಕೊಳ್ಳಬೇಡಿ’ ಎಂದು ಪಾಠ ಹೇಳುವ ಸಭ್ಯ ಕೂಡ, ತಾನು ಪ್ರಯಾಣಿಸುವಾಗ ಪಕ್ಕದಲ್ಲಿನ ಹೆಣ್ಣಿನ ಮೈ ತನಗೆ ತಾಕಬಾರದೆಂದು ನಿರೀಕ್ಷಿಸಬಹುದು; ಹಾಗೆ ತಾಕಿದರೂ ಆಕೆಯ ಗುಣ ಸರಿಯಿಲ್ಲ ಎಂದು ತನಗೆ ತಾನೇ ಭಾವಿಸಬಹುದು. ಆದರೆ, ಆತ, ತಾನು ಬಯಸಿದಾಗ ಆಕೆಗೆ ತಾಕಲು ಹಿಂಜರಿಯುವುದಿಲ್ಲ, ತಾನು ಆಕೆಯನ್ನು ತಪ್ಪಿಯೂ ಸ್ಪರ್ಶಿಸಬಾರದು ಎಂದು ಪ್ರಯತ್ನ ಪಡುವುದಿಲ್ಲ. 

ಆಗಲೇ ಹೆಣ್ಣಿನ “ಮುದುಡುವಿಕೆ’ ಆರಂಭವಾಗುತ್ತದೆ. ಎಲ್ಲರ ಮುಂದೆ ಸಭ್ಯರಂತೆ ಕಾಣಿಸುವ ಪುರುಷರು, ಯಾರೂ ನೋಡದ ಸಂದರ್ಭ ಸಿಕ್ಕರೆ ಸಹಜವೆಂಬಂತೆ ತನ್ನ ಮೈಯನ್ನು ಸನಿಹ ಕೂತವಳಿಗೆ ತಮ್ಮ ಮೈಯ ಯಾವುದಾದರೂ ಭಾಗವನ್ನು ಸ್ಪರ್ಶಿಸಲು ಹಿಂದೇಟು ಹಾಕುವುದಿಲ್ಲ. ಹಾಗೆ ತಾಕಿಸಿ ಸಂತೋಷ ಪಡುವವರ ಸಂಖ್ಯೆ ತುಂಬಾನೇ ಇದೆ. ಹಾಗಾಗಿ, ಹೆಣ್ಣಿಗೆ ಮುದುಡುವಿಕೆ ಅನಿವಾರ್ಯವಾಗುತ್ತದೆ. ಪಕ್ಕದಲ್ಲಿ ಕುಳಿತ ಹೆಣ್ಣಿನ ದೇಹ ತನಗೆ ತಾಗಿಸುವುದಕ್ಕಷ್ಟೇ ಇರುವುದು ಎಂದು ಭಾವಿಸುವ ಗಂಡಸರಿಗೇನೂ ಕಡಿಮೆ ಇಲ್ಲ. ಒಟ್ಟಿನಲ್ಲಿ ಪ್ರಯಾಣ ಎಂದರೆ ಕಷ್ಟ ಎಂದು ಬೇಸರಪಡುವುದು ಅವಳ ಹಣೆಬರಹವಾಗಿರುತ್ತದೆ. ಕೇವಲ ಪ್ರಯಾಣದಲ್ಲಿ ಮಾತ್ರವಲ್ಲ, ಇಡೀ ಜೀವನದಲ್ಲಿಯೇ ಆಕೆ ಮುದುಡಿಯೇ ಇರಬೇಕಾದ ಪರಿಸ್ಥಿತಿ ಇಂದು ಇದೆ!

ಯಾಕೆ ಇಂಥ ಮುದುಡುವಿಕೆ ಹೆಣ್ಣಿನ ಗುಣದ ಸಹಜ ಲಕ್ಷಣ ಎಂಬಂತೆ ಆಯಿತು? ವಿಭಿನ್ನ ದೃಷ್ಟಿಯಿಂದ ಇದನ್ನು ಗಮನಿಸಬೇಕಾಗಿದೆ. ಕಪಟದೂÂತ‌ ಪ್ರಕರಣದ ಬಳಿಕ, ದುರ್ಯೋಧನ ದ್ರೌಪದಿಯನ್ನೇಕೆ ಎಳೆದು ತರಿಸಿದ? ಆಕೆಯನ್ನು ತೊಡೆಯ ಮೇಲೇಕೆ ಕುಳಿತುಕೊಳ್ಳಲು ಹೇಳಿದ? ಸೋಲಿಸಿದ್ದು ಪಾಂಡವರನ್ನೇ ಹೊರತು, ಅವರ ಪತ್ನಿಯಾದ ದ್ರೌಪದಿಯನ್ನು ಸ್ಪರ್ಶಿಸುವ ಅಗತ್ಯ ಅವನಿಗಿರಲಿಲ್ಲ. ಅದರಿಂದ ಅವನಿಗೇನೂ ನೇರ ಸಂತೋಷವಿಲ್ಲ. ಆದರೂ ಸಾಧ್ಯವಾದರೆ ಅವಳನ್ನು ಮುಟ್ಟಿ , ಅವಮಾನಿಸುವ ಒಂದೇ ಉದ್ದೇಶ ಎದ್ದು ಕಾಣುತ್ತದೆ. ಇದೊಂದು ವಿಕೃತಿ. “ಮುಟ್ಟುವಿಕೆ’ ಎಂಬ ಕ್ರಿಯೆಯು ಅವಮಾನಿಸುವುದಕ್ಕಿರುವ ದಾರಿ. ಹಾಗಾಗಿ, ಅದು ಆಕೆಯನ್ನು ಚಿಪ್ಪಿನೊಳಗೆ ಮುದುಡಿ ಕೂತ ಹುಳದಂತೆ ಮಾಡುತ್ತದೆ. ಒಬ್ಬ ಮನುಷ್ಯ ಇನ್ನೊಂದು ಮನುಷ್ಯನನ್ನು  ಅವಮಾನಿಸುವ ವಿಕೃತಿಯೇನೂ ಸಮಾಜದಲ್ಲಿ ಹೊಸತಲ್ಲ, ಅದು ಒಪ್ಪತಕ್ಕದ್ದೂ ಅಲ್ಲ. ಆದರೆ, ಹೆಣ್ಣಿನ ಮೇಲೆ  ಬಹುಜನರು ತೋರುವ ಈ ವಿಕೃತಿ ಸಹಜವೆಂಬಂತೆ ಬಿಂಬಿತವಾಗಿದೆ. ಪುರುಷ ಇನ್ನೊಬ್ಬ ಪುರುಷನಿಗೆ ನೀಡಬಹುದಾದ ಸಾಮಾನ್ಯ ಗೌರವಕ್ಕೆ ಪಾತ್ರರಾಗದಷ್ಟೂ ಕೀಳಾಗಿ ಹೆಣ್ಣನ್ನು ಕಾಣುವುದೇಕೆ? ಒಂಟಿಯಾಗಿ ಪ್ರಯಾಣಿಸುವಾಗ ದೇಹವನ್ನು ಸೀಟಿನ ತುಂಬ ಚೆಲ್ಲಿ ನೆಮ್ಮದಿಯಿಂದ ಇರಲಾಗದಂಥ ಸ್ಥಿತಿಗೆ ಯಾರು ಕಾರಣರು? ಮುದುಡಿಯೇ ಇರಬೇಕು ಎಂಬುದು ಹೆಣ್ಣಿನ ಬದುಕಿಗೆ ಅಂಟಿದ ಶಾಪವೆ?

(ಲೇಖಕಿ ಎಂ. ಡಿ. ಪದವೀಧರೆ. ಮಂಗಳೂರಿನ ಕೆ. ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಪ್ರೊಫೆಸರ್‌ ಆಗಿದ್ದಾರೆ.)

Advertisement

– ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next