Advertisement
ನನಗೆ ನಾಯಿ ಅಂದರೆ ಎತ್ತಿಕೊಂಡು ಮುದ್ದಾಡುವಷ್ಟು ಪ್ರೀತಿ ಎಂದಿಗೂ ಇಲ್ಲ. ಆದರೆ ಅವುಗಳ ಪ್ರೀತಿಗೆ ತಲೆ ಸವರಿ ಖುಷಿಯನ್ನು ವ್ಯಕ್ತ ಪಡಿಸುವ ಗುಣವಿದೆ. ನಮ್ಮಮನೆಯಲ್ಲಿ ಒಂದು ಚೆಂದದ ಉದ್ದ ಕೂದಲಿನ ನಾಯಿಯೊಂದಿತ್ತು. ಅದಕ್ಕೆ ಊಟ ಹಾಕಿದರೆ ಮತ್ತೆ ಏನನ್ನು ಕೇಳದ ಆ ನಾಯಿ ಹೆಸರು ಬೆಳ್ಳ. ನಾನು ಯಾವತ್ತು ಬೆಳ್ಳನಿಗೆ ಕೆಲಸ ಒಪ್ಪಿಸಿದ್ದಿಲ್ಲ. ಆದರೆ ಒಮ್ಮೆ ನನ್ನ ನಾಲ್ಕು ವರ್ಷದ ಪುಟ್ಟ ಕಂದನನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಹೋಗಬೇಕಾಯ್ತು. ಆಗ ಎದುರಾದ ಬೆಳ್ಳನಿಗೆ ಮಗು ಒಂದೇ ಇದೆ ಈ ಮೆಟ್ಟಿಲಲ್ಲಿ ಕೂತ್ಕೊ ಹುಶಾರು ಇಷ್ಟೆ ಹೇಳಿ ಹೋಗಿದ್ದು. ನಾನು ಅರ್ಧಗಂಟೆ ಬಿಟ್ಟು ಬಂದು ನೋಡಿದಾಗಲೂ ನಾನು ತೋರಿಸಿದ ಜಾಗದಲ್ಲೇ ಕೂತಿದ್ದ. ಅಷ್ಟೆ ಅಲ್ಲ ನನ್ನ ಎದುರು ಬಗ್ಗಿ ನಾನು ಸರಿಯಾಗಿ ಕೆಲಸ ಮಾಡಿದ್ದೇನಾ ಎನ್ನುವಂತೆ ಬಗ್ಗಿ ನಮಸ್ಕರಿಸಿ ಕೇಳಿದ್ದ. ಅದರ ನಿಷ್ಠೆ ಕಂಡು ಅಂದೆ ಸಂತೋಷದ ಕಣ್ಣೀರು ಬಂದಿತ್ತು. ಅದಾದ ಕೇವಲ ನಾಲ್ಕೆ ತಿಂಗಳಲ್ಲಿ ಬೆಳ್ಳ ಕಣ್ಣಿಗೆ ಕಾಣದಂತೆ ಮರೆಯಾದ. ಎಲ್ಲಿಗೆ ಹೋದ, ಏನಾದ ಒಂದು ತಿಳಿಯಲಿಲ್ಲ. ರಸ್ತೆಯ ಪಕ್ಕದ ಮನೆಯಾಗಿದ್ದರಿಂದ ಆಕ್ಸಿಡೆಂಟ್ ಆಗಿದ್ಯಾ ಅಂತ ನೋಡಿದ್ದಾಯ್ತು. ಆಚೀಚೆ ಮನೆ ಕೇಳಿದ್ದಾಯ್ತು. ಸಿಗಲೇ ಇಲ್ಲ. ಊರಲ್ಲಿ ಬೇರೆ ಬೇರೆ ಮನೆಗಳಲ್ಲಿ ತಮ್ಮ ನಾಯಿಗಳಿಲ್ಲ ಕಳುವಾಗಿದೆ ಎಂದಾಗ ಎದೆ ದಸಕ್ ಎಂದಿತು. ಇವತ್ತಿಗೂ ನಾಯಿ ಎಂದರೆ ಬೆಳ್ಳನೇ ನೆನಪಾಗೋದು. ಅವನ ನೋಟ ಆಟ ನಿಯತ್ತು ಎಲ್ಲವೂ ಮರೆತೆನೆಂದರೂ ಮರೆಯಲಾಗದು. ಹೊಸ ವರ್ಷ ಮರುಕಳಿಸಿದೆ. ಆದರೆ ಬೆಳ್ಳ ಮಾತ್ರ ಮತ್ತೂಂದು ವರ್ಷಕ್ಕೂ ನೆನಪಿನೊಟ್ಟಿಗೆ ನಮ್ಮ ಜೊತೆಯಾಗಿ ಬಂದೆ ಬರುತ್ತಾನೆ.
Advertisement
New Year: ಬೆಳ್ಳಗಿನ ನೆನಪುಗಳನ್ನು ಬಿಟ್ಟು ಮರೆಯಾದ…
12:39 PM Dec 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.