ಕುಂಬಳೆ: ಕಬ್ಬಿಗೆ ಅದರ ಸಿಹಿ ಹೇಗೆ ಭೂಷಣವೋ ಹಾಗೆಯೇ ಮನುಷ್ಯ ನಿಗೆ ಸದ್ಗುಣಗಳಿದ್ದಲ್ಲಿ ಮಾತ್ರ ಸಮಾಜ ದಲ್ಲಿ ಬೆಲೆ ಅಥವಾ ಮೌಲ್ಯ ಸಿಗುತ್ತದೆ. ಆದ್ದರಿಂದ ಮಾನವನು ನೈತಿಕ ಮೌಲ್ಯ ಗಳನ್ನು ಬೆಳೆಸಿಕೊಂಡಾಗ ಸಾಮಾಜಿಕ ಜವಾಬ್ದಾರಿ ತನ್ನಷ್ಟಕ್ಕೇ ಬರುತ್ತದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರ ಗೋಡು ಜಿಲ್ಲೆ ಇದರ ಅಧ್ಯಕ್ಷ ಶಿವರಾಮ ಕಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನ ಶ್ರೀ ಸತ್ಯಸಾಯಿ ಸಂಸ್ಥೆ ಗಳು ವಿದ್ಯಾಜ್ಯೋತಿ ವಾಹಿನಿ ಯೋಜನೆ ಯಡಿ ದತ್ತು ತೆಗೆದುಕೊಂಡ ಕುಂಬಳೆ ಸಮೀಪದ ಕುಂಟಂಗೇರಡ್ಕ ಸರಕಾರಿ ವೆಲ್ಫೆàರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಯಾರು ಸೇವಾ ಸಮಿತಿಯ ನೇತೃತ್ವ ದಲ್ಲಿ ಹಮ್ಮಿಕೊಂಡ ಶಾಲೆಗೆ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ರಮದ ಪ್ರಯುಕ್ತ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಕಾಸರಗೋಡು ಜಿಲ್ಲೆಯ ಸಾಯಿ ಸೇವಾ ಸಮಿತಿಗಳು ಪ್ರಸ್ತುತ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಿ ಅಭಿವೃದ್ಧಿ ಪರ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸಿವೆ. ಇಲ್ಲಿನ ವಿದ್ಯಾರ್ಥಿಗಳು ಉನ್ನತವಾದ ಜ್ಞಾನವನ್ನು ಪಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಮಿನುಗಲಿ ಎಂದು ಶುಭ ಹಾರೈಸಿದರು.
ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಸಮಾರಂಭವನ್ನು ಉದ್ಘಾಟಿಸಿ, ಇಡೀ ಜಿಲ್ಲೆಯಲ್ಲಿ ಕುಂಬಳೆಯ ಕುಂಟಂಗೇರಡ್ಕ ಸರಕಾರಿ ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸತ್ಯಸಾಯಿ ಸಮಿತಿಯವರ ಸೇವಾ ಮನೋಭಾವ ಅತ್ಯಂತ ಶ್ಲಾಘನೀಯ. ಪಂಚಾಯತ್ ಅಥವಾ ಇನ್ನಿತರ ಜವಾಬ್ದಾರಿಯುತ ವ್ಯವಸ್ಥೆ ಮೂಲಕ ನಾಡಿನ ಮೂಲೆ ಮೂಲೆಗೂ ಗಮನ ಹರಿಸಲು ಸಾಧ್ಯವಿಲ್ಲ. ಆದರೆ ಮುಂದಿನ ಜನಾಂಗದ ಅಭಿವೃದ್ಧಿಗೆ ಇಂತಹ ಸೇವಾ ಸಂಸ್ಥೆಗಳು ಮುಂದೆ ಬರುತ್ತಿರುವುದು ಒಳ್ಳೆಯ ಸಂಗತಿ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಕುಂಬಳೆ ಗ್ರಾ.ಪಂ. ಸದಸ್ಯೆಯರಾದ ಪ್ರೇಮಲತಾ ಎಸ್., ಪುಷ್ಪಲತಾ ಎನ್. ಉಪಸ್ಥಿತರಿದ್ದರು. ಶಿರಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಮಲಾರ್ ಜಯರಾಮ ರೈ, ಬಾಯಾರು ಸೇವಾ ಸಮಿತಿಯ ಕಟ್ಟದಮನೆ ಗೋಪಾಲಕೃಷ್ಣ ಭಟ್, ಉಪ್ಪಳ ಸಮಿತಿಯ ಶಿವಾನಂದ ಐಲ, ಕಾಸರಗೋಡು ಸಮಿತಿಯ ಶಿವರಾಮ ಶೆಟ್ಟಿ , ಮಧೂರು ಸಮಿತಿಯ ಮಾಧವ ಮಯ್ಯ, ಪ್ರೇಮಲತಾ ಟೀಚರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಭಟ್ ಕುಂಬಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಿಲ್ಲಾ ಯುವ ಸಂಚಾಲಕ ಕೃಷ್ಣಪ್ರಸಾದ್ ಕಾಟುಕುಕ್ಕೆ ವಂದಿಸಿದರು. ರಾಮಚಂದ್ರ ಐಲ ಕಾರ್ಯಕ್ರಮ ನಿರ್ವಹಿಸಿದರು.
ಶಾಲೆಯ ಅಭಿವೃದ್ಧಿ ಉದ್ದೇಶ
ದತ್ತು ಸ್ವೀಕರಿಸಿಕೊಂಡ ಕುಂಟಂಗೇರಡ್ಕ ಸರಕಾರಿ ವೆಲ್ಫೆàರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಮನೋಭಿವೃದ್ಧಿ ಮತ್ತು ಶಾಲಾ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇದೀಗ ಸಂಪೂರ್ಣ ಶಾಲಾ ಕಟ್ಟಡಕ್ಕೆ ಸುಣ್ಣ ಮತ್ತು ಬಣ್ಣದ ಪೈಂಟಿಂಗ್ ಮಾಡುವ ಮೂಲಕ ಹೊಸ ಕಳೆಯನ್ನು ನೀಡಲಾಯಿತು. ಅಲ್ಲದೆ ಶಾಲೆಯ ಅಭಿವೃದ್ಧಿಯ ಗುರಿಯೊಂದಿಗೆ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.