Advertisement

ಬಡವರಿಗೆ ಉತ್ತಮ ಚಿಕಿತ್ಸೆ ನೀಡಿದರೆ ಪುಣ್ಯ ಪ್ರಾಪ್ತಿ

11:04 AM Apr 26, 2022 | Team Udayavani |

ಗಂಗಾವತಿ: ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನ ಮಾಡಿದ್ದರಿಂದ ಜನರಿಗೆ ಎಲ್ಲ ಆರೋಗ್ಯ ಸೇವೆಗಳು ಲಭ್ಯವಾಗಿವೆ. ಆದ್ದರಿಂದ ಸತತ ಮೂರನೇ ಬಾರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಕಾಯಕ ಆಸ್ಪತ್ರೆ ಪ್ರಶಸ್ತಿ ಲಭಿಸಿದೆ. ಇದರಂತೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭಿಸಬೇಕೆಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಅವರು ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಂಗಾವತಿ ಸರಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇರದಂತೆ ಸ್ವಚ್ಛತೆ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಕಡಿಮೆ ಇಲ್ಲ. ನಿತ್ಯವೂ ಗಂಗಾವತಿ ಹಾಗೂ ಬೇರೆ ಊರುಗಳಿಂದ ರೋಗಿಗಳು ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿರುವುದು ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕಾರ್ಯ ಮೆಚ್ಚುವಂತಹದ್ದು.

ಈ ಬಾರಿಯ ಕಾಯಕ ಪ್ರಶಸ್ತಿ ಜತೆ 15 ಲಕ್ಷ ರೂ. ನಗದು ಹಣ ಬಂದಿದ್ದು, ತಾವು ಸಹ ವೈಯಕ್ತಿಕವಾಗಿ 5 ಲಕ್ಷ ರೂ. ವಿತರಿಸುತ್ತಿದ್ದು, ಆಸ್ಪತ್ರೆಯ ಮೂಲಸೌಕರ್ಯ ಕಲ್ಪಿಸುವ ಜತೆ ಇಲ್ಲಿಯ ವೈದ್ಯರು ಸಿಬ್ಬಂದಿ ವರ್ಗದವರಿಗೂ ಶೇ. 30ರಷ್ಟು ಹಣ ವಿತರಣೆ ಮಾಡಬೇಕು.

ಜನಪ್ರತಿನಿಧಿಗಳನ್ನು ಮೆಚ್ಚಿಸಲು ಕೆಲವೊಮ್ಮೆ ಅವರು ಆಗಮಿಸಿದ ಸಂದರ್ಭದಲ್ಲಿ ಮಾತ್ರ ಶಿಸ್ತು ಸ್ವಚ್ಛತೆಯಿಂದ ಕಾರ್ಯಕ್ರಮ ನಡೆಸಲಾಗುತ್ತದೆ. ತಾವೂ ಈ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು.

Advertisement

ಇದೇ ಮಾದರಿಯಲ್ಲಿ ನೂತನ ವಿಜಯನಗರ(ಹೊಸಪೇಟೆ) ಜಿಲ್ಲೆಯಲ್ಲೂ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಶೀಘ್ರವೇ ಅಲ್ಲಿಯ ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಗಂಗಾವತಿಗೆ ಆಸ್ಪತ್ರೆಗೆ ಕಳುಹಿಸಿ ಮಾಹಿತಿ ಪಡೆಯುವಂತೆ ಸೂಚನೆ ನೀಡಲಾಗುತ್ತದೆ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯ ವಾಸುದೇವ ನವಲಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅರಿಕೇರಿ ಶಿವಕುಮಾರ, ಟಿ.ಆರ್‌. ರಾಯಬಾಗಿ, ಜಿಲ್ಲಾ ಧಿಕಾರಿ ಸುರಳ್ಕರ್‌ ವಿಕಾಸ ಕಿಶೋರ್‌, ಸಿಇಒ ಫೌಜೀಯಾ ತರನ್ನುಮ್‌, ಬಿಇಒ ಸೋಮಶೇಖರಗೌಡ, ಟಿಎಚ್‌ಒ ಡಾ|ರಾಘವೇಂದ್ರ, ವೈದ್ಯಾಧಿಕಾರಿ ಡಾ| ಈಶ್ವರ ಸವಡಿ, ಡಾ| ಗೌರಿಶಂಕರ್‌, ಡಾ| ಮಹೇಶ, ಆಶಾಬೇಗಂ, ಶಿವಾನಂದ, ಕಿರಣ್‌, ಪಲ್ಲವಿ, ವಿಜಯಪ್ರಸಾದ ಸೇರಿ ಅನೇಕರಿದ್ದರು.

ಬುದ್ಧಿಮಾಂದ್ಯರ ಮಾಸಾಶನ ಪಡೆಯಲು ವೈದ್ಯರ ಶಿಫಾರಸ್ಸು ಪತ್ರಕ್ಕಾಗಿ 18ನೇ ವಾರ್ಡ್‌ಬುದ್ಧಿಮಾಂದ್ಯ ಮಗು ಶಂಕರ್‌ ಎಂಬಾತ ತಾಯಿ ಮಾಸಾಶನ ಪಡೆಯಲು ವೈದ್ಯರ ಪತ್ರಕ್ಕಾಗಿ ಆಗಮಿಸಿ ಸಚಿವರ ಎದುರು ಸಮಸ್ಯೆ ಕುರಿತು ಹೇಳಿದ ತಕ್ಷಣ ಸಚಿವರು ವೈದ್ಯರಿಗೆ ಸ್ಥಳದಲ್ಲಿ ಬುದ್ಧಿಮಾಂಧ್ಯ ಮಾಸಾಶನ ವಿತರಣೆಗೆ ಕ್ರಮಕೈಗೊಂಡರು.

ಗಂಗಾವತಿ ನಗರ ವಾಣಿಜ್ಯವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಬೈಪಾಸ್‌ ಟುವೇ ರಸ್ತೆ ನಿರ್ಮಾಣ ಹಾಗೂ ಆನೆಗೊಂದಿ-ಮುನಿರಾಬಾದ್‌ ರಸ್ತೆ ಅಗಲೀಕರಣ ಮಾಡಬೇಕಿದ್ದು, ಪ್ರಭಾವಿ ಸಚಿವರೆನ್ನಿಸಿಕೊಂಡಿರುವ ಆನಂದ ಸಿಂಗ್‌ ಶಾಸಕರಿಂದ ಪ್ರಸ್ತಾವನೆ ಪಡೆದು ಯೋಜನೆ ರೂಪಿಸಬೇಕಿದೆ. ಗಂಗಾವತಿ ಭಾಗದಲ್ಲಿ ಎನ್‌.ಎಚ್‌. ರಸ್ತೆಗಳಿಲ್ಲ. ಆದ್ದರಿಂದ ಕೇಂದ್ರ ಸರಕಾರ ರಸ್ತೆ ನಿರ್ಮಾಣದ ಯೋಜನೆ ಅನುಷ್ಠಾನ ಮಾಡಲು ಬರುವುದಿಲ್ಲ. ಆದ್ದರಿಂದ ರಾಜ್ಯ ಸರಕಾರದ ಯೋಜನೆಯಲ್ಲಿ ಗಂಗಾವತಿ ಭಾಗದ ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ರಸ್ತೆಗಳ ಅಭಿವೃದ್ಧಿಯಿಂದ ಈ ಭಾಗದ ಪ್ರಗತಿ ಸಾಧ್ಯ. ಜನತೆ ಆರೋಗ್ಯ ಸೇವೆಗಾಗಿ ಸಾವಿರಾರು ರೂ. ಖರ್ಚು ಮಾಡದೇ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೌಕರ್ಯಗಳ ಚಿಕಿತ್ಸೆ ಲಭ್ಯತೆ ಸದ್ಬಳಕೆ ಮಾಡಿಕೊಳ್ಳಬೇಕು. –ಸಂಗಣ್ಣ ಕರಡಿ, ಸಂಸದರು

ಇಲ್ಲಿಯ ಸರಕಾರಿ ಆಸ್ಪತ್ರೆ ರಾಜ್ಯ ಮತ್ತು ಕೇಂದ್ರಕ್ಕೆ ಮಾದರಿಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮದ ಫಲ ಇದಾಗಿದ್ದು ಆರೋಗ್ಯ ಲ್ಯಾಬ್‌ ಮತ್ತು ವೈದ್ಯ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಜಿಲ್ಲಾ ಉಸ್ತುವಾರಿ ಮೂಲಕ ಸಲ್ಲಿಸಲಾಗುತ್ತದೆ. 5 ಲಕ್ಷ ರೂ. ವರೆಗೆ ಆರೋಗ್ಯ ಸೇವೆಗಳನ್ನು ಆಯುಷ್‌ ಭಾರತ ಕರ್ನಾಟಕ ಕಾರ್ಡ್‌ ಹೊಂದುವ ಮೂಲಕ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನರು ಚಿಕಿತ್ಸೆ ಪಡೆಯಬಹುದಾಗಿದೆ. ಆರೋಗ್ಯ ಇಲಾಖೆ ಸೇರಿದಂತೆ ಗಂಗಾವತಿ ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ವಸತಿ ಹೀಗೆ ಅನೇಕ ಜನಪರವಾದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಕ್ಷೇತ್ರಕ್ಕೆ ಕೋಟ್ಯಂತರ ರೂ. ತಂದು ನೀರಾವರಿ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಪರಣ್ಣ ಮುನವಳ್ಳಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next