Advertisement

Udupi ಬಡ್ಡಿ ಸಮೇತ ಅಸಲು ಪಾವತಿಗೆ ಬಳಕೆದಾರರ ಆಯೋಗ ಸೂಚನೆ

01:12 AM May 11, 2024 | Team Udayavani |

ಉಡುಪಿ: ಜೀವನದ ಸಂಧ್ಯಾ ಕಾಲದ ಅವಶ್ಯಕತೆಗಾಗಿ ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ (ಎಚ್‌ಯುಎಫ್)ನಲ್ಲಿ ಹೂಡಿಕೆ ಮಾಡಿರುವವರಿಗೆ ಅಂಚೆ ಇಲಾಖೆ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ದಾಖಲಿಸಲು ಮುಂದಾಗಿದ್ದೇವೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ ಗೆ 2005ರ ಅನಂತರ ಆರ್‌ಬಿಐ ಅವಕಾಶ ನೀಡುತ್ತಿಲ್ಲ. ಇದನ್ನು ರದ್ದು ಮಾಡಿರುವ ಬಗ್ಗೆ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು 2005ರ ಅನಂತರವೂ ಎಚ್‌ಯುಎಫ್ ಖಾತೆ ತೆರೆಯಲು ಹಾಗೂ 2005ರ ಮೊದಲು ತೆರೆದಿರುವ ಖಾತೆಯನ್ನು ವಿಸ್ತರಿಸಲು ಅವಕಾಶ ನೀಡುತ್ತಿದ್ದಾರೆ. ಇದರಿಂದ ಬಹುತೇಕರಿಗೆ ಅಂತಿಮವಾಗಿ ತಮ್ಮ ಹಣ ಪಡೆಯುವಾಗ 2005ರ ಅನಂತರದ ಬಡ್ಡಿ ಸಿಗುತ್ತಿಲ್ಲ. ಕೇವಲ ಅಸಲು ಮಾತ್ರ ನೀಡುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯ ಹಾಗೂ ಬಳಕೆದಾರರ ಆಯೋಗದ ಮೆಟ್ಟಿಲೇರಿದವರಲ್ಲಿ ಬಹುತೇಕರಿಗೆ ಜಯ ಸಿಕ್ಕಿದೆ. ಈವರೆಗೂ ಯಾವ ಆದೇಶವೂ ಬ್ಯಾಂಕ್‌ ಹಾಗೂ ಅಂಚೆ ಇಲಾಖೆ ಪರವಾಗಿ ಬಂದಿಲ್ಲ. ಇಷ್ಟಾದರೂ ಅಧಿಕಾರಿಗಳು ಇನ್ನೂ ಹಿರಿಯ ನಾಗರಿಕನ್ನು ಮೋಸ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಸ್ಪಷ್ಟ ಆದೇಶಕ್ಕಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ವಿವರ ನೀಡಿದರು.

11 ಲಕ್ಷ ಪಾವತಿಗೆ ಆದೇಶ
ಕಾರ್ಕಳದ ಸಾಣೂರಿನ ವೆಂಕಟೇಶ ಕಾಮತ್‌ ಅವರು 2001ರಲ್ಲಿ 15 ವರ್ಷಕ್ಕೆ ಸೀಮಿತವಾಗಿ ಅಂಚೆ ಕಚೇರಿಯಲ್ಲಿ ಎಚ್‌ಯುಎಫ್ ಖಾತೆ ತೆರೆದಿದ್ದರು. 2016ರಲ್ಲಿ ತಮ್ಮ ಹಣ ಪಡೆಯಲು ಅಂಚೆ ಕಚೇರಿಗೆ ಹೋಗಿದ್ದರು. ಆಗ ಇನ್ನೂ ಐದು ವರ್ಷ ಖಾತೆಯನ್ನು ವಿಸ್ತರಿಸಲು ಅವಕಾಶ ಇದೆ ಎಂದು ಅಂಚೆ ಮಾಸ್ಟರ್‌ ತಿಳಿಸಿದ್ದರ ಹಿನ್ನೆಲೆಯಲ್ಲಿ ಖಾತೆಯ ಅವಧಿ ವಿಸ್ತರಿಸಿದ್ದರು. 2021ರಲ್ಲೂ ಮತ್ತೆ ಐದು ವರ್ಷ ವಿಸ್ತರಣೆಗೆ ಸಲಹೆ ನೀಡಿದ್ದರು. ಅದರಂತೆ ವೆಂಕಟೇಶ್‌ ಕಾಮತ್‌ ಅವರು ಇನ್ನೂ ಐದು ವರ್ಷ ವಿಸ್ತರಿಸಿ, ತಮ್ಮ ತಿಂಗಳ ¸ಆಾಪು¤ ಕಟ್ಟುತ್ತಾ ಬಂದಿದ್ದಾರೆ. 2023ರ ಜೂನ್‌ 22ರಂದು ವೆಂಕಟೇಶ್‌ ಕಾಮತ್‌ ಅವರಿಗೆ ಅಂಚೆ ಇಲಾಖೆ ನೋಟಿಸ್‌ ನೀಡಿ ತತ್‌ಕ್ಷಣವೇ ಖಾತೆ ಮುಕ್ತಾಯಗೊಳಿಸಲು ತಿಳಿಸಿದೆ. ಅನಂತರ ಖಾತೆ ಮುಕ್ತಾಯಕ್ಕೆ ಹೋದಾಗ ಬಡ್ಡಿ ಸಹಿತ 32,63,902 ರೂ.ಗಳನ್ನು ಅಂಚೆ ಇಲಾಖೆ ಪಾವತಿ ಮಾಡಬೇಕಿತ್ತು. ಬದಲಾಗಿ ಬಡ್ಡಿ ಹಣ 10,44,286 ರೂ. ನೀಡದೇ ಉಳಿದ 22,19,616 ರೂ.ಗಳನ್ನು ಮಾತ್ರ ನೀಡಿದೆ.ಅಂಚೆ ಇಲಾಖೆ ಅಧಿಕಾರಿಗಳು ಮಾಡಿದ ಮೋಸದ ಅರಿವಾಗ ವೆಂಕಟೇಶ್‌ ಕಾಮತ್‌ ಅವರು ಪ್ರತಿಷ್ಠಾನಕ್ಕೆ ದೂರು ನೀಡಿದರು.

ಅದರಂತೆ ಜಿಲ್ಲಾ ಬಳಕೆದಾರರ ಆಯೋಗದಲ್ಲಿ ದಾವೆ ಹೂಡಲಾಯಿತು. ಅರ್ಜಿ ವಿಚಾರಣೆ ನಡೆಸಿದ ಆಯೋಗ ಬಡ್ಡಿ ಹಣ 11,00,444 ರೂ. ಜತೆಗೆ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ 50,000 ದಂಡ, ವ್ಯಾಜ್ಯದ ಖರ್ಚು 10,000 ರೂ. ನೀಡಲು ಅಂಚೆ ಇಲಾಖೆಗೆ ಆದೇಶಿಸಿದೆ ಎಂದು ಡಾ| ರವೀಂದ್ರನಾಥ್‌ ಶಾನುಭಾಗ್‌ ಅವರು ತಿಳಿಸಿದರು.

ಮೇಲ್ಮನವಿಯ ಬೆದರಿಕೆ
ಆಯೋಗ ಆದೇಶಿಸಿದರೂ ಅಂಚೆ ಇಲಾಖೆಯಿಂದ ಹಣ ಇನ್ನೂ ವೆಂಕಟೇಶ ಕಾಮತ್‌ ಅವರಿಗೆ ಬಂದಿಲ್ಲ. ಬದಲಾಗಿ ರಾಜ್ಯ ಬಳಕೆದಾರರ ಆಯೋಗಕ್ಕೆ ಮೇಲ್ಮನವಿ ಹಾಕಿದ್ದೇವೆ ಎಂಬಿತ್ಯಾದಿ ಬೆದರಿಕೆಗಳ ಮೂಲಕ ಭಯ ಹುಟ್ಟಿಸುತ್ತಿದ್ದಾರೆ. ಈ ರೀತಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಮತ್ತು ಎಲ್ಲವೂ ಹಿರಿಯ ನಾಗರಿಕರಿಗೆ ಆಗಿರುವ ಅನ್ಯಾಯವಾಗಿದೆ. ಮೇಲ್ಮನವಿ ಹೋದರೂ ರಾಷ್ಟ್ರೀಯ ಬಳಕೆದಾರರ ಆಯೋಗದಲ್ಲಿ ಅಂಚೆ ಇಲಾಖೆಯ ಪರವಾಗಿ ತೀರ್ಪು ಬರಲು ಸಾಧ್ಯವೇ ಇಲ್ಲ. ಅಧಿಕಾರಿಗಳು ತಪ್ಪು ಮಾಡಿರುವುದು ಇದರಲ್ಲಿ ಸ್ಪಷ್ಟವಾಗಿದೆ ಮತ್ತು ಅದಕ್ಕೆ ಎಲ್ಲ ದಾಖಲೆಗಳು ಇವೆ. ಈ ರೀತಿಯ ಎಲ್ಲ ಮೋಸಗಳಿಗೂ ತಾರ್ಕಿಕ ಅಂತ್ಯ ಹಾಡಲು ಸುಪ್ರೀಂ ಕೋರ್ಟ್‌ಗೆ ಮೇಲ್ಮವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.

Advertisement

ಜೀವನದ ಸಂಧ್ಯಾಕಾಲದ ಅವಶ್ಯಕತೆಗಾಗಿ ಅನೇಕರು ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುತ್ತಾರೆ. ನಿಯಮಗಳು ತಿಳಿದಿರುವ ಅಧಿಕಾರಿಗಳೇ ಈ ರೀತಿ ನಮ್ಮನ್ನು ಮೋಸ ಮಾಡುತ್ತಿದ್ದಾರೆ. ನಮ್ಮ ಹಣವನ್ನು ಬಡ್ಡಿ ಸಹಿತ ನಮಗೆ ನೀಡಲು ಸಾಕಷ್ಟು ಸಮಸ್ಯೆ ಮಾಡುತ್ತಿದ್ದಾರೆ. ಸಾಮಾನ್ಯರಿಗೆ ನ್ಯಾಯಾಲಯಕ್ಕೆ ಅಲೆದಾಡುವುದು ಕಷ್ಟವಾಗುತ್ತದೆ. ನಿಯಮಾನುಸಾರವಾಗಿಯೇ ಹಣ ಪಾವತಿ ಮಾಡಿರುವುದು ಮತ್ತು ಪಾಸ್‌ ಬುಕ್‌ನಲ್ಲಿ ಅದನ್ನು ಎಂಟ್ರಿ ಮಾಡಿರುವುದು ಸೇರಿದಂತೆ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಆದರೂ ಅಸಲು ನೀಡಿ ಬಡ್ಡಿ ನೀಡುತ್ತಿಲ್ಲ. ಆಯೋಗಕ್ಕೂ ಎಲ್ಲ ದಾಖಲೆ ನೀಡಿದ್ದೇನೆ. ಆದರೂ ವಿನಃ ಕಾರಣ ಹೆದರಿಸುತ್ತಿದ್ದಾರೆ ಎಂದು ವೆಂಕಟೇಶ್‌ ಕಾಮತ್‌ ಅವರು ನೋವು ತೋಡಿಕೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next