ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ (ಕಾಮೆಡ್-ಕೆ) ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬಹುತೇಕ ಕಡೆಗಳಲ್ಲಿ ಸುಗಮವಾಗಿ ನಡೆದಿದ್ದು, ತಾಂತ್ರಿಕ ತೊಂದರೆಯಿಂದ ಒಂದರೆಡು ಕೇಂದ್ರದಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ.
ದೇಶದ 133 ನಗರಗಳ 248 ಕೇಂದ್ರಗಳು, ರಾಜ್ಯದ 24 ನಗರಗಳ 90 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ದೇಶಾದ್ಯಂತ ನೋಂದಣಿ ಮಾಡಿಕೊಂಡಿದ್ದ 70,163 ವಿದ್ಯಾರ್ಥಿಗಳಲ್ಲಿ 58,834 (ಶೇ.83.85) ಹಾಗೂ ರಾಜ್ಯದ 21,417 ವಿದ್ಯಾರ್ಥಿಗಳಲ್ಲಿ 18,901 (ಶೇ.88.25) ವಿದ್ಯಾರ್ಥಿಗಳು ಹಾಜರಾಗಿದ್ದರು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಗಣಿತ ಪರೀಕ್ಷೆಗಳು ತಲಾ 60 ಅಂಕಗಳಿಗೆ ನಡೆದಿದೆ.
ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪ್ರಶ್ನೆಗಳಿಗಿಂತ ಗಣಿತ ವಿಷಯದ ಪ್ರಶ್ನೆಗಳು ಸ್ವಲ್ಪ ಕಠಿಣವಾಗಿದ್ದವು ಮತ್ತು ತಾಂತ್ರಿಕ ತೊಂದರೆಯಿಂದ ಕೆಲವೊಂದು ಕಂಪ್ಯೂಟರ್ ಲಾಗಿ ಇನ್ ಆಗುತ್ತಿರಲಿಲ್ಲ. ಕೇಂದ್ರದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಆನ್‌ಲೈನ್ ಪರೀಕ್ಷೆಯಾಗಿರುವುದರಿಂದ ಬೆಂಗಳೂರಿನ ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳ ಲಾಗಿನ್ ಮಾಡಲು ಸ್ವಲ್ಪ ವಿಳಂಬವಾಗಿತ್ತು. ಆದರೆ, ಪರೀಕ್ಷೆ ಮಾತ್ರ ನಿಗದಿತ ಅವಧಿಯಲ್ಲಿಯೇ ಪೂರ್ಣಗೊಂಡಿದೆ. ರಾಜ್ಯದ ಯಾವುದೇ ಕಡೆ ಪರೀಕ್ಷಾ ಅಕ್ರಮಗಳು ಕಂಡುಬಂದಿಲ್ಲ.
ಮೇ 16ರಂದು ತಾತ್ಕಾಲಿಕ ಮಾದರಿ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಮೇ 24ರಂದು ಅಂತಿಮ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಮೇ 27ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ದೇಶದ 120ಕ್ಕೂ ಅಧಿಕ ಶಿಕ್ಷಣ ಸಂಸ್ಥೆ ಹಾಗೂ 21ಕ್ಕೂ ಅಧಿಕ ಖಾಸಗಿ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಸೀಟುಗಳು ಕಾಮೆಡ್-ಕೆ ಪರೀಕ್ಷೆಯ ರ್‍ಯಾಂಕಿಂಗ್ ಮೂಲಕ ಹಂಚಿಕೆಯಾಗಲಿದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಕುಮಾರ್ ತಿಳಿಸಿದ್ದಾರೆ.