ಕಲಬುರಗಿ: ಉತ್ತಮ ಪತ್ರಕರ್ತ ಪತ್ರಿಕೆಯ ಜೀವಾಳ. ಹೀಗಾಗಿಯೇ ರಾಮ ಮನೋಹರ ಲೋಹಿಯಾ ಅವರು ಚೌಕಮ್ಮಾ ಪತ್ರಿಕೆ ಸ್ಥಾಪಿಸಿ ದೇಶದ ಸಮಸ್ಯೆಗಳನ್ನು ಎತ್ತಿ ತೋರಿಸಲಾರಂಭಿಸಿದ್ದರು. ಆ ಗಡಸುತನ ಇಂದಿನ ಪತ್ರಕರ್ತರಲ್ಲಿ ಬರಬೇಕು. ಜನಸಾಮಾನ್ಯರು ಪೊಲೀಸ್‌ರೆಂದರೆ ಭಯ ಹುಟ್ಟಿಸುವರೆಂದು ಅರ್ಥೈಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಹೇಳಿದರು.
ನಗರದ ಹೊರವಲಯದ ತಾಜ ಸುಲ್ತಾನಪುರದ ಕೆಎಸ್‌ಆರ್‌ಪಿ ಕ್ಯಾಂಪ್‌ನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಸಮಾಜ ರಕ್ಷಣೆಯಲ್ಲಿ ಪೆನ್ ಮತ್ತು ಗನ್’ ಎನ್ನುವ ವಿಚಾರ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ| ಅಂಬೇಡ್ಕರ್ ಹೇಳಿದಂತೆ ಸಮಾಜದಲ್ಲಿ ಶೋಷಣೆ ಮಾಡುವವರು ನಮಗಿಂತ ಮೇಲಿದ್ದವರು. ಮೂಲ ಕೆಲಸಗಾರರಿಗೆ ನಿಜವಾದ ನ್ಯಾಯ ಸಿಗುತ್ತಿಲ್ಲ. ಕೆಳಗಿನವರು ಮಾಡಿರುವ ಕೆಲಸಕ್ಕೆ ಮೇಲಾಧಿಕಾರಿಗಳು ಅದರ ಗೌರವ ಪಡೆಯುತ್ತಾರೆ. ಇದು ನಿಜಕ್ಕೂ ವಿಪರ್ಯಾಸ. ಆದರೆ ಪತ್ರಕರ್ತರು ಹಾಗೂ ಪೊಲೀಸರು ಸಮಾಜದಲ್ಲಿ ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿಗಾಗಿ ಬೇರೊಬ್ಬರ ಬಾಲ ಬಡಿಯುವುದನ್ನು ಬಿಟ್ಟು ತಮ್ಮ ಹಕ್ಕನ್ನು ಪಡೆಯುವರಾಗಿ ಬೆಳೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ ಮಾತನಾಡಿ, ಕಾನೂನು ಹಾಗೂ ಸುವ್ಯವಸ್ಥೆ ಜೊತೆ ಸಾಮಾಜಿಕ ಕಾಳಜಿ ಎತ್ತಿ ಹಿಡಿದ ಗೌರವ ಪತ್ರಕರ್ತರದ್ದು. ಪೆನ್ನಿನ ಮೂಲಕ ಸಮಾಜ ತಿದ್ದುವಲ್ಲಿ ಪತ್ರಕರ್ತರ ಹಾಗೂ ಪೊಲೀಸರ ಸೇವೆ ಅನನ್ಯವಾಗಿದೆ. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆದಾಗ ಅದನ್ನು ಆದಷ್ಟು ಮಾತಿನ ಮೂಲಕ ಬಗೆಹರಿಸುವಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ. ಮಿತಿ ಮೀರಿದಾಗ ಮಾತ್ರ ಗನ್‌ನ್ನು ಬಳಸಬೇಕಾಗುತ್ತದೆ ಎಂದರು.
ಸಂಜಯ ಪಾಟೀಲ ಉಪನ್ಯಾಸ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ, ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ನಿಸಾರ್ ಅಹ್ಮದ್, ಪರಮೇಶ್ವರ ಶಟಕಾರ, ಡಾ| ಬಾಬುರಾವ ಶೇರಿಕಾರ,
ಶಿವರಾಜ ಅಂಡಗಿ ಹಾಗೂ ಇತರರಿದ್ದರು.
ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಾದ ವಿಶ್ವನಾಥ ಸ್ವಾಮೀಜಿ, ವೀರಣ್ಣಗೌಡ ಪಾಟೀಲ ಯಡ್ಡಳ್ಳಿ, ಚನ್ನಬಸಯ್ಯ ಗಾರಂಪಳ್ಳಿ, ಅಮರೇಶ ಎತ್ತಿನ ಮಾಳಗಿ, ಮಮತಾ ಬಾಬುರಾವ ಯಡ್ರಾಮಿ, ಭೀಮಾಶಂಕರ ಫಿರೋಜಾಬಾದ, ಸಂತೋಷ ನಾಡಗಿರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪತ್ರಕರ್ತರು, ಪೊಲೀಸ್ ಅಧಿಕಾರಿಗಳು, ಸಾಹಿತ್ಯಾಸಕ್ತರು ಹಾಜರಿದ್ದರು.