ಹೊಸಕೋಟೆ: ಸಾರ್ವಜನಿಕರು ಅರೋಗ್ಯದ ಸಮಸ್ಯೆಗಳು ಎದುರಾದರೆ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಕಾಪಡಿಕೊಳ್ಳಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸೌಮ್ಯಾ ಹೇಳಿದರು.
ಆಸ್ಪತ್ರೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹಳಷ್ಟು ಸಂದರ್ಭಗಳಲ್ಲಿ ಜನರು ಸ್ವಯಂ ಚಿಕಿತ್ಸೆ ಹಾಗೂ ಮೂಢ ನಂಬಿಕೆಗಳಿಗೆ ಒಳಗಾಗಿ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.
ಈ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮ, ಪಡೆಯಬೇಕಾದ ಚಿಕಿತ್ಸೆ ಬಗ್ಗೆ ತಿಳಿವಳಿಕೆ ನೀಡಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಓಅರ್‌ಎಸ್ ಒಳಗೊಂಡಂತೆ ಆಸ್ಪತ್ರೆ ವತಿಯಿಂದ ಉಚಿತವಾಗಿ ನೀಡುವ ಔಷಧಿಗಳನ್ನು ನಿರಂತರವಾಗಿ 14 ದಿನಗಳವರೆಗೂ ಸೇವಿಸಿದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳಲು ಸಹಕಾರಿಯಾಗಲಿದೆ.
ಕಲುಷಿತ ಆಹಾರ, ನೀರಿನ ಬಳಕೆ ದುಷ್ಪರಿಣಾಮ ಬೀರುತ್ತಿದ್ದು, ಅನಾರೋಗ್ಯ ಉಂಟಾಗಲು ಪ್ರಮುಖ ಕಾರಣವಾಗಿದ್ದು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ: ಸತೀಶ್ ಕುಮಾರ್ ಮಾತನಾಡಿ, ಜೂ.3ರಿಂದ 17ರವರೆಗೆ ಕಾರ್ಯಕ್ರಮವಿದ್ದು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ಅರಿವು ಮೂಡಿಸಲಾಗಿದೆ. ಇದರೊಂದಿಗೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಸಹ ಮನೆಗಳಿಗೆ ಭೇಟಿ ನೀಡಿ ತಿಳಿವಳಿಕೆ ನೀಡುತ್ತಿದ್ದಾರೆ ಎಂದರು.