Advertisement

ಉತ್ತಮ ಆಡಳಿತಕ್ಕೆ ಇತಿಹಾಸ ಪುನರ್‌ ಮನನ ಅಗತ್ಯ; ಯದುವೀರ

05:38 PM May 02, 2022 | Team Udayavani |

ಧಾರವಾಡ: ರಾಜ್ಯದಲ್ಲಿ ಉತ್ತಮ ಆಡಳಿತ, ನೀತಿ-ನಿಯಮಗಳ ರಚನೆಗಾಗಿ ಇತಿಹಾಸವನ್ನು ಪುನರ್‌ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮೈಸೂರು ರಾಜವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗ, ಸಾರ್ವಜನಿಕ ಆಡಳಿತ ವಿಭಾಗ ಮತ್ತು ಪ್ರೊ| ಹರೀಶ್‌ ರಾಮಸ್ವಾಮಿ ಗುರುಗಳ ಅಭಿನಂದನಾ ಸಮಿತಿ ಸಹಯೋಗದಲ್ಲಿ “ಕರ್ನಾಟಕದಲ್ಲಿ ರಾಜಕಾರಣ ಮತ್ತು ನೀತಿ ರಚನೆ’ ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರೊ| ಹರೀಶ ರಾಮಸ್ವಾಮಿ ಗುರುಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ಆಂಗ್ಲೋ ಮೈಸೂರು ಯುದ್ಧಗಳಿಂದ ಮೈಸೂರು ಸಂಸ್ಥಾನ ಜರ್ಜರಿತವಾಗಿದ್ದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಆಡಳಿತದಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಐತಿಹಾಸಿಕ ಪಾರಂಪರಿಕ ಸಂಪ್ರದಾಯಗಳ ಸಂರಕ್ಷಣೆಗೆ ಒತ್ತು ನೀಡಿ ಉತ್ತಮ ಆಡಳಿತ ನೀಡಿದರು. ಆಗ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಒತ್ತು ನೀಡಿದ್ದರು. ದೇಶದಲ್ಲಿ ಮೊದಲನೆದಾಗಿ ಹಿಂದುಳಿದ ದಮನಿತ ವರ್ಗಗಳಿಗೆ ಮೀಸಲಾತಿ ನೀಡುವಲ್ಲಿ ಮೈಸೂರು ಸಂಸ್ಥಾನ ಒಂದು ಹೆಜ್ಜೆ ಮುಂದೆ ಇಟ್ಟಿತು. ನಂತರ ಸಂವಿಧಾನದಲ್ಲಿ ಮೀಸಲಾತಿ ಅಳವಡಿಸಲಾಯಿತು ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಆರೆಸ್ಸೆಸ್‌ ಕರ್ನಾಟಕ ಉತ್ತರ ಪ್ರಾಂತದ ಸಹ ಸಂಚಾಲಕ ಅರವಿಂದರಾವ್‌ ದೇಶಪಾಂಡೆ ಮಾತನಾಡಿ, ರಾಜಕೀಯ ನಾಯಕರು ನೀತಿ ರಚನೆಯಲ್ಲಿ ಹೆಚ್ಚು ನಿಷ್ಠೆ ಹೊಂದಿರಬೇಕು. ಆಡಳಿತ ನಡೆಸುವವರು ಸಮಗ್ರ ಬೆಳವಣಿಗೆ-ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಪ್ರಸ್ತುತ ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಬೇಕು. ಮೈಸೂರು ಪ್ರಾಂತ್ಯದ ಕಾವೇರಿಗೆ ಎಷ್ಟು ಮಹತ್ವ ನೀಡಲಾಗುತ್ತಿದೆಯೋ ಅಷ್ಟೇ ರೀತಿಯಲ್ಲಿ ಉತ್ತರ ಕರ್ನಾಟಕದ ಕೃಷ್ಣ ಪ್ರಾಂತ್ಯದ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಪ್ರಾದೇಶಿಕ ಅಸಮಾನತೆ ತೊಡೆದು ಹಾಕಲು ಹೆಚ್ಚು ಗಮನ ಹರಿಸಬೇಕು.ಉತ್ತರ ಕರ್ನಾಟಕಕ್ಕೆ ಔದ್ಯೋಗಿಕವಾಗಿ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ| ಕೆ.ಬಿ. ಗುಡಸಿ ಮಾತನಾಡಿ, ಭಾರತೀಯ ವಿಜ್ಞಾನ ಕೇಂದ್ರಕ್ಕೆ ಮೈಸೂರಿನ ಮಹಾರಾಜರು ಜಾಗ ನೀಡಿದ್ದು ಅವರ ಶೈಕ್ಷಣಿಕ ಕಾಳಜಿ ಎತ್ತಿ ತೋರಿಸುತ್ತದೆ ಎಂದರು. “ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ರಾಜಕೀಯ ಪಾತ್ರ ಮತ್ತು ಹೊಣೆಗಾರಿಕೆ’ ಮತ್ತು “ಟಿಬೆಟಿನ್‌ ರಾಜಕೀಯ ವ್ಯವಸ್ಥೆ (ರಾಜ್ಯದೊಳಗೊಂದು ರಾಜ್ಯ)’ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಶಿಗ್ಗಾವಿಯ ಜಾನಪದ ವಿವಿ ಮೌಲ್ಯಮಾಪನ ಕುಲಸಚಿವ ಡಾ| ಎನ್‌.ಎಂ. ಸಾಲಿ, ರಾಯಚೂರು ವಿವಿ ಮೌಲ್ಯಮಾಪನ ಕುಲಸಚಿವ ಡಾ| ಎಂ. ಯರಿಸ್ವಾಮಿ, ಕವಿವಿ ಮತ್ತು ರಾಯಚೂರು ವಿವಿ ಸಿಂಡಿಕೇಟ್‌ ಸದಸ್ಯರು ಇದ್ದರು.

Advertisement

ಬೆಳಗಾವಿ ರಾಣಿ ಚನ್ನಮ್ಮಾ ವಿವಿಯ ಡಾ| ಕಮಲಾಕ್ಷಿ ತಡಸದ ಪ್ರಾಸ್ತಾವಿಕ ಮಾತನಾಡಿದರು. ಡಾ| ಬಿ.ಎಂ. ರತ್ನಾಕರ ಸ್ವಾಗತಿಸಿದರು. ಡಾ| ಎಸ್‌.ವಿ. ವಸ್ತ್ರದ ನಿರೂಪಿಸಿದರು. ಡಾ| ಪ್ರದೀಪ ಜೋಶಿ ವಂದಿಸಿದರು.

ಅಭಿನಂದನಾ ಸಮಾರಂಭ: ಮೈಸೂರು ರಾಜವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪ್ರೊ| ಹರೀಶ ರಾಮಸ್ವಾಮಿ ಮತ್ತು ಪತ್ನಿ ನೀರಧಾ ರಾಮಸ್ವಾಮಿ ಅವರನ್ನು ಸನ್ಮಾನಿಸಿದರು. ಅಭಿನಂದನೆ ಸ್ವೀಕರಿಸಿದ ಪ್ರೊ| ರಾಮಸ್ವಾಮಿ ಮಾತನಾಡಿ, ಸಂಸ್ಕಾರಗಳು ಮನುಷ್ಯನನ್ನು ಬದಲಾಯಿಸುತ್ತವೆ. ಈ ಕಾರಣದಿಂದಲೇ ಒಬ್ಬ ಉಪನ್ಯಾಸಕನಾಗಿ, ಒಂದು ವಿವಿಯ ಕುಲಪತಿಯಾಗಿ ನಿಂತಿದ್ದೇನೆ ಎಂದರು. ಕವಿವಿ ರಾಜ್ಯಶಾಸ್ತ್ರ ವಿಭಾಗ ಹೊರತಂದ ಚಾಣಿಕ್ಯ ಸಂಶೋಧನಾ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು. ಕವಿವಿ ಕುಲಸಚಿವ ಯಶಪಾಲ್‌ ಕ್ಷೀರಸಾಗರ ಅಧ್ಯಕ್ಷತೆ ವಹಿಸಿದ್ದರು.

ಪಂಚವಾರ್ಷಿಕ ಯೋಜನೆಗಳು ಮೈಸೂರು ಮಹಾರಾಜರ ಕಲ್ಪನೆಯಾಗಿದ್ದು, ಸ್ವಾತಂತ್ರ್ಯದ ನಂತರ ದೇಶದಲ್ಲಿ ಅನುಷ್ಠಾನಗೊಳಿಸಿದರು. ದೇಶದಲ್ಲಿ 450 ಪಾರಂಪರಿಕ ಭೌಗೋಳಿಕ ಸೂಚ್ಯಂಕಗಳು ಇದ್ದು, ಅದರಲ್ಲಿ ಕರ್ನಾಟಕದಲ್ಲಿ 50ಕ್ಕಿಂತ ಹೆಚ್ಚು ವಿವಿಧ ರೀತಿಯ ಸೂಚ್ಯಂಕಗಳು ಇವೆ. ಅದರಲ್ಲಿ ಹೆಚ್ಚು ಮೈಸೂರಿನ ಭಾಗದ್ದು ಎಂಬುದು ಹೆಮ್ಮೆಯ ಸಂಗತಿ.
ಯದುವೀರ ಕೃಷ್ಣದತ್ತ ಚಾಮರಾಜ
ಒಡೆಯರ್‌, ಮೈಸೂರು ರಾಜವಂಶಸ್ಥ

ಜನರು ಮಾತ್ರ ರಾಜಕೀಯ ವ್ಯವಸ್ಥೆ ಸರಿಪಡಿಸಲು ಸಾಧ್ಯವಿದೆ. ನಮ್ಮನ್ನು ಆಳುವವರ ಮನೋಭಾವ, ಆಲೋಚನೆಗಳು ಬದಲಾಗಬೇಕು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಉತ್ತರ ಕರ್ನಾಟಕ ಹಿಂದುಳಿದಿಲ್ಲ. ಆದರೆ ಉತ್ತರ ಕರ್ನಾಟಕ ರಾಜಕೀಯ ನಾಯಕರ ಮತ್ತು ಜನರ ಮೈಂಡ್‌ ಸೆಟ್‌ ಬದಲಾವಣೆ ಆಗಬೇಕು.
ಪ್ರೊ| ಹರೀಶ ರಾಮಸ್ವಾಮಿ,
ರಾಯಚೂರು ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next