ಮಂಗಳೂರು: ಉದ್ಘಾಟನೆಯ ಮರುದಿನ ದಿಂದಲೇ ವಂದೇ ಭಾರತ್ ಮಂಗಳೂರು-ಮಡಗಾಂವ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉದ್ಘಾಟನೆಯ ದಿನ ಯಾವುದೇ ಅಧಿಕೃತ ಪ್ರಯಾಣಿಕರಿಲ್ಲದ, ಕೇವಲ ರೈಲ್ವೇ ಹಿತೈಷಿಗಳು, ಮಾಧ್ಯಮ ಪ್ರತಿನಿಧಿಗಳು ಸಂಚರಿಸಿದ್ದರೆ, ಪ್ರಯಾಣಿಕರೊಂದಿಗೆ ಮೊದಲ ದಿನದ ವಂದೇಭಾರತ್ ಎಕ್ಸ್‌ಪ್ರೆಸ್ ರವಿವಾರ ಸಂಚರಿಸಿದೆ.
ಮಂಗಳೂರಿನಿಂದ ನಿಗದಿತ 8.30ಕ್ಕೆ ಬೆಳಗ್ಗೆ ಹೊರಟ ರೈಲು ವಿಳಂಬವಿಲ್ಲದೆ 1.15ಕ್ಕೆ ಮಡಗಾಂವ್ ತಲಪಿತು. ಚೇರ್‌ಕಾರ್(ಸಿಸಿ)ಗಳಲ್ಲಿ ಸುಮಾರು 200 ಆಸನಗಳು ಭರ್ತಿಯಾದರೆ ಎಕ್ಸಿಕ್ಯೂಟಿವ್ ಚೇರ್ ಕಾರ್(ಇಸಿ)ನಲ್ಲಿ 25 ಸೀಟ್ ತುಂಬಿದ್ದವು. ಕೇರಳದಿಂದ ಬೆಳಗ್ಗೆ ಬಂದಿಳಿದ ರೈಲಿನಿಂದ ಹಲವು ಪ್ರಯಾಣಿಕರು ವಂದೇಭಾರತ್ ಮೂಲಕ ಪ್ರಯಾಣಿಸಿದ್ದಾರೆ.
ವಂದೇಭಾರತ್‌ನಲ್ಲಿ 478 ಚೇರ್ ಕಾರ್ ಸೀಟ್ ಹಾಗೂ 52 ಎಕ್ಸಿಕ್ಯೂಟಿವ್ ಚೇರ್‌ಕಾರ್ ಸೀಟುಗಳು ಇರುತ್ತವೆ. ಜ. 2ರಂದು 210 ಸೀಟುಗಳು ಸಿಸಿಯಲ್ಲಿ ಹಾಗೂ 13 ಸೀಟುಗಳು ಇಸಿಯಲ್ಲಿ ಲಭ್ಯವಿರುವುದನ್ನು ಬುಕ್ಕಿಂಗ್ ವೆಬ್‌ಸೆ„ಟ್ ತೋರಿಸಿದೆ.
ರೈಲು ಪ್ರಯಾಣ ಖುಷಿ ನೀಡಿದೆ, ಶುಚಿಯಾಗಿದೆ, ಬಹುತೇಕ ಸಮಯದಲ್ಲಿ ರೈಲು ಗಂಟೆಗೆ 120 ಕಿ.ಮೀ ವೇಗವನ್ನು ಕಾಯ್ದುಕೊಂಡಿತ್ತು, ಉಳಿದಂತೆ ಸೇವೆ ಉತ್ತಮವಾಗಿದೆ, ಭಟ್ಕಳದಲ್ಲಿ ಸುಮಾರು 15 ನಿಮಿಷ ಕಾಲ ಕ್ರಾಸಿಂಗ್‌ಗೆ ನಿಲ್ಲಿಸಲಾಗಿತ್ತು, ಇಲ್ಲವಾದರೆ 3ರಿಂದ 3.5 ಗಂಟೆಯಲ್ಲಿ ವಂದೇಭಾರತ್ ರೈಲು ಮಡಗಾಂವ್ ತಲಪಬಹುದು ಎಂದು ಈ ರೈಲಿನಲ್ಲಿ ಸಂಚರಿಸಿದ ಕಾರ್ತಿಕ್ ಕಾಮತ್ ಎನ್ನುವವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.