Advertisement

ಉತ್ತಮ ಪ್ರಯತ್ನ; ಮಾಲಿಂಗ ಸಮಾಧಾನ

02:51 AM Apr 17, 2019 | sudhir |

ಮುಂಬಯಿ: ಆರ್‌ಸಿಬಿ ಎದುರಿನ ಗೆಲುವಿನ ರೂವಾರಿಯಾಗಿ ಮೂಡಿಬಂದ ಲಸಿತ ಮಾಲಿಂಗ, ಇದು ತನ್ನ ನೂರು ಪ್ರತಿಶತ ಪ್ರಯತ್ನಕ್ಕೆ ಸಂದ ಯಶಸ್ಸು ಎಂಬುದಾಗಿ ಹೇಳಿದ್ದಾರೆ. ಈ ಪಂದ್ಯದಲ್ಲಿ 31 ರನ್ನಿಗೆ 4 ವಿಕೆಟ್‌ ಉರುಳಿಸಿದ ಮಾಲಿಂಗ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

“ಕಳೆದ ಎರಡು ವಾರಗಳು ನನ್ನ ಪಾಲಿಗೆ ಅತ್ಯಂತ ಕಠಿನವಾಗಿದ್ದವು. ಇಲ್ಲಿಗೆ ಬಂದ ಬಳಿಕ ಪುನಃ ಶ್ರೀಲಂಕಾದ ದೇಶಿ ಕ್ರಿಕೆಟ್‌ನಲ್ಲಿ ಆಡಿದೆ. ಮತ್ತೆ ಇಲ್ಲಿಗೆ ಬಂದೆ. ಇಂಥ ಪಂದ್ಯಾವಳಿಗಾಗಿ ನಾನು ಮಾನಸಿಕವಾಗಿ ಗಟ್ಟಿಗೊಂಡಿರುತ್ತೇನೆ.

ಯಾವ ಪಂದ್ಯದಲ್ಲಿ ಆಡಿದರೂ 100 ಪ್ರತಿಶತ ಸಾಧನೆ ದಾಖಲಿಸಲೇ ಬೇಕೆಂಬುದು ನನ್ನ ನಿರ್ಧಾರವಾಗಿರುತ್ತದೆ. ಈ ಪಂದ್ಯದಲ್ಲಿ ನನ್ನ ಪ್ರಯತ್ನಕ್ಕೆ ತಕ್ಕ ಫ‌ಲ ಸಿಕ್ಕಿತು. ಇದರಿಂದ ಸಮಾಧಾನವಾಗಿದೆ’ ಎಂಬುದಾಗಿ ಮಾಲಿಂಗ ಹೇಳಿದರು.

ಲಸಿತ ಮಾಲಿಂಗ ಓವರೊಂದ ರಲ್ಲಿ 2 ಸಲ 2 ವಿಕೆಟ್‌ ಹಾರಿಸುವ ಮೂಲಕ ಆರ್‌ಸಿಬಿಗೆ ಬ್ರೇಕ್‌ ಹಾಕಿ ದರು. ಒಂದು ಓವರ್‌ನಲ್ಲಿ ಮೊಯಿನ್‌ ಅಲಿ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ವಿಕೆಟ್‌ ಹಾರಿಸಿದರೆ, ಇನ್ನಿಂಗ್ಸಿನ ಅಂತಿಮ ಓವರ್‌ನಲ್ಲಿ ಅಕ್ಷದೀಪ್‌ನಾಥ್‌ ಮತ್ತು ಪವನ್‌ ನೇಗಿ ವಿಕೆಟ್‌ ಕಿತ್ತರು.

“ಅಪಾಯಕಾರಿ ಡಿವಿಲಿಯರ್ ಸಿಡಿಯದಂತೆ ನೋಡಿಕೊಳ್ಳಬೇಕು, ಅವರಿಗೆ ಸಾಧ್ಯವಾದಷ್ಟು ಕಡಿಮೆ ಬೌಂಡರಿ ನೀಡಬೇಕು ಎಂಬುದು ನಮ್ಮ ಯೋಜನೆಯಾಗಿತ್ತು’ ಎಂದೂ ಮಾಲಿಂಗ ಹೇಳಿದರು.

Advertisement

ಈ ಮರು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 171 ರನ್‌ ಪೇರಿಸಿದರೆ, ಮುಂಬೈ 19 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್‌ ಮಾಡಿ ಜಯ ಸಾಧಿಸಿತು. ಇದರೊಂದಿಗೆ ಆರ್‌ಸಿಬಿ ಎದುರಿನ ಪ್ರಸಕ್ತ ಐಪಿಎಲ್‌ನ ಎರಡೂ ಪಂದ್ಯಗಳಲ್ಲಿ ಮುಂಬೈ ಗೆದ್ದಂತಾಯಿತು.

7ನೇ ಸೋಲಿನೊಂದಿಗೆ ಆರ್‌ಸಿಬಿ ಕೂಟದಿಂದ ಬಹುತೇಕ ಹೊರಬಿದ್ದಿದೆ.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-7 ವಿಕೆಟಿಗೆ 171. ಮುಂಬೈ-19 ಓವರ್‌ಗಳಲ್ಲಿ 5 ವಿಕೆಟಿಗೆ 172 (ಡಿ ಕಾಕ್‌ 40, ಹಾರ್ದಿಕ್‌ ಔಟಾಗದೆ 37, ಸೂರ್ಯಕುಮಾರ್‌ 29, ರೋಹಿತ್‌ 28, ಇಶಾನ್‌ 21, ಅಲಿ 18ಕ್ಕೆ 2, ಚಾಹಲ್‌ 27ಕ್ಕೆ 2).

ಪಾಂಡ್ಯ ಗೇಮ್‌ ಚೇಂಜರ್‌
ಮುಂಬೈ ಕಪ್ತಾನ ರೋಹಿತ್‌ ಶರ್ಮ ಅವರ ಸಂತಸಕ್ಕೆ ಕಾರಣವಾದದ್ದು ಹಾರ್ದಿಕ್‌ ಪಾಂಡ್ಯ ಅವರ ಬಿಗ್‌ ಹಿಟ್ಟಿಂಗ್‌ ಸ್ಟೈಲ್‌. “ಇದರಿಂದ ತಂಡಕ್ಕೂ ಅವರಿಗೂ ಭಾರೀ ಲಾಭ. ಹಾರ್ದಿಕ್‌ ಇದೇ ಆಟವನ್ನು ಮುಂದುವರಿಸಬೇಕು. ಅವರೋರ್ವ ಗೇಮ್‌ ಚೇಂಜರ್‌’ ಎಂದರು.

6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಪಾಂಡ್ಯ 16 ಎಸೆತಗಳಿಂದ ಅಜೇಯ 37 ರನ್‌ ಬಾರಿಸಿ (5 ಬೌಂಡರಿ, 2 ಸಿಕ್ಸರ್‌) ಮುಂಬೈ ಗೆಲುವನ್ನು ಸಾರಿದರು.

ಬೌಲಿಂಗ್‌ ಪ್ರಯತ್ನ ಸಾಲದು: ಕೊಹ್ಲಿ
“ನಮ್ಮ ಬೌಲಿಂಗ್‌ ಪ್ರಯತ್ನ ಏನೂ ಸಾಲದು. ಪವರ್‌ ಪ್ಲೇಯಲ್ಲಿ ನಿಯಂತ್ರಣ ಸಾಧಿಸಲಾಗಲಿಲ್ಲ. ಕೊನೆಯಲ್ಲಿ ಉತ್ತಮ ಹೋರಾಟ ನಡೆಸಿದರೂ ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದುದರಿಂದ ಎಡಗೈ ಸ್ಪಿನ್ನರ್‌ನನ್ನು ದಾಳಿಗೆ ಇಳಿಸುವ ರಿಸ್ಕ್ ತೆಗೆದುಕೊಳ್ಳಬೇಕಾಯಿತು’ ಎಂದು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next