ಪುತ್ತೂರು: ಉತ್ತಮ ಶಿಕ್ಷಣವು ಮಾನವನ ಬದುಕಿಗೆ ದಾರಿ ದೀಪವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸಿದ ಜ್ಞಾನ ಸಂಪತ್ತು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪುಗೊಳಿಸಬಲ್ಲ ವಿಶೇಷ ಸಾಮರ್ಥ್ಯವನ್ನು ಹೊಂದಿದೆ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಹೇಳಿದರು.
ಕಾಲೇಜಿನ ಗಣಕ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಿ ನಿರ್ಗಮಿಸುತ್ತಿರುವ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿದಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಒಂದು ನಿರಂತರ ಪ್ರಕ್ರಿಯೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಪ್ರಮುಖ ಜವಾಬ್ದಾರಿ ಯನ್ನು ಹೊಂದಿವೆ. ಶಿಕ್ಷಣ ನೀಡಿದ ಶಿಕ್ಷಕ ವೃಂದ ಮತ್ತು ಸಂಸ್ಥೆಯ ಕುರಿತು ಸದಾ ಕೃತಜ್ಞತಾ ಭಾವದಿಂದ ಇರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಅಡಗಿರುವ ಧನಾತ್ಮಕ ಅಂಶ ಗಳನ್ನು ಸಮಾಜದಲ್ಲಿ ಪ್ರಸ್ತುತ ಪಡಿಸುವ ಮನೋಗುಣವೇ ವಿದ್ಯಾರ್ಥಿಗಳು ಸಂಸ್ಥೆಗೆ ನೀಡಬಲ್ಲ ಶ್ರೇಷ್ಠ ಮಟ್ಟದ ಗುರುಕಾಣಿಕೆ ಎಂದು ಹೇಳಿ ಶುಭ ಹಾರೈಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ. ಮಾತನಾಡಿ, ವಿದ್ಯಾರ್ಜನೆಯ ಸಂದರ್ಭದಲ್ಲಿ ಅನುಭವಕ್ಕೆ ಬರುವ ಎಲ್ಲ ಸನ್ನಿವೇಶಗಳು ಜೀವನ ಪೂರ್ತಿ ಹಚ್ಚ ಹಸಿರಾಗಿರುತ್ತವೆ. ಸಂಪಾದಿಸಿದ ಜ್ಞಾನ ಮತ್ತು ಕೌಶಲಗಳು ವೃತ್ತಿ ಬದುಕಿನ್ನು ನಿರ್ಧರಿಸಿ, ಭವಿಷ್ಯವು ಕಂಗೊಳಿಸುವಂತಾಗಲಿ ಎಂದು ಹಾರೈಸಿದರು.
ಯತಿನ್ ನಾೖಕ್ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು. ನಮಿಶಾ ಎಸ್. ರಾವ್ ಕಾರ್ಯಕ್ರಮ ನಿರ್ವಹಿಸಿದರು.