Advertisement

ಒಳ್ಳೇ ಅಪ್ಪ- ಅಮ್ಮ ಅಂದ್ರೆ…

06:00 AM Aug 01, 2018 | |

ಒಳ್ಳೆ ಅಪ್ಪ- ಅಮ್ಮ ಹೇಗಿರಬೇಕು? ಇದು ಇಂದಿನ ತುರ್ತು ಪ್ರಶ್ನೆ. ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪ್ರತಿ ಪೋಷಕರ ಹೊಣೆ. ಮಗುವಿಗೆ ಅನ್ನ, ಬಟ್ಟೆ, ವಿದ್ಯೆ ನೀಡಿ, ಅವರ ಜತೆಗಿರೋದಷ್ಟೇ ಹೆತ್ತವರ ಹೊಣೆ ಆಗುವುದಿಲ್ಲ. ಹಾಗಾದರೆ, ಮತ್ತೆ ಇನ್ನೇನನ್ನು ಧಾರೆಯೆರೆಯಬೇಕು?

Advertisement

1. ಮಕ್ಕಳನ್ನು ಪ್ರೀತಿಸಿ, ನಿಷ್ಕಲ್ಮಷವಾಗಿ ಪ್ರೀತಿಸುವುದನ್ನು ತೋರಿಸಿಕೊಡಿ. ಹೆತ್ತವರು ನಿಸ್ವಾರ್ಥ ಪ್ರೀತಿಯಿಂದ ನಡೆದುಕೊಂಡರೆ, ಇದು ಮಕ್ಕಳಲ್ಲೂ ತಮ್ಮ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುತ್ತದೆ. ಅದೆಷ್ಟೋ ಜಟಿಲ ಸಮಸ್ಯೆಗಳನ್ನು ಪ್ರೀತಿಯಿಂದ ಬಗೆಹರಿಸಬಹುದಾದುದರಿಂದ, ಅದು ಸಂಬಂಧಗಳನ್ನು ಸುಮಧುರಗೊಳಿಸ್ತದೆ. ಪ್ರೀತಿ, ಯಶಸ್ವೀ ಬದುಕಿನ ಸೂತ್ರವೂ ಹೌದು.

2. ಅಭಿನಂದಿಸಿ. ಮಕ್ಕಳು ಸಣ್ಣಪುಟ್ಟ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಪ್ರಶಂಸೆಯಿರಲಿ. ಮಗುವಿನ ಕೋಣೆಯನ್ನು ಅದೇ ಸ್ವಚ್ಛಗೊಳಿಸಿದ್ರೆ “ಅರೆ, ಪರ್ವಾಗಿಲ್ವೇ… ಭೇಷ್‌…’ ಎಂದು ಶ್ಲಾಘಿಸಿ. ಇಂಥ ಪ್ರಶಂಸೆಗಳು ಮಕ್ಕಳ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲವು. ಮಕ್ಕಳಿಗೆ ಮಾತನಾಡಲು, ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ. ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳದೇ ಸರಿತಪ್ಪುಗಳನ್ನು ನಿರ್ಣಯ ಮಾಡುವ ಜಡ್ಜ್ ಆಗದಿರಿ. ಅವರ ಭಾವನೆಗಳನ್ನು ಗೌರವಿಸಿ.

3. ಮಕ್ಕಳ ಪ್ರತಿಯೊಂದು ಆಸಕ್ತಿಗಳನ್ನೂ ಪ್ರೋತ್ಸಾಹಿಸಿ. ಸೋಲಿನ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸುವ, ಧೈರ್ಯಗುಂದದೆ ಮುನ್ನುಗ್ಗುವ ಕಲೆ ಹೇಳಿಕೊಡಿ. ಹೊರಗಿನ ಒತ್ತಡಗಳನ್ನು, ಚಿಂತೆಗಳನ್ನು ಮನೆಯವರ ಮೇಲೆ ಹೇರದಿರಿ. ಪ್ರದರ್ಶಿಸದಿರಿ. ಇದು ನಿಮ್ಮ ಕಳಪೆ ಮಟ್ಟದ ಒತ್ತಡ ನಿರ್ವಹಣೆಯ ಸೂಚಕವಾಗಿರುತ್ತದೆ. ಈ ವಿಚಾರದಲ್ಲಿ ಮಕ್ಕಳಿಗೆ ಹೆತ್ತವರೇ ಪ್ರಥಮ ರೋಲ್‌ಮಾಡೆಲ್‌ ಆಗಿರುತ್ತಾರೆ.

4. ಯಾವುದೇ ಸಂಬಂಧಗಳು ಗಟ್ಟಿಯಾಗಿ ಉಳಿಯಬೇಕಾದರೆ, ನಂಬಿಕೆ ಬಹಳ ಮುಖ್ಯ. ನಿಮ್ಮ ಮಕ್ಕಳನ್ನು ನಂಬಿ. ನಂಬಿಕೆ ಇಲ್ಲದವರಂತೆ ವರ್ತಿಸಿದ್ರೆ, ಅನವಶ್ಯಕ ವಾದ- ವಿವಾದ, ಅಪಾರ್ಥಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಅಲ್ಲದೇ, ಮಕ್ಕಳು ಹದಿಹರೆಯದಲ್ಲಿದ್ದವರಾಗಿದ್ರೆ ಅವರಿಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಅದನ್ನು ಪ್ರತಿಭಟಿಸುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಇದಕ್ಕೆಲ್ಲ ಪ್ರೀತಿ- ವಿಶ್ವಾಸವೇ ಮದ್ದು.

Advertisement

5. ಹೆತ್ತವರು ಹೊಂದಿರಬೇಕಾದ ಮತ್ತೂಂದು ಪ್ರಮುಖ ಗುಣ, “ಅರ್ಥಮಾಡಿಕೊಳ್ಳುವಿಕೆ’. ಮಕ್ಕಳು ಹೆತ್ತವರ ಜೊತೆ ಮನಃಸ್ಫೂರ್ತಿಯಾಗಿ ಮಾತಾಡುವಂಥ ವಾತಾವರಣ ಬೇಕಿರುತ್ತದೆ. ಅದನ್ನು ನಾವು ಕಲ್ಪಿಸಿಕೊಡಬೇಕು. ಹೆತ್ತವರ ಮತ್ತು ಮಕ್ಕಳ ಮಧ್ಯೆ ಸ್ನೇಹಿತರ ನಡುವೆ ಇರುವಂಥ ಬಾಂಧವ್ಯ ಇರಬೇಕಾಗುತ್ತದೆ. 

6. ಪೋಷಕರಾಗಿ, ಮಕ್ಕಳಿಗೆ ಸದಾ ಬೆಂಬಲಿಗರಾಗಿರುವುದು ಬಹಳ ಮುಖ್ಯ. ಪ್ರತಿಬಾರಿಯೂ ಸಮಸ್ಯೆ ಎದುರಾದಾಗ ಮಕ್ಕಳು ಮೊದಲು ನೋಡೋದು ಹೆತ್ತವರ ಮುಖವನ್ನು. ಏನೇ ಸಮಸ್ಯೆಯಿರಲಿ, ಮಕ್ಕಳ ಪರವಾಗಿ ಹೆತ್ತವರು ನಿಲ್ಲಬೇಕಾಗುತ್ತದೆ. ಅವರಿಗೆ ಒಂಟಿ ಎನ್ನುವ ಭಾವ ಮೂಡಬಾರದು.

7. ಮಕ್ಕಳ ಶಾಲಾಜೀವನದ ಪ್ರಾರಂಭಕ್ಕೂ ಮೊದಲು ತಂದೆ- ತಾಯಿಯೇ ಅವರಿಗೆ ಸ್ನೇಹಿತರು. ನಂತರ ಅವರ ಪ್ರಪಂಚ ವಿಶಾಲವಾಗುತ್ತೆ. ಈ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆತ್ತವರು ಸ್ವಲ್ಪ ಜಾಗರೂಕರಾಗಿರಬೇಕಾಗುತ್ತೆ. ಮಕ್ಕಳು ಹೆತ್ತವರ ಜೊತೆ ಮುಚ್ಚಟೆಯಿಲ್ಲದೆ ನಡೆದುಕೊಳ್ಳುವ ವಾತಾವರಣ ನಿರ್ಮಿಸಬೇಕಾಗುತ್ತದೆ. ಯಾವುದೇ ಸಮಸ್ಯೆಯಿದ್ದರೂ ಅವರು ಮೊದಲು ಹೆತ್ತವರಲ್ಲಿ ಹೇಳಿಕೊಳ್ಳುವಷ್ಟು ಸ್ನೇಹಭಾವ ಮೂಡಿಸಬೇಕು.

8. ಮಕ್ಕಳನ್ನು ನಿಭಾಯಿಸುವುದು ಅದೆಷ್ಟೋ ಸಲ ತ್ರಾಸದಾಯಕ ಅನಿಸಬಹುದು. ಆದರೆ, ಮಕ್ಕಳ ಜೊತೆ ತಾಳ್ಮೆಯಿಂದ ವರ್ತಿಸುವುದು ಅಗತ್ಯ. 

ಶುಭಾಶಯ ಜೈನ್‌ 

Advertisement

Udayavani is now on Telegram. Click here to join our channel and stay updated with the latest news.

Next