Advertisement
ಪರಿಸರ ಸ್ನೇಹಿ ಗಣೇಶೋತ್ಸವ: ಜಿಲ್ಲೆಯಲ್ಲಿ ಒಂದು ಕಾಲಕ್ಕೆ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಸಿದ್ಧಪಡಿಸಿದ ಗಣೇಶ ಮೂರ್ತಿಗಳ ತಯಾರಿಕೆ ಎಗ್ಗಿಲ್ಲದೇ ಸಾಗಿತ್ತು. ಇದು ಜಿಲ್ಲೆಯ ಪರಿಸರ ಮೇಲೆ ಹಾಗೂ ಕೆರೆ, ಕುಂಟೆಗಳಲ್ಲಿ ಕಲುಷಿತಕ್ಕೆ ಕಾರಣವಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರಿದ್ದನ್ನು ಅರಿತ ಜಿಲ್ಲಾಡಳಿತ, ಎರಡು ಮೂರು ವರ್ಷಗಳಿಂದ ಪಿಒಪಿ ಗಣೇಶ ಅಬ್ಬರಕ್ಕೆ ಕಡಿವಾಣ ಹಾಕಿದ ಪರಿಣಾಮ ಇದೀಗ ಜಿಲ್ಲಾದ್ಯಂತ ಪರಿಸರ ಸ್ನೇಹಿ ಗಣೇಶೋತ್ಸವದ ಕೂಗು ಕೇಳಿ ಬರುತ್ತಿದೆ.
Related Articles
Advertisement
ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದ ಪರಿಸರ ಇಲಾಖೆ: ಜಿಲ್ಲೆಯ ಸ್ಥಳೀಯ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಮಾರಾಟದ ಮೇಲೆ ನಿಷೇಧ ಹೇರಿರುವ ಪರಿಸರ ಇಲಾಖೆ, ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಸಹ ಪತ್ರ ಬರೆದು ಪಿಒಪಿ ಗಣಪತಿಗಳ ಮಾರಾಟ ಮೇಲೆ ನಿಗಾ ವಹಿಸುವಂತೆ ಸೂಚಿಸಿದೆ. ಸದ್ಯದಲೇ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣಪತಿಗಳ ಮಾರಾಟ ತಡೆಯಲು ಇನ್ನಷ್ಟು ಬಿಗಿ ಕ್ರಮಗಳನ್ನು ವಹಿಸಲಾಗುವುದು.
ನೀರು ಕಲುಷಿತ: ಸಾರ್ವಜನಿಕರು, ಸಂಘ, ಸಂಸ್ಥೆಗಳು ಪರಿಸರ ಸ್ನೇಹಿಯಾಗಿರುವ ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ಉತ್ಸವಗಳಿಗೆ ಬಳಸಲಿ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಹಾಗೂ ಬಣ್ಣ ಲೇಪಿತ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಭೂಮಿ ಕೂಡ ವಿಷಮಯವಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ನೀರಿನಲ್ಲಿ ದಶಕಗಳೇ ಕಳೆದರೂ ಕರಗುವುದಿಲ್ಲ.
ಇದರಿಂದ ನೀರು ಕಲುಷಿತಗೊಂಡು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಜಲಚರ ಪ್ರಾಣಿಗಳ ಪ್ರಾಣಕ್ಕೂ ಕುತ್ತು ಬರುತ್ತದೆ. ಹೀಗಾಗಿ ಪಿಒಪಿ ಗಣಪತಿಗಳ ಮಾರಾಟದ ಮೇಲೆ ಜಿಲ್ಲೆಯಲ್ಲಿ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಕಚೇರಿಯ ಸಹಾಯಕ ಪರಿಸರ ಅಧಿಕಾರಿ ವಿಜಯಾ ಸೋಮವಾರ ತಮ್ಮನ್ನು ಸಂಪರ್ಕಿಸಿದ “ಉದಯವಾಣಿ’ಗೆ ತಿಳಿಸಿದರು.
ಆದೇಶ ಉಲ್ಲಂಘಿಸಿದರೆ ಕ್ರಮ: ಮಣ್ಣಿನಿಂದ ಹೊರತುಪಡಿಸಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಜಿಲ್ಲೆಯಲ್ಲಿ ಯಾರೇ ಗಣಪತಿಗಳನ್ನು ತಯಾರಿಸುತ್ತಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಪರಿಸರ ಇಲಾಖೆ ಸಿದ್ಧವಾಗಿದೆ. ಜತೆಗೆ ಆದೇಶವನ್ನು ಉಲ್ಲಂ ಸಿ ಬಣ್ಣ ಲೇಪಿತ ಗಣಪತಿಗಳನ್ನು ತಯಾರಿಸುತ್ತಿರುವ ಕುರಿತು ಮಾಹಿತಿ ನೀಡಿದರೆ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
* ಜಿಲ್ಲಾದ್ಯಂತ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧ* 2 ವರ್ಷದಿಂದ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು
* ಸ್ಥಳೀಯ ಸಂಸ್ಥೆಗಳಲ್ಲಿ ಪಿಒಪಿ ಮೂರ್ತಿಗಳ ತಯಾರಾಗದಂತೆ ಎಚ್ಚರ
* ಪರಿಸರ ಮಾಲಿನ್ಯ ಮಂಡಳಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಪತ್ರ
* ಜಿಲ್ಲಾಡಳಿದ ಆದೇಶಕ್ಕೆ ತಲೆಬಾಗಿದ ಮೂರ್ತಿಗಳ ವ್ಯಾಪಾರಸ್ಥರು
* ಜೇಡಿ ಮಣ್ಣು, ಪೇಪರ್ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
* ಪಿಒಪಿ ಗಣೇಶ ಮೂರ್ತಿಗಳ ಬಗ್ಗೆ ಮಾಹಿತಿ ಕೊಟ್ಟರೆ ದಾಳಿ
* ಒಂದರೆಡು ದಿನಗಳಲ್ಲಿ ಜಿಲ್ಲಾದ್ಯಂತ ಮೊದಲ ಹಂತದ ಕಾರ್ಯಾಚರಣೆ ಜಿಲ್ಲಾದ್ಯಂತ ಕಳೆದ ಎರಡು ವರ್ಷಗಳಿಂದ ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರಲ್ಲಿ ಗಣೇಶ ಮೂರ್ತಿಗಳ ಮಾರಾಟ ಶುರುವಾಗಿದ್ದು, ಒಂದರೆಡು ದಿನದಲ್ಲಿ ನಾವು ಕಾರ್ಯಾಚರಣೆ ಮಾಡುತ್ತೇವೆ. ಈಗಾಗಲೇ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಪತ್ರ ಬರೆದು ಪಿಒಪಿ ಗಣೇಶ ಮೂರ್ತಿಗಳ ಮಾರಾಟವಾಗದಂತೆ ಎಚ್ಚರ ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
-ವಿಜಯಾ, ಸಹಾಯಕ ಪರಿಸರ ಅಧಿಕಾರಿ ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ ಪ್ಯಾಸ್ಟರ್ ಆಫ್ ಪ್ಯಾರೀಸ್‌ನಿಂದ ಸಿದ್ಧಪಡಿಸುವ ಗಣೇಶ ಮೂರ್ತಿಗಳ ಮಾರಾಟದ ಮೇಲೆ ನಿಷೇಧ ಹೇರಿದೆ. ಮಣ್ಣು ಹಾಗೂ ಪೇಪರ್‌ನಿಂದ ಸಿದ್ಧಪಡಿಸಿದ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರು ಕೂಡ ಜಿಲ್ಲಾಡಳಿತದ ಆದೇಶಕ್ಕೆ ತಲೆಬಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ನಾವು ಮಾರಾಟ ಮಾಡುವ ಗಣೇಶ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ.
-ರಾಜು, ತಿಪ್ಪೇನಹಳ್ಳಿ, ಗಣೇಶ ಮೂರ್ತಿಗಳ ಮಾರಾಟಗಾರ * ಕಾಗತಿ ನಾಗರಾಜಪ್ಪ