ಕನ್ನಡದಲ್ಲಿ ಈಗಾಗಲೇ ಹಲವು ತಂತ್ರಜ್ಞರ ಮಕ್ಕಳು ಹೀರೋಗಳಾಗಿ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ ಈಗ ಕೌರವ ವೆಂಕಟೇಶ್ ಪುತ್ರ ವಿ.ರವಿಚಂದ್ರನ್ ಹೊಸ ಸೇರ್ಪಡೆ. ಹೌದು, ಕನ್ನಡ, ಹಿಂದಿ, ತೆಲುಗು, ತಮಿಳು, ತುಳು ಭಾಷೆಯ ಸುಮಾರು 1125 ಚಿತ್ರಗಳಿಗೆ ಫೈಟರ್ ಆಗಿ, ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕೌರವ ವೆಂಕಟೇಶ್, ತಮ್ಮ ಪುತ್ರ ವಿ. ರವಿಚಂದ್ರನ್ ಅವರನ್ನು “ಗುಡ್ ಬೈ’ ಚಿತ್ರದ ಮೂಲಕ ಹೀರೋ ಕಮ್ ನಿರ್ದೇಶಕರನ್ನಾಗಿ ಪರಿಚಯಿಸುತ್ತಿದ್ದಾರೆ.
ಸದ್ದಿಲ್ಲದೆಯೇ ಶುರುವಾಗಿದ್ದ “ಗುಡ್ ಬೈ’ ಈ ವಾರ ತೆರೆಕಾಣುತ್ತಿದೆ. ಆ ಕುರಿತು ಹೇಳಲೆಂದೇ ಮಾಧ್ಯಮ ಮುಂದೆ ಕುಳಿತಿತ್ತು ಚಿತ್ರತಂಡ. ಅಂದು ಮಾತಿಗಿಳಿದ ಕೌರವ ವೆಂಕಟೇಶ್, “ಇಂದು ನನ್ನ ಸಾಧನೆಗೆ ಮಾಧ್ಯಮ ಕಾರಣ. ಮೊದಲ ಬಾರಿಗೆ ನನ್ನ ಮಗ ಹೀರೋ ಆಗಿ, ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಎಷ್ಟೋ ನಿರ್ದೇಶಕರ ಚಿತ್ರಗಳಿಗೆ ನಾನು ಸಾಹಸ ಸಂಯೋಜಿಸಿದ್ದೇನೆ.
ನನ್ನ ಮಗನ ನಿರ್ದೇಶನದ ಚಿತ್ರಕ್ಕೆ ಸಾಹಸ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಈ ವಾರ ಚಿತ್ರ ತೆರೆಗೆ ಬರುತ್ತಿದೆ. ನನಗೆ ಕೊಟ್ಟ ಸಹಕಾರ ನನ್ನ ಮಗನಿಗೂ ಕೊಡಿ. ಸಿನಿಮಾ ರಂಗದಲ್ಲಿ ಎಲ್ಲವೂ ಸುಲಭವಲ್ಲ. ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ನನ್ನ ಕೆಲಸ ಗುರುತಿಸಿದ್ದು, ಮಾಧ್ಯಮ. ಮಗನ ಮೊದಲ ಚಿತ್ರ ತಪ್ಪಿದ್ದರೆ ತಿದ್ದಿ, ಚೆನ್ನಾಗಿದ್ದರೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ’ ಅಂದರು ಕೌರವ ವೆಂಕಟೇಶ್.
ಮೊದಲ ಸಲ ನಾಯಕನಾಗಿ, ನಿರ್ದೇಶಕನಾಗಿಯೂ ಕಾಣಿಸಿಕೊಳ್ಳುತ್ತಿರುವ ವಿ.ರವಿಚಂದ್ರನ್, “ಇದೊಂದು ಸಸ್ಪೆನ್ಸ್ ಥ್ರಿಲ್ಲರ್. ಸಾಮಾನ್ಯವಾಗಿ ಫ್ರೆಂಡ್‌ಶಿಪ್ ಬಿಟ್ಟುಹೋದಾಗ, ಲವ್ ಬ್ರೇಕಪ್ ಆದಾಗ, ಕೊನೆಯಲ್ಲಿ ಬಳಸುವ ಪದವೇ “ಗುಡ್ ಬೈ’. ಈ ಚಿತ್ರದ ಮೂಲಕ ಜನರಿಗೆ ಹೊಸ ಸಂದೇಶ ಕೊಡಲು ಹೊರಟಿದ್ದೇನೆ. ನಾನು ಅಪ್ಪನ ಜೊತೆ ಸೆಟ್‌ಗೆ ಹೋಗುತ್ತಿದ್ದೆ. ಆಗಲೇ ಸಿನಿಮಾ ಆಸಕ್ತಿ ಬೆಳೆದಿತ್ತು.
ನಿರ್ದೇಶಕರು ಹೇಗೆಲ್ಲಾ ಕೆಲಸ ಮಾಡುತ್ತಾರೆ ಅನ್ನುವುದನ್ನು ನೋಡುತ್ತಿದ್ದೆ.ನಿರ್ದೇಶನ ಮಾಡಬೇಕು ಅಂತ ತಯಾರಿ ನಡೆಸಿದ್ದೆ.ಇನ್ಸ್‌ಟಿಟಿೂÂಟ್‌ಗೂ ಹೋಗಿ ತರಬೇತಿ ಪಡೆದೆ ಲವ್, ಸಸ್ಪೆನ್ಸ್ ಕಥೆ ಮಾಡಿಕೊಂಡು ಮರ್ಡರ್ ಮಿಸ್ಟ್ರಿ ಚಿತ್ರ ಮಾಡಿದ್ದೇನೆ. ನಾನಿಲ್ಲಿ ಕಾಲೇಜ್ ಸ್ಟುಡೆಂಟ್ ಆಗಿ ನಟಿಸಿದ್ದೇನೆ. ಮೊನಿಷಾ ಥಾಮಸ್ ನಾಯಕಿಯಾಗಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.
ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಶೋಭರಾಜ್, ಬಿರಾದಾರ್, ಪದ್ಮಾವಾಸಂತಿ ಇತರರು ಇದ್ದಾರೆ’ ಅಂತ ವಿವರ ಕೊಟ್ಟರು ನಿರ್ದೇಶಕರು. “ಜಮಾನ’ ಚಿತ್ರದ ನಾಯಕ ಜಯಪ್ರಕಾಶ್, ಈ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. “ಕೌರವ ವೆಂಕಟೇಶ್ ಮಾಸ್ಟರ್ “ಜಮಾನ’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮಾಡಿಸಿದ್ದರು. ಆಗ ಯಾವುದೇ ಡೂಪ್ ಇಲ್ಲದೆ ಸ್ಟಂಟ್ ಮಾಡಿದ್ದೆ. ಇಲ್ಲಿ ಆ್ಯಕ್ಷನ್ ಹೆಚ್ಚಾಗಿರುವುದರಿಂದ ನನಗೊಮ್ಮೆ ಫೋನ್ ಮಾಡಿ, ಕಥೆ ಹೇಳಿಸಿದರು. ಇಷ್ಟವಾಗಿ ಮಾಡಿದ್ದೇನೆ.ಯುವ ನಿರ್ದೇಶಕ, ಯುವ ನಾಯಕನೊಬ್ಬನ ಜೊತೆ ಕೆಲಸ ಮಾಡಿದ್ದು ಸಂತಸವಾಗಿದೆ’ ಅಂದರು ಜಯಪ್ರಕಾಶ್.
ವೆಸಿ ಬ್ರೌನ್ ಚಿತ್ರಕ್ಕೆ ಛಾಯಾಗ್ರಾಹಕರು. ಅವರಿಲ್ಲಿ ಎರಡು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಿದ್ದಾರಂತೆ. ಮಗನ ಚಿತ್ರಕ್ಕೆ ತಂದೆ ಸಾಹಸ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಹೇಳಿದಂತೆ ಮಗ ಕೇಳ್ತಾನೆ. ಆದರೆ, ಈ ಚಿತ್ರದಲ್ಲಿ ಮಗ ಹೇಳಿದಂತೆ ತಂದೆ ಕೆಲಸ ಮಾಡಿದ್ದಾರೆ. ಒಂದೊಳ್ಳೆಯ ಚಿತ್ರ ಇದಾಗಲಿದೆ ಎಂಬುದು ವೆಸ್ಲಿಬ್ರೌನ್ ಮಾತು.
ಚಿತ್ರಕ್ಕೆ ರಮಾದೇವಿ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಉತ್ತರ ಕರ್ನಾಟಕ ಕಲಾವಿದ ಸಿದ್ದು ಹಾಸ್ಯ ಪಾತ್ರ
ನಿರ್ವಹಿಸಿದ್ದಾರಂತೆ.