Advertisement

ಭಜನೆಯಿಂದ ಉತ್ತಮ ಸಂಸ್ಕಾರ ಜಾಗೃತ

12:48 AM Sep 23, 2019 | Team Udayavani |

ಬೆಳ್ತಂಗಡಿ: ಬದುಕಿನುದ್ದಕ್ಕೂ ಪರಿಶುದ್ಧ ಮನಸ್ಸು ಪಡೆಯುವ ಏಕೈಕ ಮಾರ್ಗ ಭಜನೆ. ಭಜನೆಯಿಂದ ದೈವತ್ವ ಮತ್ತು ಉತ್ತಮ ಸಂಸ್ಕಾರ ಜಾಗೃತವಾಗುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನುಡಿದರು.

Advertisement

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ವಾರ ನಡೆದ 21ನೇ ವರ್ಷದ ಭಜನ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಂಸ್ಕಾರದ ಸಮಷ್ಟಿ ರೂಪವೇ ಸಂಸ್ಕೃತಿ. ವಿಶ್ವವೇ ಒಂದು ಕುಟುಂಬ ಎಂಬ ಭಾವನೆಯೊಂದಿಗೆ ಸೌಹಾರ್ದಯುತ ಜೀವನ ನಡೆಸಲು ಸಂಸ್ಕಾರ ಪ್ರೇರಣೆ ನೀಡುತ್ತದೆ. ಪರಿಶುದ್ಧ ಮನಸ್ಸಿನಿಂದ ಭಜನೆಯಲ್ಲಿ ಸಾಮೀಪ್ಯ ಪಡೆದರೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.

ಸಾಂಸ್ಕೃತಿಕ ರಾಯಭಾರಿಗಳಾಗಿ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಜನೆಯ ಮೂಲಕ ಸಮಾಜದಲ್ಲಿ ಭಕ್ತಿ, ಸಂಸ್ಕಾರವನ್ನು ಮೂಡಿಸುವ ಪ್ರಯತ್ನವಾಗುತ್ತಿದೆ. ಭಜನೆಯು ಸುಖ-ದುಃಖ ಸಮಾನ ಸ್ವೀಕಾರದ ಮನೋಭಾವ, ಹಂಚಿ ತಿನ್ನುವ ಶಕ್ತಿಯನ್ನು ನೀಡುತ್ತದೆ. ಶಿಬಿರಾರ್ಥಿಗಳು ಸಾಂಸ್ಕೃತಿಕ ರಾಯ ಭಾರಿಗಳಾಗಿ ಸಮಾಜದ ಸಂಘಟನೆಗೆ ಪ್ರಯತ್ನಿಸಬೇಕು ಎಂದರು.

ಹಿರೇಮಗಳೂರು ಕಣ್ಣನ್‌ ಶುಭಾ ಶಂಸನೆಗೈದು, ಭಜನೆಯಿಂದ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ. ಗೂಗಲ್‌ ಮುಂದೆ ಗೂಬೆಗಳಾಗುವ ಬದಲು ಭಜನ ಸಂಸ್ಕೃತಿ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದರು.

Advertisement

ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿಯವರನ್ನು ಡಾ| ಹೆಗ್ಗಡೆ ಅಭಿನಂದಿಸಿದರು. ಭಜನೆಗೆ ಸಹಕಾರ ನೀಡಿದ ಮಾಣಿಲ ಶ್ರೀಗಳನ್ನು ಗೌರವಿಸಲಾಯಿತು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್‌ ಪೂಂಜಾ, ಶ್ರೀ ಧ.ಮಂ. ಭಜನ ಪರಿಷತ್‌ನ ಉಪಾಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಸೋನಿಯಾ ಯಶೋವರ್ಮ, ಶ್ರೀ ಧ.ಮಂ. ಭಜನ ಪರಿಷತ್‌ನ ಅಧ್ಯಕ್ಷ ಬಾಲಕೃಷ್ಣ ಪಂಜ, ಸದಸ್ಯ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಶ್ರೀ ಧ.ಮಂ. ಭಜನ ಕಮ್ಮಟ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್‌ ವರದಿ ವಾಚಿಸಿದರು. ಭಜನ ಪರಿಷತ್‌ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ ವಂದಿಸಿ, ಸದಸ್ಯ ಶ್ರೀನಿವಾಸ್‌ ರಾವ್‌ ಮತ್ತು ಪ್ರದೀಪ್‌ ಜಿ. ಕಾರ್ಯಕ್ರಮ ನಿರೂಪಿಸಿದರು. ಮನೋರಮಾ ತೋಳ್ಪಾಡಿತ್ತಾಯ ಮಂಗಲ ಮಂತ್ರವನ್ನು ಮತ್ತು ಶಾಂತಿವನ ಟ್ರಸ್ಟ್‌ನ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌ ಸ್ವಸ್ತಿಮಂತ್ರ ಪಠಿಸಿದರು.

ಭಜನ ಕಮ್ಮಟದಲ್ಲಿ…
ರಾಜ್ಯದ 20 ಜಿಲ್ಲೆಗಳ 139 ಭಜನ ಮಂಡಳಿಗಳಿಂದ 146 ಪುರುಷರು ಮತ್ತು 108 ಮಹಿಳೆಯರು ಸೇರಿದಂತೆ ಒಟ್ಟು 254 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ದಾಸ ಸಾಹಿತ್ಯ, ವಚನಗಳು, ಸಮಕಾಲೀನ ಹಾಡುಗಳು, ಭಕ್ತಿಗೀತೆ, ದೇಶಭಕ್ತಿ ಗೀತೆ ತರಬೇತಿ ನೀಡಲಾಯಿತು. ಮಹಿಳಾ ಅಭ್ಯರ್ಥಿಗಳಿಗೆ ಸಂಪ್ರದಾಯ ಗೀತೆಗಳು, ಶೋಭಾನೆ ಹಾಡುಗಳು ಮತ್ತು ನೃತ್ಯ ಭಜನೆ ತರಬೇತಿ ನೀಡಲಾಯಿತು. ಮಹಿಳಾ ಶಿಬಿರಾರ್ಥಿಗಳ ವಿಶೇಷ ನೃತ್ಯ ಭಜನೆ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next