ಕೆಲವೊಂದು ಚಿತ್ರಗಳೇ ಹಾಗೆ. ತಮ್ಮ ಚಿತ್ರದ ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಮುಂದಿನ ನಿಲ್ದಾಣ’ ಚಿತ್ರವೂ ಸೇರಿದೆ. ಹೌದು, ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ನಾಲ್ವರು ಗೆಳೆಯರು ಸೇರಿ ಪ್ರೀತಿಯಿಂದ ನಿರ್ಮಿಸಿರುವ ಚಿತ್ರ ಅನ್ನೋದು ಒಂದಾದರೆ, ಇದೇ ಮೊದಲ ಸಲ ಶಾರುಖ್ ಖಾನ್ ಅವರ ಮಾಲೀಕತ್ವದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ಚಿತ್ರದ ಕಲರ್ ಗ್ರೇಡಿಂಗ್ ಮಾಡಿಸಿರುವ ಚಿತ್ರ ಅನ್ನೋದು ಮತ್ತೂಂದು ವಿಶೇಷ.
ಇವೆಲ್ಲದರ ನಡುವೆ, ಮಸಾಲ ಕಾಫಿ ತಂಡ ಸಂಗೀತ ನೀಡಿರುವ ಚಿತ್ರದ ಹಾಡೊಂದನ್ನು ಮೆಚ್ಚಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೂಡ ಟ್ವೀಟ್ ಮಾಡಿದ್ದು ಇನ್ನೊಂದು ವಿಶೇಷ. ಏಳು ಜನ ಸಂಗೀತ ನಿರ್ದೇಶಕರು ಏಳು ಹಾಡುಗಳನ್ನು ಕೊಟ್ಟಿರುವುದು ಚಿತ್ರದ ಹೊಸತನಕ್ಕೊಂದು ಸಾಕ್ಷಿ. ಸದ್ಯಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸುವ ಮೂಲಕ ಈಗಾಗಲೇ ಹಾಡು, ಟೀಸರ್, ಟ್ರೇಲರ್‌ನಲ್ಲೂ ಮೆಚ್ಚುಗೆ ಪಡೆದ “ಮುಂದಿನ ನಿಲ್ದಾಣ’ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ವಿದೇಶದಲ್ಲಿ ಚಿತ್ರದ ಪೂರ್ವಭಾವಿ ಪ್ರದರ್ಶನ ಏರ್ಪಡಿಸಲು ನಿರ್ಮಾಪಕ ಮುರಳೀಧರ್ ಸಿದ್ಧತೆ ನಡೆಸಿದ್ದಾರೆ.
ವಿದೇಶದಲ್ಲಿ “ಮುಂದಿನ ನಿಲ್ದಾಣ’ ಪ್ರದರ್ಶನಕ್ಕೆ ಕಾರಣ, ಅಲ್ಲಿನ ಅನಿವಾಸಿ ಭಾರತೀಯರು, ಚಿತ್ರದ ಹಾಡು, ಟ್ರೇಲರ್ ನೋಡಿ, ಸಿನಿಮಾ ಪ್ರದರ್ಶನ ಏರ್ಪಡಿಸಬೇಕು ಎಂದು ಮಾಡಿದ ಮನವಿ. ಹೀಗಾಗಿ, ಇಲ್ಲಿ ಬಿಡುಗಡೆಯಾಗುವ ಮೊದಲೇ ಅನಿವಾಸಿ ಭಾರತೀಯರಿಗೆ “ಮುಂದಿನ ನಿಲ್ದಾಣ’ ದರ್ಶನವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಟ್ರೆಂಡಿಂಗ್‌ನಲ್ಲಿದೆ.
ಪೋಸ್ಟರ್‌ನಲ್ಲೇ ಸಣ್ಣದ್ದೊಂದು ಕುತೂಹಲ ಮೂಡಿಸಿದ್ದ ಈ ಚಿತ್ರ, ನಂತರದ ದಿನಗಳಲ್ಲಿ “ಮನಸೇ ಮಾಯ’ ಹಾಡು ಹಾಗು ವಾಸುಕಿ ವೈಭವ್ ಸಂಯೋಜಿಸಿ ಹಾಡಿದ “ಇನ್ನೂನು ಬೇಕಾಗಿದೆ…’ ಹಾಡು ಕೇಳುಗರಿಂದ ಮೆಚ್ಚುಗೆ ಪಡೆದಿತ್ತು. ಟ್ರೇಲರ್ ಕೂಡ ಮುಂಬೈನಲ್ಲೇ ರೆಡಿಯಾಗಿದ್ದು ಚಿತ್ರದ ವಿಶೇಷತೆಗಳಲ್ಲೊಂದು. ಈ ಎಲ್ಲಾ ವಿಶೇಷತೆಗಳ ಜೊತೆಗೆ ಚಿತ್ರದಲ್ಲಿ ಸುಂದರ ತಾಣಗಳು ಸಹ ಮಾತನಾಡುತ್ತವೆ. ನಾಯಕ ಪ್ರವೀಣ್ ತೇಜ್ ಇಲ್ಲಿ ಮೊದಲ ಸಲ ಸಿಕ್ಸ್‌ಪ್ಯಾಕ್ ಜೊತೆಗೆ ಗ್ಲಾಮರಸ್ ಆಗಿ ಕಾಣಿಸಿಕೊಂಡರೆ, ರಾಧಿಕಾ ನಾರಾಯಣ್ ಹೊಸ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ. ಹೊಸ ಹುಡುಗಿ ಅನನ್ಯಾ ಕಶ್ಯಪ್‌ಗ್ೂ ಇದು ವಿಶೇಷ ಸಿನಿಮಾ ಎಂಬುದು ತಂಡದ ಮಾತು.
ವಿನಯ್ ಭಾರಧ್ವಜ್ ನಿರ್ದೇಶನದ ಈ ಚಿತ್ರದಲ್ಲಿ ದತ್ತಣ್ಣ, ಅಜೇಯ್‌ರಾಜ್ ಇತರರು ನಟಿಸಿದ್ದಾರೆ. ಕೋಸ್ಟಲ್ ಬ್ರಿಜ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವನ್ನು ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದಾರೆ.