ಧಾರವಾಡ: ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಕಲಾಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆದ ಬೆಳಗಾವಿ ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಕರು, ಪಾಲಕರು ಕಲಿಸುವ ಸಂಸ್ಕಾರ ವಿದ್ಯಾರ್ಥಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಸುತ್ತಲಿನ ಪರಿಸರವೂ ಮಕ್ಕಳ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು. ಆಗ ಮಾತ್ರ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಳ್ಳೆಯ ಹೆಸರು ತರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಗುರುವಿಗೆ ವಂದಿಸಿ ಶಿಕ್ಷಣ ಪಡೆಯುವುದು ಮುಖ್ಯ. ಆದರೆ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ ವಂದಿಸಿ ಬುದ್ಧಿ ಹೇಳುವಂತಾಗಿದೆ. ಇದರಿಂದ ಉನ್ನತ ಸಾಧನೆ ಮಾಡುವುದು ಕಷ್ಟ. ವ್ಯಕ್ತಿಗೆ ವೃತ್ತಿಗಿಂತ ಪ್ರವೃತ್ತಿ ಶ್ರೇಷ್ಠವಾಗಿರಬೇಕು. ಬದುಕಿನಲ್ಲಿ ವೃತ್ತಿಗೆ ಅಂತ್ಯವಿದ್ದು, ಪ್ರವೃತ್ತಿಗೆ ಕೊನೆ ಇಲ್ಲ. ಹೀಗಾಗಿ ಜೀವನದಲ್ಲಿ ಯಾವುದಾದರೊಂದು ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಭಾಷೆಗೆ ಎಲ್ಲ ರಂಗಗಳಲ್ಲಿ ಪ್ರಾಧ್ಯಾನತೆ ದೊರೆಯಬೇಕು. ಅದಕ್ಕಾಗಿ ಪ್ರಾಧಿಕಾರ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಫೆ.29 ಹಾಗೂ ಮಾ.1ರಂದು ವಿಜ್ಞಾನ ಕನ್ನಡ ಸಮ್ಮೇಳನ ಆಯೋಜಿಸಲಾಗಿದೆ ಎಂದರು. ಪ್ರಾಧಿಕಾರ ಸದಸ್ಯೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿ, ಯಾವುದೇ ಹುದ್ದೆಯಲ್ಲಿದ್ದರೂ ಕನ್ನಡ ಮರೆಯಬಾರದು. ವ್ಯಕ್ತಿತ್ವ ವಿಕಾಸಕ್ಕೆ ಮಾತೃಭಾಷೆ ಪ್ರಮುಖವಾಗಿದೆ. ಆದ್ದರಿಂದ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯಬೇಕು ಎಂದರು.
ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಸಾಹಿತಿ ಶಂಕರ ಹಲಗತ್ತಿ, ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ಡಿಡಿಪಿಐ ಎಂ.ಎಲ್. ಹಂಚಾಟೆ, ವಿಜ್ಞಾನಿ ಪ್ರೊ| ಎಸ್.ಎನ್. ಶಿವಪ್ರಸಾದ, ಅರವಿಂದ ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಾ| ಕುಮಾರ ನಾಯ್ಕ ಇದ್ದರು. ಡಾ| ಕೆ. ಮುರಳೀಧರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ನಿರೂಪಿಸಿದರು. ಮಂಜುಳಾ ಯಲಿಗಾರ ವಂದಿಸಿದರು.
ಧಾರವಾಡದ ಭಾಷೆ, ಸಂಸ್ಕೃತಿ ಮಾದರಿಯಾಗಿದೆ. ಇಲ್ಲಿಯ ಭಾಷೆಯಲ್ಲಿ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ . ಅದರಲ್ಲಿ ಮೂರು ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಸಂತಸವನ್ನು ತಂದಿದೆ
. –ಟಿ.ಎಸ್.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ