Advertisement
ಗೋಶಾಲೆ ನಿರ್ಮಾಣಕ್ಕೆ ದೇವಸ್ಥಾನಗಳಿಗೆ ಜಮೀನು ಒದಗಿಸುವ ನಿಟ್ಟಿನಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ “ಎ’ ದರ್ಜೆಯ ದೇವಸ್ಥಾನಗಳ ಪೈಕಿ 10 ಕೋ. ರೂ.ಗಳಿಗೂ ಮಿಕ್ಕಿ ಆದಾಯವಿರುವ ದೇವ ಸ್ಥಾನಗಳಲ್ಲಿ ಗೋಶಾಲೆ ಸಾಕಾರವಾಗಲಿದೆ. ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಸ್ಥಾನಗಳಲ್ಲಿ ಇದು ಸಾಕಾರಗೊಳ್ಳಲಿದೆ.
ಸರಕಾರ ಹೊಸದಾಗಿ ಗೋಶಾಲೆಗಳ ಆರಂಭಕ್ಕೆ ಮುಂದಾಗಿದ್ದರೂ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆಗಳ ಪೈಕಿ ಕೆಲವು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಸರಕಾರದ ಪ್ರಕಾರ, ಜಾನುವಾರು ನಿರ್ವಹಣಾ ವೆಚ್ಚ ಪ್ರತೀ ದಿನಕ್ಕೆ 70 ರೂ. ಆಗಿದೆ. ಇದರಲ್ಲಿ ಶೇ. 25ರಷ್ಟನ್ನು (17.50 ರೂ.) ಮಾತ್ರ ಗೋಶಾಲೆಗಳಿಗೆ ಸರಕಾರ ಸಹಾಯಧನವಾಗಿ ನೀಡುತ್ತಿದೆ. ಗೋಶಾಲೆಯಲ್ಲಿ 400ರಷ್ಟು ದನ-ಕರುಗಳಿದ್ದರೆ ಸರಕಾರದ ಅನುದಾನ ಸಿಗುವುದು ಕೇವಲ 200ಕ್ಕೆ. ಲಾಕ್‌ಡೌನ್ ಬಳಿಕ ಹಣ ಹೊಂದಿಸುವುದೇ ಕಷ್ಟವಾಗುತ್ತಿದೆ.
ಅಕ್ರಮ ಸಾಗಾಟ ತಡೆದು ಪೊಲೀಸರು ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆ ಗಳಿಗೆ ಕಳುಹಿಸಲಾಗುತ್ತಿದೆ. ಇತ್ತೀಚೆಗೆ ಈ ಸಂಖ್ಯೆಯೂ ಏರಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಗೋ ಶಾಲೆಯವರಿಗೆ ನಿರ್ವಹಣೆಯ ಸವಾಲು ಎದುರಾಗಿದೆ.
Related Articles
ಗೋಶಾಲೆಗಳಿಗೆ ಇದೀಗ ಪುತ್ತೂರು ತಾಲೂಕಿನ ಕೊಯಿಲದ ಜಾನುವಾರು ಸಂವರ್ಧನ ಕೇಂದ್ರದಲ್ಲಿರುವ ಕೆಲವು ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಹೊಸ ಸವಾಲು ಎದುರಾಗಿದೆ. ಮುರ್ರಾ ಕೋಣ/ಗಂಡು ಕರು, ಸುರ್ತಿ ಕೋಣ, ಮಲೆನಾಡು ಗಿಡ್ಡ ಗಂಡು ರಾಸು, ಮಿಶ್ರತಳಿ ಗಂಡು ರಾಸುಗಳನ್ನು ನಿಯಮಿತವಾಗಿ ಎಲ್ಲ ಗೋಶಾಲೆಯವರು ಪಡೆದುಕೊಂಡು ಹೋಗುವಂತೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಇದರ ನಿರ್ವಹಣೆಯನ್ನು ಗೋಶಾಲೆಯವರೇ ನೋಡಿ ಕೊಳ್ಳಬೇಕು.
Advertisement
ಬೀಡಾಡಿ ಗೋವುಗಳಿಗೆ ರಕ್ಷಣೆ ಹಾಗೂ ಪೊಲೀಸರು ವಶಪಡಿಸಿಕೊಂಡ ಗೋವುಗಳಿಗೆ ನೀರು, ಮೇವು ಒದಗಿಸಿಕೊಡುವ ನೆಲೆಯಲ್ಲಿ ರಾಜ್ಯದ ಆಯ್ದ 25 ದೇವಸ್ಥಾನಗಳ ನೇತೃತ್ವದಲ್ಲಿಯೇ ಗೋಶಾಲೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು..– ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ಸಚಿವರು