ಗೋಣಿಕೊಪ್ಪಲು: 41ನೇ ದಸರಾ ಜನೋತ್ಸವ ಆಚರಣೆಯ 10 ದಿನಗಳು ನಡೆಯುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಅವರು ಕಾವೇರಿ ಕಲಾವೇದಿಕೆಯಲ್ಲಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಉಮಾಮಹೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಂತರ ವಿದ್ಯಾಶ್ರೀ ನಾಟ್ಯ ಸಂಕಲ್ಪ ತಂಡದಿಂದ ಭರತನಾಟ್ಯ ಹಾಗೂ ಬಿಗ್ ಬಾಸ್ ಖ್ಯಾತಿಯ ಸುಮರಾಜ್ ಅವರು ಮಾತನಾಡುವ ಗೊಂಬೆ ಹಾಗೂ ಮಕ್ಕಳಿಗಾಗಿ ಜಾದು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಮೊದಲ ದಿನದ ಸಾಂಸ್ಕೃತಿಕ ಸಂಜೆಗೆ ಮೆರಗನ್ನು ಒದಗಿಸಿದರು.
ಈ ಸಂದರ್ಭ ಮಾತನಾಡಿದ ಸ್ವಾಮಿ ಬೋಧಸ್ವರೂಪಾನಂದ ಅವರು ಆಧ್ಯಾತ್ಮಿಕತೆಯೊಂದಿಗೆ ದೇವಿಯನ್ನು ಆರಾಧಿಸುವುದರೊಂದಿಗೆ ಸ್ಥಳೀಯ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಯಿಸುವ ವೇದಿಕೆಯನ್ನು ಕಾವೇರಿ ದಸರಾ ಸಮಿತಿ ಕಲ್ಪಿಸಿರುವುದು ಶ್ಲಾಘನೀಯ. 41 ವರ್ಷಗಳ ಹಿಂದೆ ಹಿರಿಯರು ಈ ಚಿಂತನೆಯಲ್ಲಿ ಹಾದಿ ರೂಪಿಸಿ ಉತ್ತಮ ಕಾರ್ಯಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಇಂತಹ ಮಹನೀಯರನ್ನು ನೆನೆದು ಉತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ದಸರಾ ಆಚರಣೆಯನ್ನು ವೈಭವಯುತವಾಗಿ ನಡೆಸಬೇಕು ಎಂದು ಸಲಹೆ ನೀಡಿದರು. ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕಾರ್ಯಾಧ್ಯಕ್ಷ ಕುಲ್ಲಚಂಡ ಬೋಪಣ್ಣ ದಸರಾ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಡಾ| ಚಂದ್ರಶೇಖರ್, ಡಾ| ಶಿವಪ್ಪ ಮತ್ತು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾವೇರಿ ದಸರಾ ಆಚರಣೆಯ ಸ್ಥಾಪಕ ಸದಸ್ಯ ಕೆ.ಆರ್. ಬಾಲಕೃಷ್ಣ ರೈ ದಸರಾ ಮತ್ತು ದೇವಿ ಆರಾಧನೆಯ ಬಗ್ಗೆ ತಿಳಿಸಿದರು. ಕಾವೇರಿ ದಸರಾ ಸಮಿತಿ ಅಧ್ಯಕ್ಷರಾದ ಬಿ.ಡಿ. ಮುಕುಂದ, ಕುಲ್ಲಚಂಡ ಪ್ರಮೋದ್ ಗಣಪತಿ, ಸ್ಥಾಪಕ ಕೆ.ಆರ್. ರಾಮಾಚಾರ್, ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ ಉಪಸ್ಥಿತರಿದ್ದರು.