ಮಡಿಕೇರಿ: ಹಳೆಯ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಒಬ್ಬರು ತೀವ್ರವಾಗಿ ಗಾಯಗೊಂಡು ಅದೃಷ್ಟವಶಾತ್ ಐವರು ಅಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಮಧ್ಯಾಹ್ನ 2 ಗಂಟೆ ವೇಳೆಗೆ ಮುಖ್ಯ ರಸ್ತೆಯಲ್ಲಿದ್ದ ಕಟ್ಟಡ ನೆಲಸಮಗೊಂಡಿದ್ದು, ಐವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ದೇವರಪುರ ಗ್ರಾಮದ ಮಧು ಪಿ.ಕೆ ಎಂಬುವವರನ್ನು ಆಸ್ಪತೆಗೆ ದಾಖಲಿಸಲಾಗಿದೆ.
ಸುಮಾರು 72 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿ ಅಂಬೂರ್ ದಮ್ ಬಿರಿಯಾನಿ ಹೊಟೇಲ್ ಮತ್ತು ಮಟನ್ ಅಂಗಡಿ ಕಾರ್ಯ ನಿರ್ವಹಿಸುತ್ತಿತ್ತು.
ಕಟ್ಟಡ ಕುಸಿಯುವಾಗ ಉಂಟಾದ ಶಬ್ಧಕ್ಕೆ ಹೊಟೇಲ್ ನಡೆಸುತ್ತಿದ್ದ ತಿರುಮುರುಗನ್, ಅವರ ಕುಟುಂಬದವರು ಹಾಗೂ ಗ್ರಾಹಕರು ಹೊರಗೆ ಓಡಿ ಬಂದಿದ್ದಾರೆ. ಗ್ರಾಹಕರೊಬ್ಬರು ಸಿಕ್ಕಿ ಹಾಕಿಕೊಂಡಿರುವುದಾಗಿ ಮಾಹಿತಿ ಇದ್ದ ಹಿನ್ನೆಲೆ ಗೋಣಿಕೊಪ್ಪ ಅಗ್ನಿಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಗ್ರಾಹಕ ಮಧು ಪಿ.ಕೆ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ತಿರುಮುರುಗನ್ (60), ಪತ್ನಿ ಅಲಮೇಲು (46), ಪುತ್ರ ನಾರಾಯಣ (24), ಸಪ್ಲೆಯರ್ ಮಹಾಲಿಂಗA (25) ಹಾಗೂ ಗ್ರಾಹಕ ನಾಗರಹೊಳೆ ಹಾಡಿಯ ತಿಮ್ಮ (45) ಪ್ರಾಣಾಪಾಯದಿಂದ ಪಾರಾದವರಾಗಿದ್ದಾರೆ. ಸಮೀರ್ ಎಂಬುವವರು ನಡೆಸುತ್ತಿದ್ದ ಮಾಂಸದAಗಡಿಯಲ್ಲಿದ್ದ ಇಬ್ಬರು ಕೂಡ ಜೀವ ಉಳಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಡಿಕೇರಿಯಿಂದ ಎನ್.ಡಿ.ಆರ್.ಎಫ್ ರಕ್ಷಣ ತಂಡ ಭೇಟಿ ನೀಡಿ ಹೆಚ್ಚಿನ ಕಾರ್ಯಾಚರಣೆ ನಡೆಸಿ ಕಟ್ಟಡದ ಅವಶೇಷಗಳಡಿ ಪರಿಶೀಲನೆ ನಡೆಸಿ ಯಾವುದೇ ಜೀವಹಾನಿ ಸಂಭವಿಸಿರುವುದಿಲ್ಲ ಎಂದು ಖಾತ್ರಿ ಪಡಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಗೋಣಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು, ಗ್ರಾ.ಪಂ ಪ್ರತಿನಿಧಿಗಳು, ಅಧಿಕಾರಿಗಳು, ಎನ್‌ಡಿಆರ್‌ಎಫ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.