Advertisement

ಗಂಡೋರಿ ನಾಲಾ ನೀರು ಬೆಳೆಗೆ ಹರಿಸಲು ಒತ್ತಾಯ

11:32 AM Dec 01, 2018 | |

ಕಲಬುರಗಿ: ಗಂಡೋರಿ ನಾಲಾ ನೀರನ್ನು ರೈತರ ಹೊಲಗಳಿಗೆ ಈಗಾಗಲೇ ಬಿಟ್ಟಿದ್ದು, ಬಿಡುಗಡೆ ಮಾಡಲಾದ ನೀರು ಕೆಲ ಗ್ರಾಮಗಳ ರೈತರಿಗೆ ತಲುಪುತ್ತಿಲ್ಲ, ಕೂಡಲೇ ಎಲ್ಲ ರೈತರ ಜಮೀನುಗಳಿಗೆ ಗಂಡೋರಿ ನಾಲೆ ನೀರು ಹರಿಸುವ ಮೂಲಕ ರೈತರ ಬೆಳೆಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಕರ್ನಾಟಕ ನೀರಾವರಿ ನಿಗಮದ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಈಗಾಗಲೇ ಮಳೆ ಕೊರತೆಯಿಂದ ಬರಗಾಲದ ಛಾಯೆ ಎದುರಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೇಳುವವರು, ಕೇಳುವವರಿಲ್ಲದಂತಾಗಿದೆ. ಮಳೆಯಿಲ್ಲದ ಕಾರಣ ಈಗಾಗಲೇ ತೊಗರಿ ಬೆಳೆ ಹಾನಿಯಾಗಿ ನಷ್ಟ ಅನುಭವಿಸುತ್ತಿದ್ದಾರೆ.

ಗಂಡೋರಿ ನಾಲಾದ ನೀರು ಕೆಲ ಜಮೀನುಗಳಿಗೆ ಬರುತ್ತಿದ್ದು, ಇನ್ನು ಕೆಲವರಿಗೆ ನೀರು ಮುಟ್ಟುತ್ತಿಲ್ಲ. ಇದು ಒಂದು ಕಣ್ಣಿಗೆ ಸುಣ್ಣ , ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಕಾಲುವೆ ಮೂಲಕ ನೀರು ಹರಿಯುತ್ತಿದ್ದರೂ ಕೆಲ ಗ್ರಾಮಗಳ ಜಮೀನಿಗೆ
ತಲುಪುತ್ತಿಲ್ಲ.ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ನಾಲೆಯ ಮೂಲಕ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ತಡೆದು ರೈತರ ಜಮೀನಿಗೆ ಮುಟ್ಟಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಂದಗೋಳ, ಅರಣಕಲ್‌, ರೇವಗ್ಗಿ, ರಟಕಲ್‌ ಭಾಗಗಳ ರೈತರಿಗೆ ಗಂಡೋರಿ ನಾಲೆಯ ನೀರು ತಲುಪುತ್ತಿಲ್ಲ. ಕೂಡಲೇ ನೀರು ಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುವುದು ಎಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ದ ಬಡಾ, ರೇವಣಸಿದ್ದ ಅರಣಕಲ್‌, ಸಂಜು ಗೌಡರ್‌, ರಾಘವೇಂದ್ರ ಜಿ
ಹಾಗೂ ಇತರರು ಪಾಲ್ಗೊಂಡಿದ್ದರು.

ಕಾಲುವೆ ನೀರು ಸ್ಥಗಿತ
 ಕಲಬುರಗಿ: ಗಂಡೋರಿನಾಲಾ ಜಲಾಶಯದಲ್ಲಿ ಸದ್ಯಕ್ಕೆ 1.320 ಟಿಎಂಸಿ ಅಡಿ ನೀರು ಲಭ್ಯವಿದೆ. ಈ ನೀರನ್ನು ಬೇಸಿಗೆ ವರೆಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲದೇ ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಅನಿವಾರ್ಯವಾಗಿ ಕಾಲುವೆ ನೀರನ್ನು ಡಿ. 1 ರಿಂದ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಐಪಿಸಿ ವಿಭಾಗ ನಂ. 1ರ ಕಾರ್ಯಪಾಲಕ ಇಂಜಿನಿಯರ್‌ ತಿಳಿಸಿದ್ದಾರೆ.

Advertisement

ಪ್ರಸಕ್ತ ವರ್ಷ ಮಳೆ ಅಭಾವ ಇರುವುದರಿಂದ ಬೆಳೆ ಬೆಳೆಯಲು ಹಾಗೂ ದನಕರುಗಳಿಗೆ ನೀರಿನ ಅವಶ್ಯಕತೆಯಿದೆ. ಕಲಬುರಗಿ (ಗ್ರಾಮೀಣ) ಶಾಸಕ ಬಸವರಾಜ ಮತ್ತಿಮಡು ಅವರ ಕೋರಿಕೆ ಹಾಗೂ ರೈತರ ಬೇಡಿಕೆ ಮೇರೆಗೆ ಗಂಡೋರಿನಾಲಾ ಯೋಜನೆಯಿಂದ 2018ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆ ಜಾಲದಲ್ಲಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ ಸ್ಥಗಿತಗೊಳಿಸಿ ಮೇಲಾಧಿಕಾರಿಗಳ ಪರವಾನಗಿ ಪಡೆದು ನ. 7 ರಿಂದ ಕಾಲುವೆಯಲ್ಲಿ ನೀರು ಬಿಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next