Advertisement

ಗೊಂದಿಹಳ್ಳಿಯ ಶ್ರೀಆಂಜನೇಯ

03:25 AM Nov 03, 2018 | |

ಕಾರ್ಯನಿಮಿತ್ತ ಲೇಪಾಕ್ಷಿಗೆ ತೆರಳುವಾಗೊಮ್ಮೆ, ವ್ಯಾಸರು ಗೊಂದಿಹಳ್ಳಿಯಲ್ಲಿ ತಂಗಿದ್ದರಂತೆ. ಅಂದು ರಾತ್ರಿ ರಾಯರ ಕನಸಿಗೆ ಬಂದ ಆಂಜನೇಯ-“ಇದು ನಾನಿರುವ ಜಾಗ’ ಎಂದನಂತೆ ! ಗೊಂದಿಹಳ್ಳಿಯ ಆಂಜನೇಯನನ್ನು ಕುರಿತಂತೆ ಇರುವ ಕಥೆ ಇದು. 

Advertisement

ನಮ್ಮಲ್ಲಿ ಹಲವು ಹನುಮನ ದೇಗುಲಗಳು, ಐತಿಹಾಸಿಕ, ಪೌರಾಣಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ನಿರ್ಮಾಣವಾಗಿವೆ.  ದೇವತಾ ಶಕ್ತಿಯ ಕಾರಣಗಳಿಂದ ಹಲವು ಕ್ಷೇತ್ರಗಳು ಹಲವು ಕಾರಣಗಳಿಂದ ಪ್ರಸಿದ್ಧವಾಗಿದೆ. ಇಂಥ ಸ್ಥಳಗಳ ಪೈಕಿ ಶ್ರೀವ್ಯಾಸರಾಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರಗಳಲ್ಲಿ ಗೊಂದಿಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯವು ಒಂದು. 

 ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರುವರ ಹೋಬಳಿಯ ಗೊಂದಿಹಳ್ಳಿಯಲ್ಲಿ ಈ ದೇವಾಲಯವಿದೆ. 
 ದೇವರ ವಿಗ್ರಹ 5.5 ಅಡಿ ಎತ್ತರ ಮತ್ತು 5 ಅಡಿ ಅಗಲವಿದೆ. ದೇವಾಲಯವು ದಕ್ಷಿಣಾಭಿಮುಖವಾಗಿದ್ದು ದೇವರ ಮುಖ ಪೂರ್ವಕ್ಕೆ ಇದೆ. ಇದು ಅಭಯಪ್ರದ ಆಂಜನೇಯ ದೇವರು. ಈ ಕಾರಣದಿಂದ ಭಕ್ತರನ್ನು ಸದಾ ಪೊರೆಯುವ ಕ್ಷೇತ್ರವೆಂದು ಪ್ರಸಿದ್ಧವಾಗಿದೆ.  ದೇವರ ವಿಗ್ರಹದ ಬಾಲದಲ್ಲಿ ಗಂಟೆಯ ರಚನೆಯಿದ್ದು, ಇದು ವ್ಯಾಸರಾಯ ಪ್ರತಿಷ್ಠಾಪಿತ ವಿಗ್ರಹವೆಂದು ದೃಢವಾಗಿದೆ. 

ಈ ಕ್ಷೇತ್ರ ಅತಿ ಪ್ರಾಚೀನವಾಗಿದ್ದು ರಾಮಾಯಣದ ಘಟನೆಗಳ ಕಥೆಯೂ ಇದರಲ್ಲಿ ಬೆರೆತಿದೆ. ಇಲ್ಲಿನ ಬಂಡೆಗಲ್ಲಿನಲ್ಲಿ ಆಂಜನೇಯನ ಪಾದದ ಚಿತ್ರವಿತ್ತು. ವ್ಯಾಸರಾಯರು ಈ ಮಾರ್ಗವಾಗಿ ಲೇಪಾಕ್ಷಿಗೆ ತೆರಳುವಾಗ ಗೊಂದಿಹಳ್ಳಿಯಲ್ಲಿ ತಂಗಿದ್ದರಂತೆ. ಆ ದಿನ ರಾತ್ರಿ ಕನಸಿನಲ್ಲಿ ಆಂಜನೇಯ ಕಾಣಿಸಿಕೊಂಡು, ಇಲ್ಲಿ ತನ್ನ ಸಾನಿಧ್ಯ ಸದಾ ಇರುವುದಾಗಿ ತಿಳಿಸಿದನಂತೆ. ಈ ಹಿನ್ನೆಲೆಯಲ್ಲಿ ವ್ಯಾಸರಾಯರು ಈ ಸ್ಥಳದಲ್ಲಿ ದೇವರ ಪ್ರತಿಷ್ಠಾಪನಾಕಾರ್ಯ ನಡೆಸಿದರಂತೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು. ಆಗ ಇಲಾಖೆಯ ಅನುಮತಿ ಪಡೆದು ಗ್ರಾಮಸ್ಥರೆಲ್ಲ ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡರು. ಜೀರ್ಣೋದ್ಧಾರದ ಕೆಲಸ ಆರಂಭಿಸಿದಾಗ, ಹಳೆ  ಕಂಬವೊಂದರಲ್ಲಿ ಈ ದೇವಾಲಯ ಕ್ರಿ.ಶ.1465 ರಲ್ಲಿ ಪುನರ್‌ ಪ್ರತಿಷ್ಠಾಪನೆಗೊಂಡ ಉಲ್ಲೇಖ ದೊರೆತಿತ್ತು.  ದೇವಾಲಯವನ್ನು ಈಗಿನ ಸ್ವರೂಪಕ್ಕೆ ಅಣಿಗೊಳಿಸಿ 1999 ರಲ್ಲಿ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಯಿತು. 

ದೇವಾಲಯದ ಬಲಭಾಗದಲ್ಲಿ, ಏಕ ಶಿಲೆಯಿಂದ ಕೆತ್ತಲ್ಪಟ್ಟ 30 ಅಡಿ ಎತ್ತರ, 13 ಅಡಿ ಅಗಲ, 5 ಅಡಿ ದಪ್ಪದ ನಿಂತ ಭಂಗಿಯಲ್ಲಿರುವ ಆಂಜನೇಯ ವಿಗ್ರಹವಿದೆ. ಬೆಂಗಳೂರಿನ ದೇವನಹಳ್ಳಿಯಿಂದ ಕಲ್ಲನ್ನು ತಂದು ವಿಗ್ರಹ ಇಲ್ಲಿ ಕೆತ್ತಿಸಲಾಗಿದೆ. ಒಟ್ಟು ಸುಮಾರು 90 ಲಕ್ಷ ವೆಚ್ಚದಲ್ಲಿ ಈ ವಿಗ್ರಹ 
ಪ್ರತಿಷ್ಠಾಪನೆ ನಡೆದಿದೆ. ವಿಗ್ರಹ ಪ್ರತಿಷ್ಠಾಪನೆಗಾಗಿ 21 ಅಡಿ ಉದ್ದ, 16 ಅಡಿ ಅಗಲದ ತಳಪಾಯ ನಿರ್ಮಿಸಲಾಗಿದೆ. ಇದಕ್ಕಾಗಿ 650 ಚೀಲ ಸಿಮೆಂಟ್‌, 30ಲೋಡ್‌ ಮರಳು, 30 ಲೋಡ್‌ ಜಲ್ಲಿ ಹಾಗೂ 6.5 ಟನ್‌ ಕಬ್ಬಿಣ ಬಳಸಲಾಗಿದೆ. ದೇವರ ವಿಗ್ರಹದ ತಳಪಾಯದಲ್ಲಿ 150 ಮೂಟೆ(ತಲಾ 50 ಕಿ.ಗ್ರಾಂ.ತೂಕದ ಮೂಟೆ) ಸಕ್ಕರೆ ಹಾಕಿ ಮೇಲ್ಭಾಗದಲ್ಲಿ ಕಾಂಕ್ರಿಟ್‌ ಅಳವಡಿಸಲಾಗಿದೆ. 

Advertisement

ಇಲ್ಲಿ ಪ್ರತಿ ಶನಿವಾರ ದೇವರಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ಹಾಗೂ ಕಾರಣಿಕ ನಡೆಯುತ್ತದೆ.  ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಿಂದ ಹುಣ್ಣಿಮೆಯ ವರೆಗೆ 10 ದಿನ ಕಾಲ ಜಾತ್ರೋತ್ಸವ ನಡೆಯುತ್ತದೆ.   ಸಂತಾನಪ್ರಾಪ್ತಿ, ಉದ್ಯೋಗ, ವ್ಯಾಪಾರ, ಕೌಟುಂಬಿಕ ಶಾಂತಿ, ಶತ್ರುಭಯ ನಿವಾರಣೆಗೆಲ್ಲಾ ಭಕ್ತಾದಿಗಳು ದೇವರ ಮೊರೆ ಹೋಗುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next