Advertisement

CM ಗೊಂಡ, ಕುರುಬ ಜಾತಿ ಪ್ರಮಾಣ ಪತ್ರ ಗೊಂದಲ: ಸೂಕ್ತ ಕ್ರಮಕ್ಕೆ ಸಿಎಂ ಸೂಚನೆ

11:34 PM Aug 25, 2023 | |
ಬೆಂಗಳೂರು: ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಹಾಗೂ ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಂಬಂಧ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಸುದೀರ್ಘ‌ ಸಭೆ ನಡೆಯಿತು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ) ಸೆಲ್‌ ಇರುವುದು ಹಕ್ಕುಗಳ ರಕ್ಷಣೆಗಾಗಿ ಹಾಗೂ ಪ್ರಕರಣಗಳ ವಿಚಾರಣೆಗಾಗಿ. ಈ ಘಟಕ ವಿಚಾರಣೆ ಮಾಡಿ ನೀಡಿದ ವರದಿಯನ್ನು ಅಂಗೀಕರಿಸಬೇಕು. ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಎನ್ನುವ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಶಾಲಾ ದಾಖಲೆ, ಪೋಷಕರ ವಂಶವೃಕ್ಷ ಪರಿಶೀಲಿಸಿ ಪ್ರಮಾಣ ಪತ್ರ ನೀಡಬಹುದು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಪ್ರಮಾಣಪತ್ರ ನೀಡಲು ವಿಳಂಬ ಮಾಡಬಾರದು. ದೂರುಗಳಿದ್ದರೆ ತನಿಖೆ ಮಾಡಿಸಬೇಕು. ಇಲ್ಲದೆ ಹೋದರೆ ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ಕೈಗೊಳ್ಳುವಂತಿಲ್ಲ. ಸಿಆರ್‌ಇ ಸೆಲ್‌ನವರು ತನಿಖೆ ಮಾಡಿದ ವರದಿ ನೀಡಿದ ಕೂಡಲೇ ಅಂಗೀಕರಿಸಿ, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.
ಕೊಡಗು ಜಿಲ್ಲೆ ಯ ಕುರುಬ ಸಮುದಾಯದವರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ. ಅನಗತ್ಯವಾಗಿ ವಿಳಂಬ ಮಾಡದೆ ತ್ವರಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು. ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿವೇತನಗಳನ್ನು ನೀಡಬಹುದು ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನಸೇವಾ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, 4 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್‌ ಪಿ. ಮಣಿವಣ್ಣನ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇ ಶ್‌, ಗೊಂಡ ಹಾಗೂ ಕುರುಬ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next