Advertisement

ನಗರದಲ್ಲಿ ಮುಂದಿನ ವಾರ ನಡೆಯಲಿದೆ ಬೃಹತ್‌ ಗೋಮಂಡಲ

08:20 PM Nov 27, 2019 | mahesh |

ಮಹಾನಗರ: ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಅಂತಹ ಗೋಮಾತೆಯ ಪೂಜೆಗಾಗಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೃಹತ್‌ ಗೋಮಂಡಲವೇ ರಚನೆಯಾಗಲಿದೆ!

Advertisement

ಪಜೀರು ಬೀಜಗುರಿ ಗೋವನಿತಾಶ್ರಯ ಟ್ರಸ್ಟ್‌ನ ಸಾರ್ಥಕ ಗೋಸೇವೆಗೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್‌ ಗೋಮಂಡಲ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಡಿ. 7 ಮತ್ತು 8ರಂದು ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದೆ. ಟ್ರಸ್ಟ್‌ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಕಪಿಲಾ, ಅಮೃತಾ, ಗಂಗಾ ಮತ್ತು ಗೌರಿ ಹಟ್ಟಿಗಳಲ್ಲಿರುವ 300ಕ್ಕೂ ಹೆಚ್ಚು ಗೋವುಗಳ ಪೈಕಿ 100 ಗೋವುಗಳನ್ನು ಕರೆ ತಂದು ಈ ಗೋಮಂಡಲದ ಸುತ್ತ ಕಟ್ಟಿ ಪೂಜಿಸುವುದರೊಂದಿಗೆ ಸಾರ್ವಜನಿಕರಿಗೆ ಗೋವಿನ ಮಹತ್ವ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ.

72,900 ಚ. ಅಡಿ ಅಗಲದ ಗೋಮಂಡಲ
ವಿಶೇಷವೆಂದರೆ, ಕೇಂದ್ರ ಮೈದಾನದ ಮೇಲಿನ ಗ್ರೌಂಡ್‌ನ‌ಲ್ಲಿ 72,900 ಚದರ ಅಡಿ ಜಾಗದಲ್ಲಿ ಗೋಮಂಡಲ ನಿರ್ಮಿಸಲಾಗುತ್ತದೆ. ಈ ಗೋಮಂಡಲದ ಸುತ್ತಲೂ ವೃತ್ತಾಕಾರದಲ್ಲಿ ದನ ಕರುಗಳನ್ನು ಕಟ್ಟಿ ಹಾಕಲಾಗುತ್ತದೆ. ಕಟ್ಟಿದ ಎಲ್ಲ ಗೋವುಗಳಿಗೆ ವಿಶೇಷ ಗೋಪೂಜೆ ನೆರವೇರಿಸಲಾಗುತ್ತದೆ. ಗೋ ಆರತಿ, ಗೋಧೂಳಿ ಲಗ್ನದ ಪ್ರಾತ್ಯಕ್ಷಿಕೆ ಇರಲಿದೆ. ಗೋವುಗಳಿಗೆ ಗೋಪೂಜೆ ನೆರವೇರಿಸಲು ಸಾರ್ವಜನಿಕರಿಗೂ ಅವಕಾಶವಿದೆ.

ರಥದಲ್ಲಿ 4 ಅಡಿ ಎತ್ತರದ ಗೋಪಾಲಕೃಷ್ಣ
ಕಾರ್ಯಕ್ರಮದ ಹಿನ್ನೆಲೆಯಲ್ಲಿ 4 ಅಡಿ ಉದ್ದದ ಗೋಪಾಲಕೃಷ್ಣನ ಮೂರ್ತಿಯನ್ನೊಳಗೊಂಡ ರಥವನ್ನು ಪ್ರತಿಷ್ಠಾಪಿಸಿ ನೂರಾರು ಗೋವುಗಳ ಮಧ್ಯೆ ಎರಡು ದಿನಗಳಲ್ಲಿ ಮೂರು ಹೊತ್ತು ಪೂಜೆ ನೆರವೇರಿಸಲಾಗುತ್ತದೆ. ಸೌತಡ್ಕ ಗಣಪತಿ ದೇವರ ಮಾದರಿಯಲ್ಲಿರುವ ಗಣಪತಿ ಮೂರ್ತಿ ಹಾಗೂ ಅಪರೂಪದ ಬಸವರೂಪಿ ಹಾವೇರಿಯ ಶ್ರೀ ಮೂಕಪ್ಪ ಸ್ವಾಮಿಯ ದರ್ಶನ ಭಾಗ್ಯವೂ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತುಳುನಾಡಿನ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಕಂಬಳದ ಕೋಣವನ್ನು ನೋಡುವ ಅವಕಾಶವೂ ಇದೆ ಎಂದು ಟ್ರಸ್ಟ್‌ನ ಸಿಬಂದಿ ತಿಳಿಸಿದ್ದಾರೆ.

6 ಅಡಿ ಉದ್ದದ ನಂದಿ ಆಕರ್ಷಣೆ
ಗೋಮಂಡಲದಲ್ಲಿ 5 ಅಡಿ ಉದ್ದದ ಶಿವಲಿಂಗ ಪ್ರತಿಷ್ಠಾಪಿಸಿ, ಅದರ ಪಕ್ಕದಲ್ಲಿ 8 ವರ್ಷದ ನಂದಿಯನ್ನು (ಹೋರಿ) ನಿಲ್ಲಿಸಿ ಅದಕ್ಕೂ ಪೂಜೆ ಸಲ್ಲಿಸುವ ಕೈಂಕರ್ಯ ನಡೆಯಲಿದೆ. ಟ್ರಸ್ಟ್‌ ಹಟ್ಟಿಯಲ್ಲಿರುವ ಸುಮಾರು 6 ಅಡಿ ಎತ್ತರದ ಬೃಹತ್‌ ಹೋರಿಯೇ ನಂದಿಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಅಯೋಧ್ಯೆಯ ರಾಮ ಮಂದಿರದ ಮಾದರಿಯೂ ಇರಲಿದೆ.

Advertisement

ದನ ಕರುಗಳ ಮಧ್ಯೆ ಸೆಲ್ಫಿ!
ವಿಶೇಷವೆಂದರೆ, ಗೋಮಂಡಲ ನೋಡಲು ಆಗಮಿಸಿದ ಸಾರ್ವಜನಿಕರಿಗೆ ದನ ಕರುಗಳ ಮಧ್ಯೆ ಸೆಲ್ಫಿ ತೆಗೆಯಲು ಅವಕಾಶವಿದ್ದು, ಇದಕ್ಕಾಗಿ ಪ್ರತ್ಯೇಕ ಸೆಲ್ಫಿ ಕಾರ್ನರ್‌ ರಚಿಸುವ ಉದ್ದೇಶ ಟ್ರಸ್ಟ್‌ ಮುಂದಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ ವೇದಿಕೆ ಮೇಲೆ ದನಕರುಗಳ ಮಧ್ಯೆಯೇ ಶ್ರೀ ಕೃಷ್ಣ ವೇಷ ಹಾಕಿ ಸಂಭ್ರಮಿಸಲು ಕೃಷ್ಣ ವೇಷ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಸಾಂಸ್ಕೃತಿಕ ಸಂಭ್ರಮ ಹಾಗೂ ಭಜನೆ ನಡೆಯಲಿದೆ.

ಗೋವಿನ ಮಹತ್ವ ತಿಳಿಸುವ ಉದ್ದೇಶ
ಪರಿಸರ ಸಂರಕ್ಷಣೆಯೊಂದಿಗೆ ಗೋ ಸಂರಕ್ಷಣೆಯ ಅಗತ್ಯ. ಪಶು ಸಂಗೋಪನೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಬೃಹತ್‌ ಗೋಮಂಡಲ ಆಯೋಜಿಸಲಾಗಿದೆ. ದನ ಕರುಗಳನ್ನೇ ನೋಡದ ಎಳೆಯ ಮಕ್ಕಳಿಗೆ ದನಕರುಗಳನ್ನು ತೋರಿಸುವ ಆಶಯ ನಮ್ಮದು. ಈ ಹಿಂದೆ 2012ರಲ್ಲಿ ಸಣ್ಣ ಮಟ್ಟದಲ್ಲಿ ಗೋಮಂಡಲ ನಡೆಸಲಾಗಿತ್ತು.
 - ಪಿ. ಅನಂತಕೃಷ್ಣ ಭಟ್‌,ಕಾರ್ಯದರ್ಶಿ, ಗೋವನಿತಾಶ್ರಯ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next