Advertisement

ಪೌಷ್ಟಿಕ ಆಹಾರ ಪೂರೈಕೆಯಲ್ಲಿ ಗೋಲ್ ಮಾಲ್

12:09 PM May 13, 2019 | Naveen |

ಮಾನ್ವಿ: ತಾಲೂಕಿನಾದ್ಯಂತ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಜೊತೆಗೆ ತೂಕದಲ್ಲಿ ವಂಚಿಸಲಾಗುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

ತಾಲೂಕಿನಾದ್ಯಂತ ಒಟ್ಟು 250 ಅಂಗನವಾಡಿಗಳಿವೆ. ಪಟ್ಟಣದಲ್ಲಿ 40 ಅಂಗನವಾಡಿಗಳಿವೆ. ಈ ಎಲ್ಲ ಅಂಗನವಾಡಿಗಳಿಗೆ ಹರವಿ ಗ್ರಾಮದಲ್ಲಿರುವ ಸರ್ಕಾರದಿಂದ ಮಾನ್ಯತೆ ಪಡೆದ ಮಹಿಳಾ ಪೂರಕ ಪೌಷ್ಟಿಕ, ಆಹಾರ ತರಬೇತಿ ಹಾಗೂ ತಯಾರಿಕೆ ಕೇಂದ್ರದಿಂದ ಪೌಷ್ಟಿಕ ಆಹಾರ ಪೂರೈಕೆ ಆಗುತ್ತದೆ.

ಕಳಪೆ-ಕಡಿಮೆ ತೂಕ: ಅಂಗನವಾಡಿಗೆ ಸರಬರಾಜು ಆಗುವ ಪೌಷ್ಟಿಕ ಆಹಾರ ಪದಾರ್ಥಗಳು ತುಂಬಾ ಕಳಪೆ ಗುಣಮಟ್ಟದಿಂದ ಕೂಡಿವೆ. ತೊಗರಿಬೇಳೆ, ಹೆಸರು, ಶೇಂಗಾ ಅತ್ಯಂತ ಕಳಪೆ ಗುಣಮಟ್ಟದ್ದಾಗಿವೆ. ಅಲ್ಲದೇ ಇವುಗಳನ್ನು ನಿಗದಿತ ತೂಕದ ಪ್ರಮಾಣದಲ್ಲಿ ಪೂರೈಸದೇ ಕಡಿಮೆ ತೂಕದಲ್ಲಿ ಒದಗಿಸಲಾಗುತ್ತಿದೆ. 2ಕೆಜಿ ತೊಗರಿಬೇಳೆ ಪಾಕೆಟ್ ಎಂದು ಹೇಳಿ 1ಕೆಜಿ ಪಾಕೆಟ್ ನೀಡಿದ್ದಾರೆ. 25 ಕೆಜಿ ಅಕ್ಕಿ ಪಾಕೆಟ್‌ನ ತೂಕ 24 ಕೆಜಿ 200 ಗ್ರಾಮ್‌ ಇರುತ್ತವೆ. ಪ್ರತಿ ಅಂನಗವಾಡಿಗೆ 22 ಕೆಜಿ ಬೆಲ್ಲ ನೀಡಬೇಕಾಗಿದ್ದು, 15ರಿಂದ 18ಕೆಜಿ ಬೆಲ್ಲ ನೀಡುತ್ತಾರೆ. ಈ ರೀತಿಯಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿಯೂ ತೂಕದ ವ್ಯತ್ಯಾಸ ಇರುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಇನ್ನು ಎಲ್ಲ ಅಂಗನವಾಡಿಗೆ ಸಮಾನವಾಗಿ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಅಂಗನವಾಡಿಗಳಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿಗಳಿಂದ ಪೌಷ್ಟಿಕ ಆಹಾರದ ಬೇಡಿಕೆ ಸಲ್ಲಿಸಲಾಗುತ್ತದೆ. ಆದರೆ ಎಷ್ಟೇ ಜನ ಇದ್ದರೂ ಎಲ್ಲ ಅಂಗನವಾಡಿಗಳಿಗೆ ಸಮಾನವಾಗಿ ಪೌಷ್ಟಿಕ ಆಹಾರ ಒದಗಿಸುತ್ತಾರೆ. ಇದರಿಂದ ಪದಾರ್ಥಗಳ ಕೊರೆತಯಾಗುತ್ತದೆ. ಆದರೆ ಸಹಿ ಪಡೆಯುವಾಗ ಎಲ್ಲಾ ಸರಿ ಇದೆ ಎಂಬಂತೆ ಅಂನಗವಾಡಿ ಶಿಕ್ಷಕಿಯರಿಂದ ಸಹಿ ಪಡೆದುಕೊಳ್ಳುತ್ತಾರೆ ಎನ್ನುತ್ತಾರೆ ಹೆಸರೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯರು.

ನಿರ್ಲಕ್ಷ್ಯ: ಅಂಗನವಾಡಿಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ತೀವ್ರ ಕಳಪೆಯಾಗಿರುವ ಕುರಿತು ಕಾರ್ಯಕರ್ತೆಯರು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆಹಾರ ಸರಬರಾಜು ಆದ ನಂತರ ಅಂಗನವಾಡಿಗಳಿಗೆ ಆಗಮಿಸಿ ಪರಿಶೀಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದರೆ. ಕಡಿಮೆ ಮತ್ತು ಕಳಪೆ ಗುಣಮಟ್ಟದ ಆಹಾರ ಸರಬರಾಜುದಾರರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾರ್ಯಕರ್ತೆಯರು ದೂರಿದ್ದಾರೆ.

Advertisement

ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಹೆರಿಗೆ ಸಮಯದಲ್ಲಿ ಗರ್ಭಿಣಿಯರು ಮತ್ತು ಶಿಶುಗಳು ಸಾವನ್ನಪ್ಪುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ಕೋಟ್ಯಂತರ ರೂ. ವ್ಯಯಿಸಿ ಅಂಗನವಾಡಿಗಳ ಮೂಲಕ ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ.

ಸ್ವಂತ ಕಟ್ಟಡಗಳಿಲ್ಲ
ಮಾನ್ವಿ ತಾಲೂಕಿನಲ್ಲಿ 250 ಅಂಗನವಾಡಿಗಳಿದ್ದು, ಇದರಲ್ಲಿ ಕೆಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಕೆಲವೆಡೆ ಸೌಕರ್ಯಗಳ ಕೊರತೆ ಇದೆ. ಈ ಖಾಸಗಿ ಕಟ್ಟಡಗಳಿಗೆ ನಿರಂತರವಾಗಿ ಪ್ರತಿ ತಿಂಗಳ ಬಾಡಿಗೆ ಪಾವತಿಸುವುದಿಲ್ಲ. ಮೊಟ್ಟೆ ಬಿಲ್ ಸಹ ಪ್ರತಿ ತಿಂಗಳು ಪಾವತಿಯಾಗುವುದಿಲ್ಲ. ಅಂಗನವಾಡಿ ಶಿಕ್ಷಕಿಯರೇ ಮೊಟ್ಟೆ ಬಿಲ್ ಮತ್ತು ಬಾಡಿಗೆಗೆ ಸ್ವಂತ ಹಣ ನೀಡುತ್ತಿದ್ದೇವೆ. ಅಧಿಕಾರಿಗಳು ಪ್ರತಿ ತಿಂಗಳು ಬಾಡಿಗೆ ಮತ್ತು ಮೊಟ್ಟೆ ಬಿಲ್ ಪಾವತಿಸಬೇಕು ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.
ಅಂಗನವಾಡಿಗಳಿಗೆ ಕಳಪೆ ಮತ್ತು ಕಡಿಮೆ ತೂಕದ ಆಹಾರ ಪದಾರ್ಥಗಳು ಸರಬರಾಜು ಆಗುತ್ತಿರುವ ಬಗ್ಗೆ ಕಳೆದ ವರ್ಷ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಪದೇ ಪದೇ ಅಧಿಕಾರಿಗಳ ಬದಲಾವಣೆಯಿಂದಾಗಿ ಯಾವುದೇ ಪ್ರಯೋಜನ ಆಗಿಲ್ಲ. ಮತ್ತೂಮ್ಮೆ ಈಗಿನ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು.
ಸಂಗಯ್ಯಸ್ವಾಮಿ ಚಿಂಚರಿಕಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ಎಐಟಿಯುಸಿ. ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ 
ಅಂಗನವಾಡಿಗಳಿಗೆ ಸರಬರಾಜು ಆಗುತ್ತಿರುವ ಆಹಾರ ಪದಾರ್ಥಗಳು ಕಳಪೆ ಮತ್ತು ಕಡಿಮೆ ತೂಕದ ಪ್ರಮಾಣ ಹೊಂದಿರುತ್ತವೆ ಎನ್ನುವುದು ಸುಳ್ಳು ಆರೋಪವಾಗಿದೆ. ಆಗಾಗ ಅಂಗನವಾಡಿಗಳಿಗೆ ಮತ್ತು ಹರವಿ ಗ್ರಾಮದಲ್ಲಿರುವ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಲಿಖೀತ ದೂರು ಬಂದರೆ ಪರಿಶೀಲಿಸಲಾಗುವುದು.
ಸುಭದ್ರಾದೇವಿ,
ತಾಲೂಕು ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ರವಿ ಶರ್ಮಾ
Advertisement

Udayavani is now on Telegram. Click here to join our channel and stay updated with the latest news.

Next