Advertisement

ಗಂಗಾವತಿ ಡಿಪೋದಲ್ಲಿ ಗೋಲ್‌ಮಾಲ್‌

04:40 PM Sep 20, 2018 | Team Udayavani |

ಗಂಗಾವತಿ: ಈಶಾನ್ಯ ಸಾರಿಗೆ ಗಂಗಾವತಿ ಘಟಕದ ಹಣಕಾಸು ವಿಭಾಗದಲ್ಲಿ ವಂಚನೆ ಪ್ರಕರಣ ನಡೆದಿದ್ದು, ಹಲವು ನೌಕರರು ಪಾಲ್ಗೊಂಡಿರುವ ಶಂಕೆಯಿದೆ. ಈಶಾನ್ಯ ಸಾರಿಗೆ ಸಂಸ್ಥೆಯ ವಿಜಿಲೆನ್ಸ್‌ ತಂಡ ಕಳೆದ ಮಂಗಳವಾರದಿಂದ ತನಿಖೆಯನ್ನು ತೀವ್ರಗೊಳಿದ್ದು, ನಿವೃತ್ತರು ಸೇರಿ ಹಾಲಿ ನೌಕರರನ್ನು ತನಿಖೆಗೆ ಒಳಪಡಿಸಲಾಗಿದೆ. ತನಿಖೆ ವೇಳೆ ನಿವೃತ್ತ ನೌಕರನೊಬ್ಬ 3.60 ಲಕ್ಷ ರೂ. ಜಮಾ ಮಾಡಿದ್ದಾರೆ.

Advertisement

ಪ್ರತಿದಿನ ಸಂಗ್ರಹವಾಗುವ ಹಣವನ್ನು ಅಂದೇ ಬ್ಯಾಂಕಿಗೆ ಜಮಾ ಮಾಡಬೇಕು. ಹಣ ಜಮಾ ಮಾಡುವ ವೇಳೆ ದುರುಪಯೋಗ ನಡೆದಿರುವ ಶಂಕೆಯನ್ನು ಮೇಲಧಿಕಾರಿಗಳು ವ್ಯಕ್ತಪಡಿಸಿದ್ದು, 2010ರಿಂದ ಈ ವಂಚನೆ ನಡೆದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇಲ್ಲಿ ನೌಕರಿ ಮಾಡಿದ ಹಲವರು ನಿವೃತ್ತರಾಗಿದ್ದಾರೆ ಇನ್ನೂ ಕೆಲವರು ವರ್ಗಾವಣೆಗೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಲೆಕ್ಕಪತ್ರ ಪರಿಶೋಧನೆ ವೇಳೆಯೂ ವಂಚನೆ ಪ್ರಕರಣ ಬಯಲಾಗದಂತೆ ನೋಡಿಕೊಳ್ಳಲಾಗಿದೆ. ಈಶಾನ್ಯ ಸಾರಿಗೆ ಸಂಸ್ಥೆಯ ಲೆಕ್ಕಪತ್ರ ಪರಿಶೀಲನಾ ವಿಭಾಗ ಪ್ರತಿ ಮೂರು ತಿಂಗಳಿಗೊಮ್ಮೆ ಅನ್ಯ ಡಿಪೋದವರಿಂದ ತಪಾಸಣೆ ಮಾಡಿಸುವ ಪದ್ಧತಿ ಇದ್ದರೂ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಈ ವಂಚನೆ ಪ್ರಕರಣ ಬಯಲಿಗೆ ಬೀಳದಿರುವುದು ವಿಪರ್ಯಾಸ.

ಗಂಗಾವತಿ ಡಿಪೋದಲ್ಲಿ ನಗರ ಗ್ರಾಮೀಣ ಮತ್ತು ಐಷಾರಾಮಿ ಸೇರಿ 130 ಬಸ್‌ಗಳಿಂದ ಪ್ರತಿ ದಿನ ಸುಮಾರು 12-15 ಲಕ್ಷ ರೂ. ಸಂಗ್ರಹವಾಗುತ್ತದೆ. ಸಂಗ್ರಹವಾದ ಹಣವನ್ನು ಪ್ರತಿದಿನ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದು ಕಡ್ಡಾಯ. ಇದಕ್ಕಾಗಿ ಹಣಕಾಸು ವಿಭಾಗ ಪ್ರತೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಜಮಾ ಆಗಿರುವ ಹಣದ ವಿವರನ್ನು ಕೇಂದ್ರ ಕಚೇರಿಗೆ ವರದಿ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಕಟ್ಟುನಿಟ್ಟಿನ ವ್ಯವಸ್ಥೆ ಇದ್ದರೂ ಸುಮಾರು 32 ಲಕ್ಷ ರೂ. ವಂಚನೆ ನಡೆದಿರುವುದು ಕಂಡುಬಂದಿದೆ.

ಗಂಗಾವತಿ ಡಿಪೋದ ಹಣಕಾಸು ವಿಭಾಗದಲ್ಲಿ ಹಣದ ದುರುಪಯೋಗ ಪ್ರಕರಣ ನಡೆದಿರುವುದು ನಿಜ, ಆದರೆ ಎಷ್ಟು ಹಣ ವಂಚನೆ ಮಾಡಲಾಗಿದೆ ಎಂದು ತನಿಖೆ ಪೂರ್ಣಗೊಂಡ ನಂತರ ತಿಳಿಯುತ್ತದೆ. ಕಳೆದ 8 ವರ್ಷಗಳಿಂದ ಜಮಾ-ಖರ್ಚು ಪರಿಶೀಲನೆ ನಡೆಯುತ್ತಿದೆ. ನಿವೃತ್ತ ನೌಕರನೊಬ್ಬ ಸ್ವಯಂ ಪ್ರೇರಿತನಾಗಿ ತಮ್ಮಿಂದ ತಪ್ಪಾಗಿದ್ದನ್ನು ಒಪ್ಪಿಕೊಂಡು 3.60 ಲಕ್ಷ ರೂ. ಜಮಾ ಮಾಡಿದ್ದಾನೆ. ತನಿಖೆ ಮುಂದುವರಿದಿದೆ.
 ನಾರಾಯಣ ಗೌಡಗೇರಿ, ಪ್ರಭಾರಿ
 ಜಿಲ್ಲಾಧಿಕಾರಿ ಈಶಾನ್ಯ ಸಾರಿಗೆ

Advertisement

Udayavani is now on Telegram. Click here to join our channel and stay updated with the latest news.

Next