ನವದೆಹಲಿ: ಕೊರೊನಾ ವೈರಸ್ ಅನ್ನು ಮಣಿಸಲು ಭಾರತೀಯ ಕ್ರೀಡಾಪಟುಗಳು ತಮ್ಮ ಕೈಲಾದ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದಾರೆ. ಹಣ ಕೊಡುವುದು, ಜನರಿಗೆ ಸಂದೇಶ ನೀಡುವುದು, ಬೀದಿಗಿಳಿದು ಸೇವೆ ಮಾಡುವುದು ಎಲ್ಲವನ್ನೂ ಮಾಡುತ್ತಿದ್ದಾರೆ. ಇವೆಲ್ಲ ಶ್ರೀಮಂತ ಆಟಗಾರರ ಮಾತಾಯಿತು. ಆದರೆ ಇನ್ನೂ ಎಳೆಯ, ಕೈಯಲ್ಲಿ ಹಣವಿಲ್ಲದ ಕ್ರೀಡಾಪಟುಗಳು ಏನು ಮಾಡಬಹುದು? ಅದಕ್ಕೆ ಇಲ್ಲೊಂದು ಉತ್ತರವಿದೆ. ಈ ಹೃದಯಸ್ಪರ್ಶಿ ಕಥೆ ನಮ್ಮ ಕಣ್ಣಂಚಲ್ಲಿ ನೀರು ಜಿನುಗಿಸಿ ನಮ್ಮನ್ನು ಭಾವುಕರನ್ನಾಗಿಸದಿದ್ದರೆ ಕೇಳಿ.
ಈಗಿನ್ನೂ 15 ವರ್ಷದ ಬಾಲಕ ಅರ್ಜುನ್ ಭಾಟಿ. ಈತ ಉತ್ತರಪ್ರದೇಶದ ಗ್ರೇಟರ್ ನೋಯ್ಡಾಕ್ಕೆ ಸೇರಿದ್ದಾರೆ. ಈ ಪ್ರದೇಶ ದೆಹಲಿಗೆ ಅಂಟಿಕೊಂಡಿದೆ.ಸದ್ಯ 10ನೇ ವರ್ಷ ಓದುತ್ತಿರುವ ಅರ್ಜುನ್ ಕಳೆದ 8 ವರ್ಷಗಳಿಂದ ಗಾಲ್ಫ್ ಆಡುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 102 ಟ್ರೋಫಿ ಗೆದ್ದಿದ್ದಾರೆ. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಿರುವ ಈ ಹೊತ್ತಿನಲ್ಲಿ ಅದಷ್ಟನ್ನೂ ತಮ್ಮ ಗೆಳೆಯರಿಗೆ, ಸಂಬಂಧಿಕರಿಗೆ, ಪೋಷಕರಿಗೆ ಮಾರಿ ಅದರಿಂದ ಬಂದ 4.30 ಲಕ್ಷ ರೂ. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದ್ದಾರೆ!
ಈತ ಮೂರು ಬಾರಿ ಗಾಲ್ಫ್ ವಿಶ್ವಚಾಂಪಿಯನ್ ಶಿಪ್ ಗೆದ್ದಿದ್ದಾರೆ. ಹಲವು ರಾಷ್ಟ್ರೀಯ ಕೂಟಗಳಲಿ ಚಾಂಪಿಯನ್. ಒಬ್ಬ ಕ್ರೀಡಾಪಟುವಿಗೆ ತಾನು ಗೆದ್ದಿರುವ ಟ್ರೋಫಿ ಎಷ್ಟು ಮೌಲ್ಯಯುತ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಅದನ್ನು ಗೆಲ್ಲಲು ಅವರು ಪಟ್ಟಿರುವ ಪಾಡು, ಅದರ ಹಿಂದಿನ ನೋವು, ಒಂದೊಂದು ಟ್ರೋಫಿಯೂ ಹೇಳುವ ಒಂದೊಂದು ಕಥೆ.. ಆಟಗಾರರು ಅದನ್ನು ಮಾರುತ್ತಾರೆಂದರೆ ಅವರು ಸಂಪೂರ್ಣ ದಿವಾಳಿಯಾಗದ ಹೊರತು ಸಾಧ್ಯವಿಲ್ಲ. ಆದರೆ ಈ ಹುಡುಗ ತನ್ನ ದೇಶ ಕಷ್ಟದಲ್ಲಿದೆ ಎಂದು ಅಷ್ಟೂ ಟ್ರೋಫಿಗಳನ್ನು ಮಾರಿದ್ದಾರೆ.
ಟ್ರೋಫಿಗಳನ್ನು ಬೇಕಾದರೆ ಮತ್ತೆ ಗೆಲ್ಲಬಹುದು. ಆದರೆ ದೇಶ ಇಂತಹ ಸ್ಥಿತಿಯಲ್ಲಿರುವಾಗ ತಾನು ಸೋಮಾರಿಯಂತೆ ಸುಮ್ಮನಿರಲು ಸಾಧ್ಯವಿಲ್ಲ. ಆದ್ದರಿಂದಲೇ ಅಷ್ಟನ್ನೂ ನಾನು ಮಾರಿದ್ದೇನೆ. ದಯವಿಟ್ಟು ನೀವೂ ಕೂಡ ಈ ಸಮಯದಲ್ಲಿ ಯಾವುದೇ ರೀತಿಯಲ್ಲಾದರೂ ದೇಶದ ನೆರವಿಗೆ ನಿಲ್ಲಿ ಎಂದು ಅರ್ಜುನ್ ಕೇಳಿಕೊಂಡಿದ್ದಾರೆ.
ಜಾರ್ಖಂಡ್ ಕ್ರಿಕೆಟಿಗ ಶಹಬಾಜ್ ನದೀಂ ಮನೆಮನೆಗೆ ಆಹಾರ ಪದಾರ್ಥ ಹಂಚಿರುವುದು, ಸೌರವ್ ಗಂಗೂಲಿ ಸಾವಿರಾರು ಕುಟುಂಬಗಳ ಊಟದ ಜವಾಬ್ದಾರಿಯನ್ನು ಹೊತ್ತಿರುವುದು. ಗೌತಮ್ ಗಂಭೀರ್ ತನ್ನ 2 ವರ್ಷದ ವೇತನ, ಸಂಸದರ ನಿಧಿ ಸೇರಿ ಹೆಚ್ಚುಕಡಿಮೆ 2.50 ಕೋಟಿ ರೂ. ನೀಡಿರುವುದನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಬಹುದು.